ಕಸ ಗುಡಿಸಲು 613 ಕೋಟಿ ರೂ.ವೆಚ್ಚದಲ್ಲಿ ಬಾಡಿಗೆ ಯಂತ್ರ: ಲೂಟಿ ಹೊಡೆಯಲು ಸರ್ಕಾರ ಹೊಸ ತಂತ್ರ..!

ಲೂಟಿ ಹೊಡೆಯುವುದಕ್ಕೆ ಅಂತಾನೇ ಕಾದು ಕುಳಿತಿರುವ ಸಿದ್ದರಾಮಯ್ಯ ಅವರ ಸರ್ಕಾರ 46 ರಸ್ತೆ ಗುಡಿಸುವ ಯಂತ್ರಗಳನ್ನು 7 ವರ್ಷಗಳಿಗೆ 613 ಕೋಟಿ ರೂ. ವ್ಯಯಿಸಿ ಗುತ್ತಿಗೆ ಪಡೆಯಲು ಮುಂದಾಗಿರುವುದು ನಿಜಕ್ಕೂ ಬೆಚ್ಚಿ ಬೀಳಿಸುವಂತದ್ದು.
File photo
ಸಂಗ್ರಹ ಚಿತ್ರ
Updated on

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಮುಖ್ಯ ಮತ್ತು ಉಪಮುಖ್ಯ ರಸ್ತೆಗಳ ಸ್ವಚ್ಛತೆಗಾಗಿ 613 ಕೋಟಿ ರೂ.ವೆಚ್ಚದಲ್ಲಿ ಬಾಡಿಗೆ ಯಂತ್ರ ಪಡೆಯಲು ರಾಜ್ಯ ಸರ್ಕಾರ ಮುಂದಾಗಿದ್ದು, ಲೂಟಿ ಹೊಡೆಯಲು ಹೊಸ ತಂತ್ರ ರೂಪಿಸಿದೆ ಎಂದು ಬಿಜೆಪಿ ಹಾಗೂ ಜೆಡಿಎಸ್ ವಾಗ್ದಾಳಿ ನಡೆಸಿವೆ.

ಬೆಂಗಳೂರಿನ ರಸ್ತೆಗಳನ್ನು ಗುಡಿಸಲು ಯಂತ್ರಗಳನ್ನು ಬಾಡಿಗೆಗೆ ಪಡೆಯುವ 613 ಕೋಟಿ ರೂ.ಗಳ ಒಪ್ಪಂದಕ್ಕೆ ರಾಜ್ಯ ಸಚಿವ ಸಂಪುಟ ಇತ್ತೀಚೆಗೆ ಅನುಮೋದನೆ ನೀಡಿತ್ತು.

ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿರುವ ಬಿಜೆಪಿ, ಅಧಿಕಾರಕ್ಕೆ ಬಂದಾಗಿನಿಂದ ಹಗರಣಗಳ ಹಳವಂಡಗಳಲ್ಲೇ ಬಿದ್ದು ಒದ್ದಾಡುತ್ತಿರುವ ಕಾಂಗ್ರೆಸ್ ಸರ್ಕಾರದ ಮತ್ತೊಂದು ಭಾರೀ ಹಗರಣ ಬಯಲಾಗಿದೆ.

ಲೂಟಿ ಹೊಡೆಯುವುದಕ್ಕೆ ಅಂತಾನೇ ಕಾದು ಕುಳಿತಿರುವ ಸಿದ್ದರಾಮಯ್ಯ ಅವರ ಸರ್ಕಾರ 46 ರಸ್ತೆ ಗುಡಿಸುವ ಯಂತ್ರಗಳನ್ನು 7 ವರ್ಷಗಳಿಗೆ 613 ಕೋಟಿ ರೂ. ವ್ಯಯಿಸಿ ಗುತ್ತಿಗೆ ಪಡೆಯಲು ಮುಂದಾಗಿರುವುದು ನಿಜಕ್ಕೂ ಬೆಚ್ಚಿ ಬೀಳಿಸುವಂತದ್ದು. ಮಾರುಕಟ್ಟೆ ದರದಂತೆ ಒಟ್ಟು 46 ಯಂತ್ರಗಳ ಖರೀದಿ ವೆಚ್ಚ ಸುಮಾರು 100 ಕೋಟಿ ಆಗಲಿದೆ. ಆದರೆ, ಲೂಟಿಕೋರ ಸರ್ಕಾರ 613 ಕೋಟಿ ರೂ. ವೆಚ್ಚದಲ್ಲಿ ಒಪ್ಪಂದ ಮಾಡಿಕೊಂಡು ನೂರಾರು ಕೋಟಿ ನುಂಗುವುದಕ್ಕೆ ಹೊಂಚು ಹಾಕಿ ಕುಳಿತಿದೆ. ಹಾಗಾದ್ರೆ, ಉಳಿದ ರೂ.500 ಕೋಟಿಗೂ ಅಧಿಕ ಹಣ ಎಲ್ಲಿ ಹೋಗುತ್ತಿದೆ? ಯಾರ ಜೇಬು ಸೇರುತ್ತೆ? ಎಂದು ಪ್ರಶ್ನಿಸಿದೆ.

File photo
ಕಸ ಸುರಿಯುವುದನ್ನು ತಪ್ಪಿಸಲು ಸಿಸಿಟಿವಿ ಅಳವಡಿಕೆ: 5 ಲಕ್ಷ ರೂ ದಂಡ ವಸೂಲಿ; ವಿಡಿಯೋ ಮಾಡಿದವರಿಗೆ ನಗದು ಬಹುಮಾನ!

ಬಿ.ವೈ.ವಿಜಯೇಂದ್ರ ಅವರು ಪ್ರತಿಕ್ರಿಯಿಸಿ, ಬೆಂಗಳೂರಿನ ಕಸ ಗುಡಿಸುವ ನೆಪದಲ್ಲಿ ಕಮಿಷನ್ ಹಣವನ್ನು ಬಾಚಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಇಲ್ಲದಿದ್ದಲ್ಲಿ ಬೆಂಗಳೂರಿನ ಕಸ ಗುಡಿಸುವುದಕ್ಕೆ 617 ಕೋಟಿ ರೂ ಬಾಡಿಗೆ ಕಟ್ಟಲು ಮುಂದಾಗಿರುವ ಇವರ ನಿರ್ಧಾರದ ಹಿಂದಿನ ತರ್ಕಕ್ಕೆ, ಮೊದಲು ಕಾಂಗ್ರೆಸ್ ಸರ್ಕಾರ ಉತ್ತರಿಸಲಿ ಎಂದು ಆಗ್ರಹಿಸಿದ್ದಾರೆ.

46 ಯಂತ್ರಗಳನ್ನು 7 ವರ್ಷಕ್ಕೆ 613 ಕೋಟಿ ರೂ.ಗೆ ಬಾಡಿಗೆಗೆ ಪಡೆಯುತ್ತಿದೆ, ಅಂದರೆ ಇದು ಪ್ರತಿ ಯಂತ್ರಕ್ಕೆ ವಾರ್ಷಿಕ 1.9 ಕೋಟಿ ರೂ. ಬಾಡಿಗೆಯಾಗುತ್ತದೆ. ಒಂದು ಯಂತ್ರದ ಮಾರುಕಟ್ಟೆ ಬೆಲೆ ಸುಮಾರು 1.5 ರಿಂದ 3 ಕೋಟಿ ರೂ. ಎನ್ನಲಾಗಿದೆ. ಒಂದು ಯಂತ್ರವನ್ನು 7 ವರ್ಷಕ್ಕೆ ಬಾಡಿಗೆಗೆ ಪಡೆಯಲು, ಅದನ್ನು ಹೊಸದಾಗಿ ಖರೀದಿಸುವುದಕ್ಕಿಂತಲೂ ದುಬಾರಿಯಾಗಿ ಜನರ ಹೆಚ್ಚಿನ ತೆರಿಗೆ ಹಣವನ್ನು ಸರ್ಕಾರ ಏಕೆ ಖರ್ಚು ಮಾಡುತ್ತಿದೆ? ತಾಂತ್ರಿಕ ಸಮಿತಿ 'ಖರೀದಿ'ಗೆ ಶಿಫಾರಸು ಮಾಡಿದರೂ, ದುಬಾರಿ 'ಬಾಡಿಗೆ' ಆಯ್ಕೆ ಮಾಡಿದ್ದು ಏಕೆ? ಎಂದು ಪ್ರಶ್ನಿಸಿದ್ದಾರೆ.

ಬಿಬಿಎಂಪಿ ನೌಕರರಿಗೆ ಪಾವತಿಸಲು ಹಣವಿಲ್ಲದ ಕಾರಣ, ನಿರ್ವಹಣೆ ಇಲ್ಲದೆ ಈಗಾಗಲೇ 26 ಯಂತ್ರಗಳು ಬಳಕೆಯಾಗದೆ ಧೂಳು ತಿನ್ನುತ್ತಿವೆ. ಅದರ ಧೂಳು ತೆಗೆದು ಬಳಸಲು ಇವರಿಗೆ ಆಗುತ್ತಿಲ್ಲ. ಆದ್ದರಿಂದ ಈ 'ಧೂಳು-ಕಸ' ಭಾಗ್ಯದ ರೂವಾರಿಗಳು ಯಾರು ಎಂದು ರಾಜ್ಯ ಸರ್ಕಾರ ಮೊದಲು ಉತ್ತರಿಸಲಿ ಎಂದು ಆಗ್ರಹಿಸಿದ್ದಾರೆ.

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಪ್ರತಿಕ್ರಿಯಿಸಿ, ಕಾಂಗ್ರೆಸ್‌ ಸರ್ಕಾರ ಬಂದಾಗಿನಿಂದ ದಿನಕ್ಕೊಂದು ಲೂಟಿ ನಡೆಯುತ್ತಲೇ ಇದೆ. ಅದೇ ಪಟ್ಟಿಗೆ ಇದೀಗ ಕಸ ಗುಡಿಸುವ ಮಷಿನ್‌ ಸೇರಿದೆ. ಕನ್ನಡಿಗರ ತೆರಿಗೆ ಹಣವನ್ನು ಕಸ ಗುಡಿಸುವ ಮಷಿನ್ ಹೆಸರಲ್ಲಿ ಕಾಂಗ್ರೆಸ್ ಸರ್ಕಾರ ಲೂಟಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಮಷಿನ್ ಮಾರುಕಟ್ಟೆ ಬೆಲೆ ರೂ115 ಕೋಟಿ. ಕಾಂಗ್ರೆಸ್ ಗುತ್ತಿಗೆ ಬೆಲೆ ರೂ.613 ಕೋಟಿ. ಎರಡರ ಮಧ್ಯೆ ಅಜಗಜಾಂತರ ವ್ಯತ್ಯಾಸವಿದೆ. ಇವರ ಲೆಕ್ಕ ನೋಡಿದರೆ ಬೆಂಗಳೂರಿನ ಕಸ ಗುಡಿಸಲು ಒಂದು ದಿನದ ಖರ್ಚು ರೂ.24 ಲಕ್ಷ ತಗುಲುತ್ತದೆ. ಕೋಟಿ ಕೋಟಿ ಲೂಟಿ ಹೊಡೆಯುತ್ತಿರುವ ಈ ಭ್ರಷ್ಟ ಸರ್ಕಾರಕ್ಕೆ ಜನ ಬುದ್ಧಿ ಕಲಿಸುವುದು ಖಚಿತ ಎಂದು ಕಿಡಿಕಾರಿದ್ದಾರೆ.

File photo
ಬೆಂಗಳೂರಿನಲ್ಲಿ ಕಸ ಗುಡಿಸುವ ಯಂತ್ರಗಳಿಗೆ 613 ಕೋಟಿ ರೂ. ಬಾಡಿಗೆ; ಸಂಪುಟ ಸಭೆಯ ಪ್ರಮುಖ ತೀರ್ಮಾನಗಳು ಹೀಗಿವೆ

ಜೆಡಿಎಸ್ ಕೂಡ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದೆ. ಬರಗೆಟ್ಟ ಕಾಂಗ್ರೆಸ್ ಸರ್ಕಾರ ಲೂಟಿಯನ್ನೇ ಕಾಯಕ ಮಾಡಿಕೊಂಡಿದೆ. ಸಿದ್ದರಾಮಯ್ಯ ಹಾಗೂ ಡಿಕೆ.ಶಿವಕುಮಾರ್ ಗುಂಡಿ ಹೆಸರಲ್ಲಿ ನೂರಾರು ಕೋಟಿ ನುಂಗಿ ನೀರು ಕುಡಿದಾಯ್ತು. ಈಗ ಕಸ ಗುಡಿಸುವ ಯಂತ್ರಗಳ ಖರೀದಿ ನೆಪದಲ್ಲಿ ನೂರಾರು ಕೋಟಿ ರೂ. ಲೂಟಿಯ ಸ್ಕೀಮ್‌ ಹಾಕಿದ್ದಾರೆ.

KUIDFC ಸಮಿತಿಯು ಸ್ವೀಪರ್‌ ಮಷಿನ್‌ಗಳನ್ನು ಬಾಡಿಗೆಗೆ ಪಡೆಯುವ ಬದಲು ನೇರವಾಗಿ ಖರೀದಿ ಮಾಡಿ ಎಂದು ಸಲಹೆ ನೀಡಿತ್ತು. ಆದರೆ, ಗ್ರೇಟರ್ ಬೆಂಗಳೂರು ಪ್ರಾಥಿಕಾರದ ತಾಂತ್ರಿಕ ಸಮಿತಿ, ಈ ಸಲಹೆಯನ್ನು ತಿರಸ್ಕರಿಸಿರುವುದುಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

46 ಕಸ ಗುಡಿಸುವ ಯಂತ್ರಗಳ ಬಾಡಿಗೆಗೆ ಬರೋಬ್ಬರಿ 613 ಕೋಟಿ ರೂ. ಖರ್ಚು ಮಾಡುತ್ತಿದೆ. ಅದರ ಬದಲು ಖರೀದಿಸಿದರೇ ಪ್ರತಿ ಯಂತ್ರದ ಮಾರುಕಟ್ಟೆ ಮೌಲ್ಯ ಅಂದಾಜು 3 ಕೋಟಿ ರೂ. ಎಂದರೂ 3x46 = 138 ಕೋಟಿ ರೂ. ಅಷ್ಟೇ. ಕಮಿಷನ್‌ ಕಾಂಗ್ರೆಸ್‌ ಸರ್ಕಾರ ಪ್ರತಿಯೊಂದು ಯೋಜನೆಗಳಲ್ಲೂ ಕನ್ನಡಿಗರ ತೆರಿಗೆ ಹಣವನ್ನು ದೋಚುತ್ತಿದೆ ಎಂದು ಆರೋಪಿಸಿದೆ.

ಬೆಂಗಳೂರು ಉಸ್ತುವಾರಿ ಸಚಿವರೇ ನಿಮ್ಮ ಉದ್ದೇಶ ಏನು.?ಕಸ ಗುಡಿಸುವ ಯಂತ್ರಗಳನ್ನು ಗುತ್ತಿಗೆ ಪಡೆದು ನೀವು ಬೆಂಗಳೂರು ನಗರವನ್ನು ಏನು ಮಾಡಲು ಹೋರಟಿದ್ದೀರಿ.? 7 ವರ್ಷಕ್ಕೆ 613 ಕೋಟಿ ಖರ್ಚು ಮಾಡುವ ಬದಲು ಒಂದು ಯಂತ್ರವನ್ನು 1.33 ಕೋಟಿ ರೂ. ದಲ್ಲಿ ನೇರವಾಗಿ ಖರೀದಿ ಮಾಡಬಹುದಾಗಿದೆ. ನಿಮ್ಮ ಗಣಿತ ನಮಗೆ ಅರ್ಥವಾಗುತ್ತಿಲ್ಲ ದಯವಿಟ್ಟು ರಾಜ್ಯದ ಜನತೆಗೆ ಇದರ ಬಗ್ಗೆ ಉತ್ತರ ನೀಡಿ ಎಂದು ಆಗ್ರಹಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com