

ಕಲಬುರಗಿ: ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಕಚ್ಚಾಟ ತೀವ್ರಗೊಂಡಿದ್ದು, ಪರಿಸ್ಥಿತಿ ಎದುರಾಗಿದ್ದೇ ಆದರೆ ಸರ್ಕಾರ ರಚಿಸಲು ಕೈಜೋಡಿಸುವಂತೆ ಕೆಲ ಕಾಂಗ್ರೆಸ್ ನಾಯಕರು ನಮ್ಮನ್ನು ಸಂಪರ್ಕಿಸಿದ್ದಾರೆಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಹೊಸ ಬಾಂಬ್ ಸಿಡಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಿಎಂ ಹುದ್ದೆ ಗುದ್ದಾಟಕ್ಕಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ನಡುವಿನ ಸಂಘರ್ಷ ನೋಡಿದರೆ ಯಾವುದೇ ಸಂದರ್ಭದಲ್ಲಿ ಏನು ಬೇಕಾದರೂ ಆಗಬಹುದು. ಇಷ್ಟು ದಿನ ನಾನೇ ಐದು ವರ್ಷ ಸಿಎಂ ಎನ್ನುತ್ತಿದ್ದ ಸಿದ್ದರಾಮಯ್ಯ ಈಗ ಹೈಕಮಾಂಡ್ ಗೆ ಎಲ್ಲ ಬಿಟ್ಟಿದ್ದು ಎನ್ನುತ್ತಿದ್ದಾರೆ. ಇನ್ನು ಡಿಸಿಎಂ ಶಿವಕುಮಾರ್, ಶಾಸಕರು ದೆಹಲಿಗೆ ಹೋದರೆ ತಪ್ಪೇನು ಎನ್ನುತ್ತಿದ್ದಾರೆ. ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಅಸಹಾಯಕ ಆಗಿರುವುದನ್ನು ನೋಡಿದರೆ ಜಗಳ ಬೀದಿಗೆ ಬರುವಲ್ಲಿ ಯಾವುದೇ ಅನುಮಾನನಿಲ್ಲ ಎಂದು ಹೇಳಿದರು.
ಸಿಎಂ ಕುರ್ಚಿ ಕಚ್ಚಾಟದಿಂದ ಸರ್ಕಾರ ಕೋಮಾಕ್ಕೆ ತೆರಳಿದೆ. ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಭ್ರಷ್ಟಾಚಾರ ಮಿತಿ ಮೀರಿದ್ದರಿಂದ ಅಧಿಕಾರಿಗಳಿಗೆ ಯಾರೂ ಏನೂ ಕೇಳದಂತಾಗಿದೆ. ಕಾಂಗ್ರೆಸ್ ಅನ್ನು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಪ್ರಿಯಾಂಕ್ ಗಾಂಧಿ ಎಂಬ ಮೂವರು ಮಾತ್ರ ಆಳುತ್ತಿದ್ದಾರೆ. ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಘೋಷಣೆಯ ನಂತರ ಈ ಹೈಕಮಾಂಡ್ ದುರ್ಬಲವಾಗಿದೆ. ಒಟ್ಟಾರೆ ಸಿಎಂ-ಡಿಸಿಎಂ ನಡುವೆ ಇದೇ ತೆರನಾಗಿ ಜಗಳ ಮುಂದುವರಿದರೆ ರಾಜ್ಯಪಾಲದ ಬಳಿ ಬಿಜೆಪಿ ನಿಯೋಗ ತೆರಳಲಿದೆ ಎಂದು ತಿಳಿಸಿದರು.
ರೈತರಿಗೆ ಬೆಳೆ ನಷ್ಟ ಪರಿಹಾರ ನೀಡುವಲ್ಲಿ, ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಮತ್ತು ರಾಜ್ಯವನ್ನು ಆರ್ಥಿಕವಾಗಿ ದುರ್ಬಲಗೊಳಿಸುವಲ್ಲಿ ಕಾಂಗ್ರೆಸ್ ಎಲ್ಲಾ ರಂಗಗಳಲ್ಲಿ ವಿಫಲವಾಗಿದೆ, ಆದ್ದರಿಂದ ವಿಧಾನಸಭೆಯನ್ನು ವಿಸರ್ಜಿಸಲು ಕಾಂಗ್ರೆಸ್ ಶಿಫಾರಸು ಮಾಡಬೇಕು. ಸರ್ಕಾರ ಬಿದ್ದರೆ ಭಾರತೀಯ ಜನತಾ ಪಕ್ಷ ಯಾವುದೇ ತೆರನಾದ ಸರ್ಕಾರಕ್ಕೆ ಬೆಂಬಲ ನೀಡದೇ, ಜತೆಗೆ ತೇಪೆ ಹಾಕುವ ಕಾರ್ಯಕ್ಕೆ ಕೈ ಜೋಡಿಸದೇ ಮಧ್ಯಂತರ ಚುನಾವಣೆ ಎದುರಿಸಲು ಸಿದ್ಧವಾಗಿದೆ, ಚುನಾವಣೆ ಎದುರಾಗಿದ್ದೇ ಆದರೆ, ಬಹುಮತದೊಂದಿಗೆ ಗೆಲ್ಲುವ ವಿಶ್ವಾಸ ಬಿಜೆಪಿಗಿದೆ ಎಂದು ಹೇಳಿದರು.
ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಮಾತನಾಡಿ, ಸಿಎಂ ಕುರ್ಚಿಗಾಗಿ ಕಾಂಗ್ರೆಸ್‌ನಲ್ಲಿ ಕುದುರೆ ವ್ಯಾಪಾರ ಶುರುವಾಗಿದೆ. ಹರಾಜು ದರ 7 ಕೋಟಿ ರೂ.ಗಳಿಂದ ಪ್ರಾರಂಭವಾಗಿದೆ, ಮುಖ್ಯಮಂತ್ರಿ ಹುದ್ದೆಗೆ ಸಿದ್ದರಾಮಯ್ಯ ಗುಂಪು, ಡಿ.ಕೆ. ಶಿವಕುಮಾರ್ ಗುಂಪು ಮತ್ತು ಲಿಂಗಾಯತ ಗುಂಪು ಎಂಬ ಮೂರು ಬಣಗಳು ಪೈಪೋಟಿಯಲ್ಲಿವೆ. ದಲಿತ ನಾಯಕರು ಪೈಪೋಟಿಗೆ ನಿಂತಿದ್ದರೂ, ಅದು ಕೆಲಸ ಮಾಡುವುದಿಲ್ಲ ಎಂದು ವ್ಯಂಗ್ಯವಾಡಿದರು.
Advertisement