

ಬೆಂಗಳೂರು: ಸಂಪುಟ ಪುನಾರಚನಗೆ ಹೈಕಮಾಂಡ್ ಒಪ್ಪಿಗೆ ನೀಡಿದೆ ಎಂದರೆ, ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರ್ಥ. ಸಂಪುಟ ಪುನಾರಚನೆಯಾದರೆ ಮುಖ್ಯಮಂತ್ರಿ ಬದಲಾವಣೆಯಾಗುವುದಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಅವರು ಮಾರ್ಮಿಕವಾಗಿ ಹೇಳಿದ್ದಾರೆ.
ಸಚಿವ ಪುನಾರಚನೆ ಹಾಗೂ ಅಧಿಕಾರ ಹಂಚಿಕೆ ಕುರಿತ ಚರ್ಚೆಗಳ ನಡುವೆ ಗೃಹ ಸಚಿವ ಪರಮೇಶ್ವರ್ ಅವರು ನೀಡಿರುವ ಈ ಹೇಳಿಕೆ ತೀವ್ರ ಕುತೂಹಲ ಮೂಡಿಸಿದೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ಪುನಾರಚನೆಗೆ ಹೈಕಮಾಂಡ್ ತಾತ್ವಿಕ ಒಪ್ಪಿಗೆ ನೀಡಿದೆ ಎಂಬುದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಹಾಗಾದರೆ ಸಿಎಂ ಬದಲಾವಣೆ ಆಗಲ್ಲ ಎಂದು ಹೇಳಿದರು.
ಸಂಪುಟ ಪುನಾರಚನೆಯಾದರೆ ಒಳ್ಳೆಯದು. ಬಹಳ ದಿನಗಳಿಂದ ಶಾಸಕರ ಬೇಡಿಕೆಯೂ ಇದೆ. ಹಲವರಿಗೆ ಸಚಿವರಾಗಬೇಕು ಎಂಬ ಅಪೇಕ್ಷೆಯಿದೆ. ಸಂಪುಟ ಪುನಾರಚನೆಗೆ ಅವಕಾಶ ನೀಡಿದ್ದಾರೆಂದರೆ ಸಿಎಂ ಬದಲಾವಣೆ ಬಗ್ಗೆ ನೀವೇ ಊಹೆ ಮಾಡಿಕೊಳ್ಳಿ ಎಂದು ತಿಳಿಸಿದರು.
ಮುಖ್ಯಮಂತ್ರಿ ದೆಹಲಿಗೆ ಹೋಗುವಾಗ ಭೇಟಿ ಮಾಡಿದ್ದೆ. ಸಂಪುಟ ಪುನಾರಚನೆ ಅಥವಾ ಬೇರಿನ್ಯಾವುದೇ ಆಗಿರಲಿ ಎಲ್ಲವೂ ಮುಖ್ಯಮಂತ್ರಿಗಳು, ಹೈಕಮಾಂಡ್'ಗೆ ಗೊತ್ತಿರುತ್ತದೆ ಎಂದರು.
Advertisement