

ಬೆಂಗಳೂರು: ನಾಯಕತ್ವ ಬದಲಾವಣೆ, ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ಎಲ್ಲವನ್ನೂ ತೀರ್ಮಾನ ಮಾಡುವುದು ಹೈಕಮಾಂಡ್ ಎಂದು ಹೇಳುವ ಮೂಲಕ ಸಚಿವ ಪರಮೇಶ್ವರ್ ಅವರಿಗೆ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಅವರು ಭಾನುವಾರ ತಿರುಗೇಟು ನೀಡಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾಧ್ಯಮಗಳಲ್ಲಿ ವರದಿ ನೋಡಿದ್ದೇನೆ. ಇದು ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ನಾಯಕರಿಗೆ ಬಿಟ್ಟ ವಿಚಾರ. ಹೀಗಾಗಿ ಅವರು ಯಾವ ತೀರ್ಮಾನ ಮಾಡಲಿದೆ ಎಂದು ಕಾದು ನೋಡೋಣ ಎಂದು ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಪ್ರಸ್ತಾಪವನ್ನು ಹೈಕಮಾಂಡ್ ಮುಂದೆ ಇಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿ, ಹೈಕಮಾಂಡ್ ತೀರ್ಮಾನ, ಸಲಹೆಯನ್ನು ಶಿವಕುಮಾರ್ ಅವರು ಕೇಳುತ್ತಾರೆ. ಶಿವಕುಮಾರ್ ಅವರು ಮಾತ್ರವಲ್ಲ, ಎಲ್ಲರೂ ಕೇಳುತ್ತಾರೆ. ಅದರಲ್ಲಿ ಯಾವುದೇ ಅನುಮಾನ ಬೇಡ. ಅಧ್ಯಕ್ಷ ಸ್ಥಾನದಲ್ಲೇ ಮುಂದುವರಿಯಬೇಕು ಎಂಬ ಆಸೆ ಶಿವಕುಮಾರ್ ಅವರಿಗಿಲ್ಲ. ಪಕ್ಷ ಮುಂದುವರಿಯಲು ಹೇಳಿದೆ, ಎಷ್ಟು ದಿನ ಅವಕಾಶ ನೀಡುತ್ತಾರೋ ಅಷ್ಟು ದಿನ ಪಕ್ಷದ ಕೆಲಸ ಮಾಡಿಕೊಂಡು ಇರುತ್ತಾರೆ ಎಂದು ತಿಳಿಸಿದರು.
ಬಿಹಾರ ಚುನಾವಣೆ ಕುರಿತು ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗೆಲುವು ಸೋಲು ಇದ್ದೇ ಇರುತ್ತದೆ. ಬಿಹಾರದಲ್ಲಿ ಚುನಾವಣೆಗೂ ಮುನ್ನ ಎನ್ ಡಿಎ ಸರ್ಕಾರ ಕರ್ನಾಟಕ ಗ್ಯಾರಂಟಿ ಯೋಜನೆ ಮಾದರಿಯಲ್ಲೇ ಅನುಷ್ಠಾನ ಮಾಡಿತು. ಹೀಗಾಗಿ ಮಹಿಳಾ ಮತದಾರರು ಎನ್ ಡಿಎ ಪರ ಒಲವು ತೋರಿದ್ದಾರೆ. 10 ಸಾವಿರ ರೂ. ಒಟ್ಟಿಗೆ ಮಹಿಳೆಯರ ಖಾತೆಗೆ ಹಾಕಿದ ಪರಿಣಾಮ ಹಾಗೂ ಚುನಾವಣೆ ಮುನ್ನ 47 ಲಕ್ಷ ಮತಗಳನ್ನು ಮತಪಟ್ಟಿಯಿಂದ ಕಿತ್ತು ಹಾಕಿದ್ದು ಪ್ರಮುಖ ಕಾರಣವಾಗಿದೆ. ಜನ ತೀರ್ಪು ನೀಡಿದ್ದು, ಅದನ್ನು ಸ್ವಾಗತಿಸುತ್ತೇವೆ. ನಮ್ಮ ಪಕ್ಷಕ್ಕೆ ಸೋಲು, ಗೆಲುವು ಹೊಸತಲ್ಲ. ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಾ ಪಕ್ಷ ಸಂಘಟನೆ ಮಾಡುತ್ತೇವೆ ಎಂದು ತಿಳಿಸಿದರು.
Advertisement