

ಬೆಂಗಳೂರು: ನವೆಂಬರ್ ಕ್ರಾಂತಿ..ನಾಯಕತ್ವ ಬದಲಾವಣೆ ಕುರಿತು ಸದ್ದು ಗದ್ದಲದ ನಡುವಲ್ಲೇ ಸಚಿವ ಸತೀಶ್ ಜಾರಕಿಹೊಳಿಯವರು ದಿಢೀರ್ ನವದೆಹಲಿಗೆ ತೆರೆಳುತ್ತಿದ್ದು, ಈ ಭೇಟಿ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ದೆಹಲಿಗೆ ತೆರಳುತ್ತಿರುವ ಸತೀಶ್ ಜಾರಕಿಹೊಳಿಯವರು, ಮೂರು ದಿನಗಳ ಕಾಲ ಅಲ್ಲಿಯೇ ತಂಗಲಿದ್ದಾರೆ. ಈ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆಂದು ತಿಳಿದುಬಂದಿದೆ.
ಸತೀಶ್ ಜಾರಕಿಹೊಳಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಪ್ತರಾಗಿದ್ದು, ದೆಹಲಿ ಭೇಟಿ ವೇಳೆ ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಬೇಡಿಕೆ ಇಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಉಪಮುಖ್ಯಮಂತ್ರಿ ಮತ್ತು ಹಾಲಿ ಕೆಪಿಸಿಸಿ ಮುಖ್ಯಸ್ಥ ಡಿಕೆ ಶಿವಕುಮಾರ್ ಅವರು ನವೆಂಬರ್ 11 ರಂದು ರಾಷ್ಟ್ರ ರಾಜಧಾನಿಗೆ ಭೇಟಿ ನೀಡಲಿದ್ದು, ಇದಕ್ಕೂ ಮುನ್ನ ಸತೀಶ್ ಅವರು ದೆಹಲಿಗೆ ಭೇಟಿ ನೀಡಿರುವುದು ಕುತೂಹಲ ಸೃಷ್ಟಿಸಿದೆ.
ಹೈಕಮಾಂಡ್ ಕೆಪಿಸಿಸಿ ಹುದ್ದೆ ನೀಡಿದ್ದೇ ಆದರೆ, ಸತೀಶ್ ಅವರು ಸಚಿವ ಸ್ಥಾನ ತ್ಯಾಗ ಮಾಡಲು ಸಿದ್ಧರಿದ್ದು, ಈಗಾಗಲೇ ಈ ಸಂದೇಶವನ್ನು ಖರ್ಗೆಯವರಿಗೆ ತಲುಪಿಸಿದ್ದಾರೆಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ.
ನವೆಂಬರ್ 14 ರಂದು ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶದ ನಂತರ ಸಿದ್ದರಾಮಯ್ಯ ದೆಹಲಿಗೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಸತೀಶ್ ಅವರ ಹೈಕಮಾಂಡ್ ನಾಯಕರೊಂದಿಗಿನ ಸಭೆ ಮಹತ್ವ ಪಡೆದುಕೊಂಡಿದೆ.
ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರ ಸಂದೇಶವನ್ನು ಸತೀಶ್ ಹೈಕಮಾಂಡ್‌ಗೆ ತಿಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಏತನ್ಮಧ್ಯೆ, ಸತೀಶ್ ಜಾರಕಿಹೊಳಿಯವರ ದೆಹಲಿ ಭೇಟಿಯನ್ನು ರಾಜಕೀಯಗೊಳಿಸಬಾರದು ಎಂದು ಡಿಕೆ.ಶಿವಕುಮಾರ್ ಅವರು ಹೇಳಿದ್ದಾರೆ.
ರಾಜಕಾರಣಿಗಳು ಅನೇಕ ಕಾರ್ಯಕ್ರಮಗಳಿಗಾಗಿ ದೆಹಲಿಗೆ ಭೇಟಿ ನೀಡುತ್ತಾರೆ. ನಾನು ನವೆಂಬರ್ 5 ಮತ್ತು 6 ರಂದು ಬಿಹಾರಕ್ಕೆ ಪ್ರಯಾಣಿಸುತ್ತಿದ್ದೇನೆ. ಕೇಂದ್ರ ನಗರಾಭಿವೃದ್ಧಿ ಸಚಿವರು ನನ್ನನ್ನು ಸಭೆಗೆ ಕರೆದಿದ್ದಾರೆ. ನಂತರ ಕಾವೇರಿ ಜಲ ನ್ಯಾಯಮಂಡಳಿ ತೀರ್ಪು ಇದೆ. ಈ ಭೇಟಿಗಳನ್ನು ರಾಜಕೀಯಗೊಳಿಸಬಾರದು ಎಂದು ತಿಳಿಸಿದ್ದಾರೆ.
ಏತನ್ಮದ್ಯೆ ಖರ್ಗೆ ಸತೀಶ್ ಅವರಿಗೆ ಅಪಾಯಿಂಟ್ಮೆಂಟ್ ನೀಡಿದ್ದರ ಕುರಿತು ಪ್ರತಿಕ್ರಿಯೆ ನೀಡಿರುವ ಆರ್‌ಡಿಪಿಆರ್ ಮತ್ತು ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು, ಇದು ಯಾವುದೇ ರಾಜಕೀಯ ಬೆಳವಣಿಗೆಗೆ ಸಂಬಂಧಿಸಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಎಐಸಿಸಿ ಅಧ್ಯಕ್ಷರಲ್ಲದಿದ್ದರೆ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸತೀಶ್ ಜಾರಕಿಹೊಳಿಗೆ ಅಪಾಯಿಂಟ್‌ಮೆಂಟ್ ನೀಡುತ್ತಾರೆಯೇ? ಅವರ ದೆಹಲಿ ಭೇಟಿಯ ಹಿಂದೆ ಅಧಿಕೃತ ಕೆಲಸಗಳನ್ನು ಹೊರತುಪಡಿಸಿ ಯಾವುದೇ ರಹಸ್ಯ ಕಾರ್ಯಸೂಚಿ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ನಾಯಕತ್ವ ಬದಲಾವಣೆ ಕುರಿತು "ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರ ಮಾತುಗಳೇ ಅಂತಿಮ. ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ. ಶಿವಕುಮಾರ್ ಅವರು ಹೈಕಮಾಂಡ್ ಆದೇಶಕ್ಕಾಗಿ ಕಾಯುತ್ತಿರುವುದಾಗಿ ಮತ್ತು ಅದನ್ನು ಪಾಲಿಸುವುದಾಗಿಯೂ ಹೇಳಿದ್ದಾರೆ. ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸುವ ಮೂಲಕ ಪಕ್ಷಕ್ಕೆ ಅವರು ಮಹತ್ವದ ಕೊಡುಗೆ ನೀಡಿದ್ದಾರೆ.
ಕೆಸಿ ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಅವರೊಂದಿಗೆ ಚರ್ಚಿಸಿ ಅಂತಿಮವಾಗಿ ಹೈಕಮಾಂಡ್‌ನ ಸೂಚನೆಗಳನ್ನು ಪಾಲಿಸುತ್ತಾರೆ. ಏನು ಆಗಬೇಕೋ ಅದು ಸೂಕ್ತ ಸಮಯದಲ್ಲಿ ನಡೆಯುತ್ತದೆ, ಏಕೆಂದರೆ ಶಿವಕುಮಾರ್ ಅವರು ತಮ್ಮ ಹುದ್ದೆಗೆ (ಕೆಪಿಸಿಸಿ ಅಧ್ಯಕ್ಷ) ಅಂಟಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದರು.
ಈ ನಡುವೆ ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ವಸತಿ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಅವರು, ಸಿದ್ದರಾಮಯ್ಯ 2028 ರವರೆಗೆ ಸಿಎಂ ಆಗಿ ಮುಂದುವರಿಯುತ್ತಾರೆ. ನಂತರ ಶಿವಕುಮಾರ್ ಸಿಎಂ ಆಗಬಹುದು ಎಂದು ಹೇಳಿದ್ದಾರೆ.
ಇಬ್ಬರೂ 136 ಸ್ಥಾನಗಳೊಂದಿಗೆ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ್ದಾರೆ. ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷ ಹುದ್ದೆಗಳು ಖಾಲಿ ಇಲ್ಲ ಎಂದು ತಿಳಿಸಿದ್ದಾರೆ
Advertisement