

ಬೆಂಗಳೂರು: ಬಿಹಾರದಲ್ಲಿ ಎನ್‌ಡಿಎಗೆ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನ ಕುರಿತು ಚರ್ಚೆಗಳು ಆರಂಭವಾಗಿವೆ. ಇದರ ಬೆನ್ನಲ್ಲೇ ನಾಯಕತ್ವ ಸ್ಥಾನದಲ್ಲಿ ನಾನೇ ಮುಂದುವರೆಯುತ್ತೇನೆಂದು ಬಿ.ವೈ.ವಿಜಯೇಂದ್ರ ಅವರು ಶನಿವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯಲ್ಲಿ ಎರಡು ವರ್ಷಗಳ ಪೂರೈಸಿದ ವಿಜಯೇಂದ್ರ ಅವರನ್ನು ಪಕ್ಷದ ಕಚೇರಿಯಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭಧಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ ಅವರು, ನನಗೂ ವಿಶ್ವಾಸ ಇದೆ, ಹೈಕಮಾಂಡ್ನಿಂದ ಸ್ಪಷ್ಟತೆ ಸಿಗುತ್ತೆ ಎಂಬ ವಿಶ್ವಾಸ ಇದೆ. ನನಗಂತೂ ಸ್ಪಷ್ಟತೆ ಸಿಕ್ಕಿದೆ. ರಾಜ್ಯಾಧ್ಯಕ್ಷ ಆಗಿ ನಾನು ಕೆಲಸ ಮಾಡುತ್ತಿದ್ದೇನೆ ಎಂದು ಪರೋಕ್ಷವಾಗಿ ತಾವೇ ಮುಂದುವರೆಯುವ ಬಗ್ಗೆ ಸುಳಿವು ನೀಡಿದರು.
ಬಿಹಾರದ ಗೆಲುವು ಕರ್ನಾಟಕದಲ್ಲಿ "ಭ್ರಷ್ಟ" ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಡಲು ಬಿಜೆಪಿಗೆ ಭಾರಿ ಶಕ್ತಿಯನ್ನು ನೀಡಿದೆ ಎಂದು ಹೇಳಿದರು.
ಈ ಹಿಂದೆ ನಮ್ಮ ಸರ್ಕಾರದ ವಿರುದ್ಧ ಶೇ.40 ಕಮಿಷನ್ ಆರೋಪ ಮಾಡಿ, ಅಧಿಕಾರದಿಂದ ಕೆಳೆಗಿಳಿಸಿದ್ದರು. ಇದೀಗ ಅವರ ಪಕ್ಶ ಗ್ಯಾರಂಟಿ ಯೋಜನೆಗಳಿಂದಲೇ ಸೋಲು ಕಂಡಿದೆ. ಇದೀಗ ಕೇಂದ್ರದತ್ತ ಬೆರಳು ತೋರಿಸುತ್ತಿದ್ದಾರೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಮತಗಳ್ಳತನ ಅಭಿಯಾನದ ಮೂಲಕ ಬಿಹಾರದಲ್ಲಿ ಅರಾಜಕತೆ ಸೃಷ್ಟಿಸಲು ಸಂಚು ರೂಪಿಸಿದ್ದಾರೆ.
ರಾಹುಲ್ ಗಾಂಧಿ ಐರನ್ ಲೆಗ್ ಅನ್ನೋದು ಸಾಬೀತಾಗಿದೆ. ಅವರು ಎಲ್ಲಿ ಕಾಲಿಡುತ್ತಾರೆಯೋ ಅಲ್ಲಿ ಅವರ ಪಕ್ಷ ಉದ್ಧಾರ ಆಗಲ್ಲ. ಇದಕ್ಕೆ ಬಿಹಾರ ಫಲಿತಾಂಶವೇ ಸ್ಪಷ್ಟ ಸಂದೇಶ. ಹಾಗಾಗಿ ರಾಹುಲ್ ಗಾಂಧಿ ದೇಶದಿಂದ ಮಾಯವಾಗಿದ್ದರು. ಬಿಜೆಪಿ ಅಭಿವೃದ್ಧಿ ಮಾಡುತ್ತಿರುವುದನ್ನು ನೋಡಿ ಅವರಿಗೆ ಸಹಿಸಲಾಗುತ್ತಿಲ್ಲ. ಅದಕ್ಕಾಗಿಯೇ ದೇಶದಲ್ಲಿ, ದೇಶದ ಹೊರಗೆ ಭಾರತ ವಿರೋಧಿ, ಬಿಜೆಪಿ ವಿರೋಧಿ ಹೇಳಿಕೆ ಕೊಡುತ್ತಾರೆ. ಅವರಿಗೆ ಸೂಕ್ತ ವಿಷಯಗಳು ಸಿಗದೇ ವೋಟ್ ಚೋರಿ ಎಂಬ ಖಾಲಿ ಡಬ್ಬಾ ಇಟ್ಟುಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ. ಬಿಹಾರ ಫಲಿತಾಂಶ ನಮಗೆ ಆನೆ ಬಲ ಕೊಟ್ಟಿದೆ. ಒಂದು ಸಂದೇಶವನ್ನೂ ಈ ಫಲಿತಾಂಶ ನೀಡಿದೆ ಎಂದು ತಿಳಿಸಿದರು.
ಶುಕ್ರವಾರ ಸಿಎಂ ಸಿದ್ದರಾಮಯ್ಯ ಬಿಡುಗಡೆ ಮಾಡಿದ 'ನೀರಿನ ಹೆಜ್ಜೆ' ಪುಸ್ತಕವು ಡಿಸಿಎಂ ಡಿಕೆ ಶಿವಕುಮಾರ್ ಅವರು ಬರೆದಿರುವ ಕೃತಿಯಲ್ಲ. ಬೇರೆಯವರು ಬರೆದ ಪುಸ್ತಕದ ಮೇಲೆ ಶಿವಕುಮಾರ್ ಅವರ ಚಿತ್ರವನ್ನು ಹಾಕಲಾಗಿದೆ. ಪುಸ್ತಕವನ್ನು ಹೊರತುಪಡಿಸಿ, ಜಲಸಂಪನ್ಮೂಲ ಸಚಿವರಾಗಿ ರಾಜ್ಯಕ್ಕೆ ಅವರ ಕೊಡುಗೆ ಏನು ಎಂದು ಪ್ರಶ್ನಿಸಿದರು.
Advertisement