

ಬೆಂಗಳೂರು: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಭರ್ಜರಿ ಗೆಲುವು ಸಾಧಿಸಿದ್ದು, ಇದರ ಬೆನ್ನಲ್ಲೇ ಕಾಂಗ್ರೆಸ್ ತನ್ನ 'ವೋಟ್ ಚೋರಿ' ಆರೋಪಗಳನ್ನು ಪುನರುಚ್ಚರಿಸಿದೆ.
ಭಾರತೀಯ ಚುನಾವಣಾ ಆಯೋಗದ (ಇಸಿಐ) ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಎಂಎಲ್‌ಸಿ ಬಿ ಕೆ ಹರಿಪ್ರಸಾದ್ ಅವರು, ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕೆಡವುವಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿದ ಚುನಾವಣಾ ಆಯೋಗವನ್ನು ನಾನು ಅಭಿನಂದಿಸುತ್ತೇನೆಂದು ವ್ಯಂಗ್ಯವಾಡಿದ್ದಾರೆ.
ಲಕ್ಷಾಂತರ ಮತದಾರರನ್ನು ತೆಗೆದುಹಾಕಲಾಗಿದೆ. ಫಲಿತಾಂಶದ ಕುರಿತು ಏನನ್ನು ನಿರೀಕ್ಷಿಸಲು ಸಾಧ್ಯ. ಇಲ್ಲಿ ಮತಗಳ್ಳತವಾಗಿದೆ ಅನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ. ಬಹಳ ಯೋಗ್ಯ, ಜ್ಞಾನಿ, ಜ್ಞಾನೇಶ ಎನ್ನುವ ಮನುಷ್ಯ ಚುನಾವಣೆ ನಡೆಸಿದ್ದಾನೆ. ಅವರಿಗೆ ಅಭಿನಂದನೆಗಳು. ಚುನಾವಣಾ ಆಯೋಗದಿಂದ ನಮಗೆ ಸೋಲಾಗಿದೆ ಎಂದು ಕಿಡಿಕಾರಿದರು.
ಚುನಾವಣಾ ಆಯೋಗವು ಬಿಜೆಪಿ ಮತ್ತು ಆರ್ಎಸ್ಎಸ್ ನ ಒಂದು ಘಟಕವಾಗಿ ಕೆಲಸ ಮಾಡುತ್ತಿದೆ. ಯಾರು ಪ್ರಜಾಪ್ರಭುತ್ವವನ್ನು ಪ್ರತಿನಿಧಿಸುತ್ತಾರೋ, ಯಾರು ಸಂವಿಧಾನದ ಬಗ್ಗೆ ಗೌರವ ಇಟ್ಟುಕೊಂಡಿದ್ದಾರೋ, ಯಾರು ಸಮಾನತೆ ಬಗ್ಗೆ ಗೌರವ ಇಟ್ಟುಕೊಂಡಿದ್ದಾರೋ ಅವರನ್ನು ಸೋಲಿಸುವ ಕೆಲಸ ಮಾಡಲಾಗಿದೆ. ಹಾಗಾಗಿ ಚುನಾವಣಾ ಆಯೋಗಕ್ಕೆ ಅಭಿನಂದನೆಗಳು ಎಂದು ಹೇಳಿದರು.
ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಜನಾದೇಶವನ್ನು ಸ್ವಾಗತಿಸಿದರು.
ಆದರೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮತ್ತು ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಈ ಫಲಿತಾಂಶವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸೋಲು-ಗೆಲುವು ಯಾವುದೇ ಆಟದ ಭಾಗವಾಗಿದೆ. ಆದರೆ, ಈ ಫಲಿತಾಂಶ ನಿಜವಾದ ಜನಾದೇಶ ಎಂಬುದು ನನಗೆ ಖಚಿತವಿಲ್ಲ ಎಂದು ತಿಳಿಸಿದ್ದಾರೆ.
ಎಐಸಿಸಿ ಕಾರ್ಯದರ್ಶಿ ಮನ್ಸೂರ್ ಖಾನ್ ಅವರು ಮಾತನಾಡಿ ನಾವು ಎನ್‌ಡಿಎ/ಬಿಜೆಪಿ ವಿರುದ್ಧ ಮಾತ್ರವಲ್ಲದೆ ಚುನಾವಣಾ ಆಯೋಗದ ವಿರುದ್ಧವೂ ಹೋರಾಡುತ್ತಿದ್ದೇವೆಂದು ಹೇಳಿದ್ದಾರೆ.
ಏತನ್ಮಧ್ಯೆ ಹರಿಪ್ರಸಾದ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ರಾಜಕೀಯ ವಿಶ್ಲೇಷಕರು, ಇದು ಹತಾಶೆಯಲ್ಲ. ಒಂದು ಸಂಕೇತವಾಗಿದೆ. ಮುಂದಿನ ದಿನಗಳಲಲಿ ಕಾಂಗ್ರೆಸ್ ಚುನಾವಣಾ ಸುಧಾರಣೆ ಕುರಿತ ತನ್ನ ಬೇಡಿಕೆಗಳನ್ನು ಮತ್ತಷ್ಟು ಹೆಚ್ಚಿಸಬಹುದು ಎಂದು ಹೇಳಿದ್ದಾರೆ.
ಈ ನಡುವೆ ಕಾಂಗ್ರೆಸ್ ತನ್ನ 'ವೋಟ್ ಚೋರಿ' ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದು, ಶನಿವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆಯನ್ನು ಆಯೋಜಿಸಿದೆ.
Advertisement