

ಬೆಂಗಳೂರು: ಯಾವುದೇ ಸೂಚನೆ ಇಲ್ಲದೆ, ಇದ್ದಕ್ಕಿದ್ದಂತೆ ಬೆಂಗಾವಲು ಭದ್ರತೆಯನ್ನು ವಾಪಸ್ ಪಡೆದ ರಾಜ್ಯ ಸರ್ಕಾರದ ವಿರುದ್ಧ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿಯವರು ಆಕ್ರೋಶ ವ್ಯಕ್ತಪಡಿಸಿದ್ದು, ತುರ್ತಾಗಿ ಭದ್ರತೆ ಪುನಃಸ್ಥಾಪಿಸುವಂತೆ ಆಗ್ರಹಿಸಿದ್ದಾರೆ.
ಈ ಸಂಬಂಧ ಸಭಾಪತಿ, ಸಿಎಂ, ಗೃಹ ಸಚಿವ, ಮುಖ್ಯಕಾರ್ಯದರ್ಶಿ ಹಾಗೂ ಡಿಜಿಪಿಯವರಿಗೆ ಪ್ರತ್ಯೇಕವಾಗಿ ಪತ್ರ ಬರೆದಿರುವ ಅವರು, ನಾನು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕನಾಗಿದ್ದು, ಕೆಲವು ತಿಂಗಳಿಂದ ನನ್ನ ವಿರುದ್ಧ ರಾಜಕೀಯ ದ್ವೇಷದ ಸ್ವರೂಪದಲ್ಲಿ ನಡೆಯುತ್ತಿರುವ ಘಟನೆಗಳು ನನ್ನ ಹಾಗೂ ನನ್ನ ಕುಟುಂಬದ ಜೀವಭದ್ರತೆ ಬಗ್ಗೆ ಗಂಭೀರ ಆತಂಕವನ್ನು ಉಂಟುಮಾಡಿವೆ ಎಂದು ಹೇಳಿದ್ದಾರೆ.
ಇದಕ್ಕೆ ನಿದರ್ಶನವಾಗಿ ಮೇ 21ರಂದು ಚಿತ್ತಾಪುರ ಸರಕಾರಿ ಅತಿಥಿ ಗೃಹದಲ್ಲಿ ನನ್ನನ್ನು ಹೊರಬರದಂತೆ ಗೃಹ ಬಂಧನದಲ್ಲಿಟ್ಟಂತಹ ಘಟನೆ ನಡೆದಿದೆ. ಈ ಕುರಿತು ನಾನು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ, ದೂರು ದಾಖಲಿಸಿಲ್ಲ ಮತ್ತು ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ಷೇಪಿಸಿದ್ದಾರೆ.
ಇದಕ್ಕೂ ಮೀರಿ, ಕೆಲವು ದಿನಗಳಿಂದ ಅಪರಿಚಿತರಿಂದ ಜೀವ ಬೆದರಿಕೆ ಕರೆಗಳು ಬರುತ್ತಿದ್ದು, ಜಾಲತಾಣಗಳಲ್ಲಿ ನಿಂದನಾತ್ಮಕ ಹಾಗೂ ಬೆದರಿಕೆ ಹಾಕುವ ಪೋಸ್ಟ್ ಗಳು ಮರುಕಳಿಸುತ್ತಿವೆ. ಈ ಹಿನ್ನೆಲೆಯಲ್ಲಿ ನಾನು ಆತಂಕಗೊಂಡಿದ್ದೇನೆ. ಇಂತಹ ಸ್ಥಿತಿಯಲ್ಲಿ ನನ್ನ ನಿವಾಸಕ್ಕೆ ನಿಯೋಜಿಸಿದ್ದ ಕಾವಲುಪಡೆಯನ್ನು ಮುನ್ಸೂಚನೆ ಇಲ್ಲದ ಹಾಗೂ ಕಾರಣವಿಲ್ಲದೆ ಹಿಂದಕ್ಕೆ ಕರೆಸಿಕೊಳ್ಳಲಾಗಿದೆ. ಈ ಕ್ರಮವು ರಾಜಕೀಯ ಪ್ರೇರಿತವಾಗಿ ನಡೆದಿರುವಂತೆ ತೋರುತ್ತಿದ್ದು, ಇದು ದ್ವೇಷದ ರಾಜಕಾರಣದ ಪ್ರತಿಫಲವೆಂದು ನನಗೆ ಅನಿಸುತ್ತಿದೆ.
ಇತ್ತೀಚೆಗೆ ಶಿವರಾಜ ಮುತ್ತಣ್ಣನವರ್ ಎಂಬವರು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ‘ಕುರುಬರಿಗೆ ಎಸ್.ಟಿ. ಮೀಸಲಾತಿ ನೀಡುವುದನ್ನು ವಿರೋಧಿಸಿದರೆ ಛಲವಾದಿ ನಾರಾಯಣಸ್ವಾಮಿಯನ್ನು ಜೀವಂತ ಸುಟ್ಟು ಹಾಕುತ್ತೇನೆ’ ಎಂದು ಭಯಾನಕವಾಗಿ ಬರೆದು ಸಾರ್ವಜನಿಕವಾಗಿ ಪೋಸ್ಟ್ ಮಾಡಿದ್ದಾರೆ. ಈ ಹೇಳಿಕೆಗಳು ನನ್ನ ಜೀವಕ್ಕೆ ನೇರ ಬೆದರಿಕೆಯಾಗಿದೆ ಮತ್ತು ಕಾನೂನು ಕ್ರಮಕ್ಕೆ ಒಳಪಟ್ಟಂತಹವುಗಳಾಗಿವೆ.
ಈ ಹಿನ್ನೆಲೆಯಲ್ಲಿ ಸರಕಾರದಿಂದ ಏಕಾಏಕಿ ನನ್ನ ನಿವಾಸಕ್ಕೆ ಒದಗಿಸಿದ್ದ ಭದ್ರತೆಯನ್ನು ಹಿಂಪಡೆದಿರುವುದು ಅಸಮಂಜಸ ಹಾಗೂ ಅನ್ಯಾಯಕರ. ಇಂತಹ ಕ್ರಮಗಳು ನನ್ನ ವಿರುದ್ಧ ಷಡ್ಯಂತ್ರ ಮತ್ತು ದ್ವೇಷದ ರಾಜಕಾರಣ ನಡೆಯುತ್ತಿರುವ ಅನುಮಾನವನ್ನು ಬಲಪಡಿಸುತ್ತಿವೆ. ವಿಪಕ್ಷದ ನಾಯಕನಾಗಿ ನನ್ನ ಸುರಕ್ಷತೆ ಸರಕಾರದ ನೈತಿಕ ಹಾಗೂ ಕಾನೂನುಬದ್ಧ ಜವಾಬ್ದಾರಿಯಾಗಿದೆ ಎಂದು ತಿಳಿಸಿದ್ದಾರೆ.
ಆದ್ದರಿಂದ ನನ್ನ ನಿವಾಸಕ್ಕೆ ಹಿಂದಿನಂತೆಯೇ ಭದ್ರತೆಯನ್ನು ತಕ್ಷಣವೇ ಪುನಃ ನಿಯೋಜಿಸಬೇಕು. ನನ್ನ ಜೀವಕ್ಕೆ ಬೆದರಿಕೆ ನೀಡಿದ ಶಿವರಾಜ ಮುತ್ತಣ್ಣನವರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ, ಮುಂದಿನ ದಿನಗಳಲ್ಲಿ ನನ್ನ ಹಾಗೂ ನನ್ನ ಕುಟುಂಬದ ಜೀವ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸರಕಾರದ ಗಮನಕ್ಕೆ ತರಬೇಕೆಂದು ಹಾಗೂ ಅಗತ್ಯ ಸೂಚನೆ ನೀಡಬೇಕೆಂದು ಮನವಿ ಮಾಡಿದ್ದಾರೆ.
Advertisement