

ಬೆಂಗಳೂರು: ಮೇಕೆದಾಟು ಯೋಜನೆ ಅನುಷ್ಠಾನ ವಿಚಾರದಲ್ಲಿ ರಾಜ್ಯ ಸರ್ಕಾರ ರಾಜಕೀಯ ಮಾಡಬಾರದು. ಕೇಂದ್ರದ ಜೊತೆಗೆ ವಿಶ್ವಾಸದಲ್ಲಿ ಸೌಹಾರ್ದತೆಯಿಂದ ಕೆಲಸ ಮಾಡಬೇಕೆಂದು ಹಾವೇರಿ ಸಂಸದ ಮತ್ತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆ ಬಹಳ ವರ್ಷದ ರಾಜ್ಯದ ಜನರ ಕನಸಾಗಿದೆ. ಇದು 1996ರಿಂದ ಆರಂಭವಾಗಿದ್ದು. ನಾನು ನೀರಾವರಿ ಸಚಿವ ಆಗಿದ್ದಾಗ ಬಹಳಷ್ಟು ಪ್ರದೇಶ ಮುಳುಗಡೆ ಆಗುತ್ತದೆ ಅಂತ ಕೇಳಿಬಂದಿತ್ತು. ಅದನ್ನು ಬದಲಾವಣೆ ಮಾಡಿ ಡಿಪಿಆರ್ ಸಿದ್ದ ಪಡೆಸಿದ್ದೆವು. ಕಾಂಗ್ರೆಸ್ ನವರು ಪಾದಯಾತ್ರೆ ಮಾಡದಿದ್ದರೆ ಇಷ್ಟೋತ್ತಿಗೆ ಯೋಜನೆ ಒಂದು ಹಂತಕ್ಕೆ ಬರುತ್ತಿತ್ತು ಎಂದು ಆರೋಪಿಸಿದ್ದಾರೆ.
ಇವರು ಪಾದಯಾತ್ರೆ ಮಾಡಿದ್ದರಿಂದ ತಮಿಳುನಾಡಿನವರು ಮಿಸ್ ಲೀನಿಯಸ್ ಕೇಸ್ ಹಾಕಿದ್ದಾರೆ. ತಮಿಳುನಾಡು ಕೇಸ್ ನಿಲ್ಲುವುದಿಲ್ಲ ಎಂದು ನಮಗೆ ಗೊತ್ತಿದೆ. ಆದ್ದರಿಂದ ನಾವು ಬಹಳ ಬುದ್ದಿವಂತಿಕೆಯಿಂದ ಎಲ್ಲಾ ಹಂತಗಳನ್ನು ಮುಗಿಸಿಕೊಳ್ಳಬೇಕು. ಯಾಕೆಂದರೆ ಈಗ ನಡೆಯುವ ಬೆಳವಣಿಗೆಯಲ್ಲಿ ಏನಾದರೂ ವ್ಯತ್ಯಾಸವಾದರೆ ತಮಿಳುನಾಡಿನವರು ಮತ್ತೆ ಕೋರ್ಟ್ ಗೆ ಹೋಗುತ್ತಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಇದನ್ನು ಸಿಡಬ್ಲ್ಯುಸಿಯಲ್ಲಿ ಒಪ್ಪಿಗೆ ನೀಡಬೇಕಾದರೆ ಸಿಡಬ್ಲ್ಯುಎಂಎ ದಲ್ಲಿ ಒಪ್ಪಿಗೆ ನೀಡಬೇಕಾಗುತ್ತದೆ. ಅಪ್ರೂವಲ್ ಕೊಡುವಾಗ ಎಲ್ಲಿ ನಿಂತಿತ್ತೋ, ಅಲ್ಲಿಂದಲೇ ಪ್ರಾರಂಭ ಮಾಡಬೇಕು ಎಂದು ಮನವಿ ಮಾಡುತ್ತೇನೆ ಎಂದು ಹೇಳಿದರು.
ರಾಜ್ಯ ಸರ್ಕಾರ ಕೇಂದ್ರದ ಜೊತೆಗೆ ವಿಶ್ವಾಸದಲ್ಲಿ ಸೌಹಾರ್ದತೆಯಲ್ಲಿ ಈ ಮಹತ್ವದ ಯೋಜನೆಗೆ ಅನುಮತಿ ಪಡೆದರೆ ಮುಂದೆ ಕಾನೂನು ಹೋರಾಟದಲ್ಲಿ ಅನುಕೂಲವಾಗಲಿದೆ. ಇದರಲ್ಲಿ ರಾಜಕೀಯ ಬೆರೆಸಿದರೆ, ರಾಜಕೀಯ ಪ್ರತಿಷ್ಟೇ ಮಾಡಿದರೆ ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಮೆಕ್ಕೆಜೋಳ ಖರೀದಿಸಲಿ
ಮೆಕ್ಕೆಜೋಳವನ್ನು ಕರ್ನಾಟಕದ ಬಹುತೇಕ ಭಾಗದಲ್ಲಿ ಬೆಳೆಯುತ್ತಾರೆ. ಬೆಳೆಗೆ ಕೇಂದ್ರ ಸರ್ಕಾರ 2,400 ರೂ. ಬೆಂಬಲ ನಿಗದಿಪಡಿಸಿದೆ. ರಾಜ್ಯ ಸರ್ಕಾರವು ಹೆಚ್ಚಿನ ಬೆಲೆಗೆ ಮೆಕ್ಕೆಜೋಳವನ್ನು ಖರೀದಿಸಬೇಕು ಎಂದು ಹೇಳಿದರು.
ಧಿಕಾರಿಗಳು ಕೇಂದ್ರಕ್ಕೆ ವರದಿಯನ್ನು ಕಳುಹಿಸುತ್ತೇವೆ ಎಂದು ಹೇಳುತ್ತಾರೆ, ಆದರೆ ಅದು ಅನಗತ್ಯ. ರಾಜ್ಯ ಸರ್ಕಾರವೇ ಬೆಳೆ ಖರೀದಿಸಿದರೆ, ಕೇಂದ್ರವು ಅದನ್ನು ತಿರಸ್ಕರಿಸುವುದಿಲ್ಲ. ರಾಜ್ಯವು ಮೊದಲು ಬೆಳೆ ಖರೀದಿಸಿ ನಂತರ ಕೇಂದ್ರಕ್ಕೆ ವರದಿಯನ್ನು ಕಳುಹಿಸಿರುವ ಕುರಿತು ಅನೇಕ ಉದಾಹರಣೆಗಳಿವೆ ಎಂದು ಹೇಳಿದರು.
Advertisement