

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪರಸ್ಪರ ಮುನಿಸಿಕೊಂಡಿದ್ದಾರಾ? ವಿಜಯನಗರದ ಕೂಡ್ಲಿಗಿಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಇಬ್ಬರ ನಡುವಿನ ಎಲ್ಲವೂ ಸರಿಯಿಲ್ಲ ಎಂಬ ಬೆಳವಣಿಗೆಗಳು ಭಾನುವಾರ ಕಂಡು ಬಂದಿತು.
ನಾಯಕರ ನಡುವಿನ ಮುನಿಸು, ಮುಸುಕಿನ ಗುದ್ದಾಟ ಕಾರ್ಯಕ್ರಮದಲ್ಲಿ ಬಹಿರಂಗಗೊಂಡಿದ್ದು, ಈ ಬೆಳವಣಿಗೆ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಒಂದೇ ಕಾರ್ಯಕ್ರಮವಾದರೂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಇಬ್ಬರು ಪ್ರತ್ಯೇಕ ಚಾಪರ್ ಗಳಲ್ಲಿ ಬೇರೆ ಬೇರೆಯಾಗಿ ಆಗಮಿಸಿದರು. ಮೊದಲು ಸಿದ್ದರಾಮಯ್ಯ ವೇದಿಕೆಗೆ ಆಗಮಿಸಿದರೆ, 2 ನಿಮಿಷ ತಡವಾಗಿ ಡಿಕೆ ಶಿವಕುಮಾರ್ ಆಗಮಿಸಿದರು.
ಸಚಿವರಾದ ಸಂತೋಷ ಲಾಡ್, ಜಮೀರ್ ಅಹಮ್ಮದ್ ಖಾನ್ ಸೇರಿದಂತೆ ಕೆಲ ನಾಯಕರು ಸಿದ್ದರಾಮಯ್ಯ ಅವರನ್ನು ವೇದಿಕೆಗೆ ಕರೆತಂದರೆ, ಇತ್ತ ಡಿಕೆ ಶಿವಕುಮಾರ್ ಅವರನ್ನು ಕೂಡ್ಲಿಗಿ ಶಾಸಕ ಡಾ. ಶ್ರೀನಿವಾಸ್ ವೇದಿಕೆಗೆ ಕರೆತಂದರು.
ವೇದಿಕೆಗೆ ಬಂದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಪಕ್ಕದಲ್ಲೇ ಹಾಕಿದ್ದ ಕುರ್ಚಿಯಲ್ಲಿ ಕುಳಿತರು. ಆದರೆ ಅರ್ಧಗಂಟೆ ಕಳೆದರೂ ಇಬ್ಬರು ಮಾತನಾಡಲಿಲ್ಲ. ವೇದಿಕೆ ಮೇಲೆ ಇಬ್ಬರ ಮುನಿಸು ಸ್ಪಷ್ಟವಾಗಿ ಕಂಡು ಬಂದಿತ್ತು.
ಇಬ್ಬರ ನಡುವಿನ ಮುನಿಸು ಕುರಿತು ಈ ಹಿಂದೆಯೂ ಹಲವು ಪ್ರಶ್ನೆಗಳು ಎದ್ದಿತ್ತು. ಈ ವೇಳೆ ಇಬ್ಬರು ಜೊತೆಯಾಗಿ ಕೈ ಕೈಹಿಡಿದು ನಿಂತು ಉತ್ತರ ನೀಡಿದ್ದರು. ಇದೀಗ ಮಚ್ಚೆ ಉಹಾಪೋಹಗಳು ಹರಿದಾಡುತ್ತಿದೆ.
ರಾಜ್ಯದಲ್ಲಿ ಅಧಿಕಾರ ಹಂಚಿಕೆ, ನವೆಂಬರ್ ಕ್ರಾಂತಿ ಸೇರಿದಂತೆ ಹಲವು ವಿಚಾರಗಳು ಚರ್ಚೆಯಾಗುತ್ತಿದ್ದು, ಇದರ ಬೆನ್ನಲ್ಲೇ ನವೆಂಬರ್‌ನಲ್ಲಿ ಯಾವುದೇ ಕ್ರಾಂತಿ ಇಲ್ಲ, ಸಿದ್ದರಾಮಯ್ಯ ನವರು ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಈ ಹಿನ್ನಲೆಯಲ್ಲಿ ಇಬ್ಬರೂ ಮುನಿಸಿಕೊಂಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
Advertisement