
ಬೆಂಗಳೂರು: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ (ಸಂಘಟನೆ) ಮತ್ತು ರಣದೀಪ್ ಸಿಂಗ್ ಸುರ್ಜೆವಾಲಾ (ಕರ್ನಾಟಕ ಉಸ್ತುವಾರಿ) ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ್ದು, ಇತ್ತೀಚಿನ ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿದ್ದಾರೆಂದು ತಿಳಿದುಬಂದಿದೆ.
ಡಿಕೆ.ಶಿವಕುಮಾರ್ ಅವರು ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೆವಾಲಾ ಅವರನ್ನು ಮಂಗಳವಾರ ರಾತ್ರಿ ಭೇಟಿ ಮಾಡಿದ್ದು, ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ.
ಮಾತುಕತೆ ವೇಳೆ ಡಿಕೆ.ಶಿವಕುಮಾರ್ ಅವರು, ಅಧಿಕಾರ ಹಂಚಿಕೆ ಒಪ್ಪಂದವನ್ನು ಗೌರವಿಸಬೇಕು ಮತ್ತು 2025 ರ ಅಕ್ಟೋಬರ್‌ನಲ್ಲಿ ತಮ್ಮ ಎರಡೂವರೆ ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ನಂತರ ಸಿದ್ದರಾಮಯ್ಯ ಅಧಿಕಾರ ತ್ಯಜಿಸಬೇಕು ಎಂದು ಒತ್ತಾಯಿಸಿದರು ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಹೀಗಾಗಿಯೇ ಪಕ್ಷದ ಇಬ್ಬರು ಹಿರಿಯ ನಾಯಕರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿಲ್ಲ ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮುನ್ನ ಡಾ. ಜಿ.ಪರಮೇಶ್ವರ್ ಅವರು ಇಬ್ಬರು ನಾಯಕರೊಂದಿಗೂ ಬುಧವಾರ ಮಾತುಕತೆ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.
ಮಾತುಕತೆ ವೇಳೆ ರನ್ಯಾ ರಾವ್ ಚಿನ್ನದ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಮೇಶ್ವರ ಅವರಿಗೆ ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳ ಮೇಲಿನ ಇತ್ತೀಚಿನ ಇಡಿ ದಾಳಿ ಕುರಿತು ಚರ್ಚೆಗೆ ನಡೆಸಿರಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈ ಹಿಂದೆ ಇಡಿ ದಾಳಿ ಕುರಿತು ಹೇಳಿಕೆ ನೀಡಿದ್ದ ಡಿಕೆ.ಶಿವಕುಮಾರ್ ಅವರು, ನಟಿ ರನ್ಯಾ ರಾವ್ ಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು 25 ಲಕ್ಷದ ಗಿಫ್ಟ್ ಕೊಟ್ಟಿದ್ದಾರೆಂದು ಹೇಳಿದ್ದರು. ಈ ಹೇಳಿಗೆ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಪರಮೇಶ್ವರ್ ಅವರು ಹೈಕಮಾಂಡ್ ಭೇಟಿ ಮಾಡಿದ್ದರು. ಇದೀಗ ಡಿಕೆ.ಶಿವಕುಮಾರ್ ಅವರೂ ಭೇಟಿ ಮಾಡಿದ್ದು, ಪ್ರಕರಣ ಸಂಬಂಧ ಮಾತುಕತೆ ನಡೆಸಿರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಇನ್ನು ಎಂಎಲ್‌ಸಿ ನಾಲ್ಕು ಸ್ಥಾನಗಳು ಏಳು ತಿಂಗಳಿನಿಂದ ಖಾಲಿಯಾಗಿರುವುದರಿಂದ, ವೇಣುಗೋಪಾಲ್ ಮತ್ತು ಸುರ್ಜೆವಾಲಾ ಅವರು ಆಕಾಂಕ್ಷಿಗಳನ್ನು ಭೇಟಿಯಾಗಿ, ಮಾತುಕತೆ ನಡೆಸಿದ್ದಾರೆಂದು ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ.
ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೈಕಮಾಂಡ್ ಭರವಸೆ ನೀಡಿದೆ. ಪಕ್ಷದ ಸದಸ್ಯರಲ್ಲದ ಮೂವರು ನಾಮನಿರ್ದೇಶಿತರ ಹೆಸರುಗಳನ್ನು ಪಕ್ಷದ ಮುಖಂಡರು ವಿರೋಧಿಸುತ್ತಿರುವುದರಿಂದ ಮತ್ತು ಮುಖ್ಯಮಂತ್ರಿಗಳು ತಮ್ಮ ಆಯ್ಕೆಯಲ್ಲಿ ನಿಲುವನ್ನು ಬದಲಾಯಿಸಿಕೊಳ್ಳುತ್ತಿರುವುದರಿಂದ ಘೋಷಣೆ ವಿಳಂಬವಾಗುತ್ತಿದೆ ಎಂದು ತಿಳಿಸಿದ್ದಾರೆ.
Advertisement