

ಬೆಂಗಳೂರು: ಬೆಂಗಳೂರು ಟೆಕ್ ಶೃಂಗಸಭೆ ನಮ್ಮ ಬೆಂಗಳೂರು ನಗರಕ್ಕೆ ಮತ್ತೊಂದು ಜಾಗತಿಕ ಮುಜುಗರವಾಗುವುದಿಲ್ಲ ಎಂದು ಕಾಂಗ್ರೆಸ್ ಸರ್ಕಾರ ಗ್ಯಾರೆಂಟಿ ನೀಡುತ್ತದೆಯೇ? ಎಂದು ಸಚಿವ ಪ್ರಿಯಾಂಕ್ ಖರ್ಗೆಯವರಿಗೆ ಬಿಜೆಪಿ ಪ್ರಶ್ನಿಸಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸರಣಿ ಪೋಸ್ಟ್ ಮಾಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ಬಗ್ಗೆ ಟೀಕಿಸುವ ಹೊರತಾಗಿಯೂ ತಮಗೆ ಒಂದು ಖಾತೆಯ ಜವಾಬ್ದಾರಿ ಇದೆ ಎಂದು ಕಡೆಗೂ ನೆನಪಿಸಿಕೊಂಡಿದ್ದಕ್ಕೆ ಸಂತೋಷ ಎಂದು ವ್ಯಂಗ್ಯವಾಡಿದ್ದಾರೆ.
ಈಗಲಾದರೂ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ.ಶಿವಕುಮಾರ್ ಅವರಿಗೆ ಪತ್ರ ಬರೆದು, ಬೆಂಗಳೂರು ಟೆಕ್ ಸಮ್ಮಿಟ್ ಗೆ ಆಗಮಿಸುವ ಜಾಗತಿಕ ಪ್ರತಿನಿಧಿಗಳು ಪ್ರಯಾಣಿಸಬೇಕಾದ ಗುಂಡಿ ಬಿದ್ದ, ಹೊಂಡ ತುಂಬಿದ, ಕಸದಿಂದ ತುಂಬಿ ತುಳುಕುವ ರಸ್ತೆಗಳನ್ನು ಸರಿಪಡಿಸಲು ಮನವಿ ಮಾಡುವರೇ? ಬೆಂಗಳೂರು ಟೆಕ್ ಶೃಂಗಸಭೆ ನಮ್ಮ ಬೆಂಗಳೂರು ನಗರಕ್ಕೆ ಮತ್ತೊಂದು ಜಾಗತಿಕ ಮುಜುಗರವಾಗುವುದಿಲ್ಲ ಎಂದು ಕಾಂಗ್ರೆಸ್ ಸರ್ಕಾರ ಗ್ಯಾರೆಂಟಿ ನೀಡುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.
ಕಳೆದ 2.5 ವರ್ಷಗಳಿಂದ, ಈ ನಾಲಾಯಕ್ ಕಾಂಗ್ರೆಸ್ ಸರ್ಕಾರ ಬೆಂಗಳೂರಿನ ಮೂಲಸೌಕರ್ಯವನ್ನು ಹಾಳು ಮಾಡಿದೆ, ಟ್ರಾಫಿಕ್ ಸಮಸ್ಯೆ ಉಲ್ಬಣಗೊಳಿಸಿದೆ, ಹೂಡಿಕೆದಾರರನ್ನು ಮತ್ತು ಸ್ಟಾರ್ಟ್‌ಅಪ್‌ಗಳನ್ನು ಹೆದರಿಸಿ, ಬೆದರಿಸಿ, ಅವಮಾನ ಮಾಡಿ ಬೆಂಗಳೂರಿನ ವರ್ಚಸ್ಸಿಗೆ, ಜಾಗತಿಕ ಬ್ರ್ಯಾಂಡ್‌ಗೆ ಧಕ್ಕೆ ತಂದಿದೆ.
ಕಾಂಗ್ರೆಸ್ ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು, ಬೆಂಗಳೂರು ಟೆಕ್ ಸಮ್ಮಿಟ್ ನಲ್ಲಿ ಭಾಗಿಯಾಗಲು ಪ್ರಪಂಚದ ತಂತ್ರಜ್ಞಾನ ಲೋಕದ ದಿಗ್ಗಜರು ಬೆಂಗಳೂರಿಗೆ ಬರುವ ಮುನ್ನ ಇಲ್ಲಿನ ರಸ್ತೆಗಳನ್ನು ಸರಿಪಡಿಸಿ, ನಮ್ಮ ನಗರವನ್ನು ಮತ್ತೊಂದು ಸುತ್ತಿನ ಅವಮಾನದಿಂದ ಉಳಿಸಲಿ ಎನ್ನುವುದೇ ಜನರ ನಿರೀಕ್ಷೆ ಎಂದು ಹೇಳಿದ್ದಾರೆ.
ಮತ್ತೊಂದು ಪೋಸ್ಟ್ ನಲ್ಲಿ, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರೇ ಕಲ್ಯಾಣ ಕರ್ನಾಟಕದ 38 ಗ್ರಾಮದ ಮಹಿಳೆಯರಿಗೆ ಶಕ್ತಿ ಯೋಜನೆಯಿಂದ ಯಾವುದೇ ಪ್ರಯೋಜನವಿಲ್ಲ. ಯಾಕೆ ಪ್ರಯೋಜನವಿಲ್ಲ ಅಂದರೆ 38 ಗ್ರಾಮಗಳಿಗೆ ಬಸ್ಸೇ ಇಲ್ಲ. ಬಸ್ಸು ಯಾಕಿಲ್ಲ ಅಂದರೆ ಅಲ್ಲಿ ಯೋಗ್ಯ ರಸ್ತೆಯೇ ಇಲ್ಲ.
ವಿದೇಶಾಂಗ ನೀತಿಯಿಂದ ಹಿಡಿದು ಮಿಲಿಟರಿ ತಂತ್ರಗಾರಿಕೆವರೆಗೆ ಎಲ್ಲದರ ಬಗ್ಗೆ ಉದ್ದುದ್ದ ಬೊಗಳೆ ಭಾಷಣ ಬಿಗಿಯುವ ತಮಗೆ ಕಲ್ಯಾಣ ಕರ್ನಾಟಕದ ಹಳ್ಳಿಗಳ ಜನ ಬಸ್ಸಿಲ್ಲದೆ ದುಪ್ಪಟ್ಟು ಬೆಲೆ ತೆತ್ತು ಸ್ವಂತ ಗಾಡಿ, ಟಂಟಂ, ಜೀಪಿನಲ್ಲಿ ಪ್ರಯಾಣ ಮಾಡುವುದು ತಮಗೆ ಕಾಣುತ್ತಿಲ್ಲವೇ ಪ್ರಿಯಾಂಕ್ ಖರ್ಗೆ ಅವರೇ? ಎಂದು ಪ್ರಶ್ನಿಸಿದ್ದಾರೆ.
ಕಲ್ಯಾಣ ಕರ್ನಾಟಕದ ಜನರ ಮತ ಪಡೆದು, ಅಧಿಕಾರ ಅನುಭವಿಸಿ ತಮ್ಮ ಕುಟುಂಬದ ಕಲ್ಯಾಣ ಮಾಡಿಕೊಂಡಿರುವುದೇ ನಿಮ್ಮ ಏಕೈಕ ಸಾಧನೆ. ಆರ್'ಎಸ್ಎಸ್ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ಕೊಟ್ಟು ನಿಮ್ಮ ಈ ವೈಫಲ್ಯಗಳನ್ನು ಮರೆಮಾಚಬಹುದು, ಜನರನ್ನು ಯಾಮಾರಿಸಬಹುದು ಎಂದು ಕನಸು ಕಾಣಬೇಡಿ. ಕಲ್ಯಾಣ ಕರ್ನಾಟಕದ ಜನ ಖರ್ಗೆ ಕುಟುಂಬವನ್ನ ಮತ್ತು ಕಾಂಗ್ರೆಸ್ ಪಕ್ಷವನ್ನ ನಿಷೇಧ ಮಾಡುವ ದಿನ ಬಹಳ ದೂರವಿಲ್ಲ ಎಂದು ಎಚ್ಚರಿಸಿದ್ದಾರೆ.
ರೈತರ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿ, ಬೆಳಗಾವಿ, ಬಾಗಲಕೋಟೆಯಲ್ಲಿ ಕಬ್ಬು ಬೆಳೆಗಾರರು ಕಳೆದ 5-6 ದಿನಗಳಿಂದ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದರೂ ಸ್ಪಂದಿಸದ ರೈತ ವಿರೋಧಿ ಕಾಂಗ್ರೆಸ್ ಸರ್ಕಾರ, ರೈತರು ವಿಷ ಕುಡಿದು ಸಾಯುವ ಅಸಹಾಯಕ ಪರಿಸ್ಥಿಗೆ ದೂಡಿದೆ.
ಸ್ವಾಮಿ ಸಿಎಂ ಸಿದ್ದರಾಮಯ್ಯ ವರೇ, ರೈತರು ತಮ್ಮ ಕಷ್ಟವನ್ನು ಯಾರ ಬಳಿ ಹೇಳಿಕೊಳ್ಳಬೇಕು? ತಮ್ಮ ಬಳಿಯೋ ಅಥವಾ ಡಿಸಿಎಂ ಡಿಕೆ.ಶಿವಕುಮಾರ್ ಅವರ ಬಳಿಯೋ? ಅಸಲಿಗೆ ನಿಮ್ಮ ಸರ್ಕಾರ ಬದುಕಿದೆಯಾ ಅಥವಾ ಸತ್ತಿದೆಯಾ? ಬೆಳಗಾವಿಯಲ್ಲಿರುವ ನಿಮ್ಮ ಘಟಾನುಘಟಿ ನಾಯಕರುಗಳು, ಅಹಿಂದ ರಾಜಕಾರಣದ ವಾರಸುದಾರರು ಎಲ್ಲಿದ್ದಾರೆ ಸ್ವಾಮಿ?
ಬಿಹಾರ ಚುನಾವಣೆಗೆ ಹಣ ಹೊಂದಿಸುವಲ್ಲಿ ಬ್ಯುಸಿ ಆಗಿದ್ದಾರಾ? ಅಥವಾ ಯಾವುದಾದರೂ ಬ್ಯಾಂಕಿನ ಚುನಾವಣೆಯಲ್ಲಿ ಬ್ಯುಸಿ ಆಗಿದ್ದಾರಾ? ಅಥವಾ ಹೈಕಮಾಂಡ್ ಭೇಟಿ ಮಾಡಲು ದೆಹಲಿಗೆ ಹೋಗಿದ್ದಾರಾ? ನಿಮ್ಮ ನಾಲಾಯಕ್ ಕಾಂಗ್ರೆಸ್ ಸರ್ಕಾರಕ್ಕೆ ನಾಡಿನ ಅನ್ನದಾತರ ಶಾಪ ತಟ್ಟದೇ ಇರದು ಎಂದು ಕಿಡಿಕಾರಿದ್ದಾರೆ.
Advertisement