
ಬೆಂಗಳೂರು: ಬಿಹಾರಕ್ಕೆ ಯಾರು ಯಾರು ಎಷ್ಟೆಷ್ಟು ಕೊಡಬೇಕು ಎಂಬುದನ್ನು ನಿರ್ಧರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರ ಔತಣಕೂಟ ಕರೆದಿದ್ದಾರೆ.ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಹಾರ ಚುನಾವಣೆ ಹತ್ತಿರ ಬರುತ್ತಿದ್ದು, ಕಾಂಗ್ರೆಸ್'ಗೆ ಕರ್ನಾಟಕ ಎಟಿಎಂ ಆಗಿ ಮಾರ್ಪಟ್ಟಿದೆ. ಬಿಹಾರ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್‌ನ ಖರ್ಚಿನ ಸಂಪೂರ್ಣ ಜವಾಬ್ದಾರಿಯನ್ನು ರಾಜ್ಯದ ಕಾಂಗ್ರೆಸ್ ನಾಯಕರು ವಹಿಸಿಕೊಂಡಿದ್ದಾರೆ. ಹೀಗಾಗಿಯೇ ಈ ಬಗ್ಗೆ ಚರ್ಚಿಸಲು ಸಿದ್ದರಾಮಯ್ಯ ಅವರು ಔತಣಕೂಟ ಕರದಿದ್ದಾರೆಂದು ಆರೋಪಿಸಿದರು.
ಸಂಪುಟ ಪುನಾರಚನೆ ಕುರಿತು ಚರ್ಚಿಸಲು ಭೋಜನಕೂಟ ಕರೆದಿಲ್ಲ. ಆದರೆ, ಬಿಹಾರ ಚುನಾವಣೆಗೆ ಹಣಕಾಸು ಒದಗಿಸುವ ಸಲುವಾಗಿ ಚರ್ಚಿಸಲು ಕರೆದಿದ್ದಾರೆಂದು ಹೇಳಿದರು.
ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಚಿನ್ನದ ಲಾಲಿ ಪಪ್ ಹಿಡ್ಕೊಂಡು ಕುಳಿತಿದ್ದ. ಅವನ ಮೂಲಕ ಚಿನ್ನದ ಗಟ್ಟಿಯನ್ನು ಬಿಹಾರಕ್ಕೆ ಕಳುಹಿಸಲು ಮುಂದಾಗಿದ್ದರು. ಆದರೆ, ಅವನನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಹಿಡಿದು ಹಾಕಿದೆ. ರಾಜ್ಯದ ಸಂಪತ್ತನ್ನೆಲ್ಲ ಬಿಹಾರಕ್ಕೆ ಕಳುಹಿಸುವ ಸಂಚು ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವೀರೇಂದ್ರ ಪಪ್ಪಿ ಬಳಿ ಇದ್ದ ಸುಮಾರು 300 ಕೋಟಿ ರೂ.ಗೂ ಮೇಲ್ಪಟ್ಟ ಚಿನ್ನ ಈಗ ಸಿಕ್ಕಿ ಹಾಕಿಕೊಂಡಿದೆ. ಹೀಗಾಗಿ ಬಿಹಾರ ಚುನಾವಣೆಗೆ ಫಂಡ್ ಸಂಗ್ರಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರ ಔತಣಕೂಟ ಕರೆದಿದ್ದಾರೆ. ಯಾವ್ಯಾವ ಸಚಿವರು, ಯಾವ್ಯಾವ ಇಲಾಖೆಯಿಂದ ಎಷ್ಟು ಕಲೆಕ್ಟ್ ಮಾಡಬೇಕೆಂಬುದು ಈ ಸಭೆಯಲ್ಲಿ ನಿರ್ಣಯವಾಗಲಿದೆ. ಇದು ಔತಣ ಕೂಟವಲ್ಲ, ಫಂಡ್ ಕಲೆಕ್ಷನ್ ಕೂಟ ಎಂದು ಟೀಕಿಸಿದರು.
ಇದೇ ವೇಳೆ ಬಿಜೆಪಿಯವರು ಹೈಕಮಾಂಡ್‌ಗೆ ಕಪ್ಪ ಕೊಡುತ್ತಿದ್ದಾರೆ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅಶೋಕ್, ನಾವೇನು ಅಧಿಕಾರದಲ್ಲಿದ್ದೇವಾ? ಟ್ರಾನ್ಸ್‌ಫರ್ ಮಾಡುತ್ತೇವಾ? ನಮ್ಮ ಪಕ್ಷಕ್ಕೆ ದುಡ್ಡು ತೆಗೆದುಕೊಂಡು ವಿಪಕ್ಷ ನಾಯಕನ ನೇಮಕ ಮಾಡುವಷ್ಟು ಗತಿಗೆಟ್ಟಿಲ್ಲ. ನಮ್ಮ ಕಾರ್ಯಕರ್ತರು ಹತ್ತತ್ತು ರೂಪಾಯಿ ಹಾಕಿದರೂ ಚುನಾವಣೆ ಗೆಲ್ಲಿಸುವಷ್ಟು ಸಮರ್ಥವಾಗಿದೆ ಎಂದರು.
ನನಗೆ ಸಿಎಂ ಆಗುವ ಆತುರ ಇಲ್ಲ, ನನ್ನ ದಾರಿ ಸ್ಪಷ್ಟ ಇದೆ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿ, ಕ್ರಾಂತಿ ಆಗುತ್ತದೆ. ಸ್ಪಷ್ಟ ಗುರಿ, ದಿಟ್ಟ ನಿರ್ಧಾರ, ನಿಖರತೆ. ಅವರಿಗೆ ಗುರಿ ಮುಟ್ಟೋದಿಕ್ಕೆ ಕ್ಷಣಗಣನೆ ನಡೆಯುತ್ತಿದೆ. ಸ್ಯಾಟಲೈಟ್ ಹಾರಿಸಲು ಕ್ಷಣಗಣನೆ ಶುರುವಾಗಿದೆ. ರಾಮನಗರ ಶಾಸಕ ನೋಟಿಸ್ ಪಡೆದ ಮೇಲೂ ಡಿಕೆಶಿ ಪರವಾಗಿ ಮಾತಾಡಿದ್ದಾರೆ. ಮಗು ಚಿವುಟುವುದು, ಮಗು ತೂಗುವುದು ಎರಡನ್ನೂ ಡಿಕೆಶಿ ಮಾಡುತ್ತಿದ್ದಾರೆ. ಡಿಕೆಶಿ ತಮ್ಮ ಗುರಿಯನ್ನು ಸ್ಪಷ್ಟವಾಗಿ ಮುಟ್ಟುತ್ತಾರೆ. ಕಾಂಗ್ರೆಸ್‌ನಲ್ಲಿ ಕ್ರಾಂತಿ ಆಗೋದು ಖಚಿತ.
ಡಿಕೆಶಿ ಸಿಎಂ ಆಗೋ ಕಾಲ ಸನ್ನಿಹಿತವಾಗುತ್ತಿದೆ. ನವೆಂಬರ್ಗೆ ಕ್ರಾಂತಿ ಖಚಿತ. ತರಾತುರಿಯಲ್ಲಿ ಸಮೀಕ್ಷೆ ನಡೆಸುತ್ತಿದ್ದಾರೆ. ಎಲ್ಲವೂ ಕ್ರಾಂತಿಗೆ ಪೂರಕವಾಗಿ ನಡೀತಿದೆ. ಕಾಂಗ್ರೆಸ್ಗೆ ಗ್ರಹಣ ಹಿಡಿದಿದೆ. ಸಿದ್ದರಾಮಯ್ಯರಿಗೆ ಗ್ರಹಣದ ಕತ್ತಲು, ಡಿಕೆಶಿಗೆ ಬೆಳಕು ಶುರುವಾಗಿದೆ. ಡಿಕೆಶಿ ರಾಕೆಟ್ ಲಾಂಚ್ ತರ ಸಿಎಂ ಆಗೋಕೆ ಕ್ಷಣಗಣನೆ ಇದೆ. ಸಿದ್ದರಾಮಯ್ಯ ನಾನೇ ಮುಖ್ಯಮಂತ್ರಿ ಅಂತಾರೆ, ಸಮೀಕ್ಷೆಯನ್ನು ತರಾತುರಿಯಲ್ಲಿ ಮಾಡುತ್ತಿದ್ದಾರೆ. ನೀವು ಸಿಎಂ ಸ್ಥಾನದಿಂದ ಇಳಿಯಲ್ಲ ಅಂದ ಮೇಲೆ, ಸೆನ್ಸಸ್‌ಗೆ ಯಾಕೆ ತರಾತುರಿ ಎಂದು ಪ್ರಶ್ನಿಸಿದರು.
ಬಲೂನು ಮಾರುವ ಕುಟುಂಬದ ಅಮಾಯಕ ಬಾಲಕಿಯನ್ನು ದುಷ್ಕರ್ಮಿ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ಯಾವ ಪುರುಷಾರ್ಥಕ್ಕೆ ದಸರಾ ಮೆರವಣಿಗೆ ಮಾಡಿದರು? ಅಲ್ಲಿ ಅತ್ಯಾಚಾರದ ಮೆರವಣಿಗೆ ಸಾಗಿದೆ. ಬಾಲಕಿಯ ಜೀವ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದ್ದು, ಈ ಘಟನೆ ರಾಜ್ಯದಲ್ಲಿ ಹದೆಗೆಟ್ಟ ಕಾನೂನು ಸುವ್ಯವಸ್ಥೆಯ ಪ್ರತೀಕ ಎಂದು ಇದೇ ವೇಳೆ ಆರೋಪಿಸಿದರು.
ಮೈಸೂರಿನಲ್ಲಿ ರಾತ್ರಿ ಗಸ್ತಿನ ಪೊಲೀಸರು ಏನು ಮಾಡುತ್ತಿದ್ದರು? ಪೋಸ್ಟಿಂಗ್‌ಗಾಗಿ ಕಾಸು ಕಲೆಕ್ಟ್ ಮಾಡುವುದಕ್ಕೆ ಹೋಗಿದ್ದರಾ? ಎಂದು ಪ್ರಶ್ನಿಸಿದರು.
ಪೊಲೀಸರು ದಸರಾ ಗುಂಗಲ್ಲೇ ಇದ್ದಿದ್ದರೇ? ಅವರು ಅಲರ್ಟ್ ಆಗಿರಬೇಕಿತ್ತು. ಇಡೀ ಮೈಸೂರು ವಿದ್ಯುದ್ದೀಪಾಲಂಕಾರದ ಬೆಳಕಿನಿಂದ ಝಗಮಗಿಸುತ್ತಿತ್ತು. ನಾಲ್ಕೈದು ಜಿಲ್ಲೆಗಳ ಪೊಲೀಸರು ಭದ್ರತೆಗೆ ಇದ್ದರು. ಇಷ್ಟಾದರೂ ಬಾಲಕಿಯ ಹತ್ಯೆ ತಡೆಯಲು ಸಾಧ್ಯವಾಗಿಲ್ಲ. ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮನೆ ಮುಂದೆ ರಸ್ತೆ ಗುಂಡಿ ಪತ್ತೆ ಹಚ್ಚುವವರಿಗೆ ಅತ್ಯಾಚಾರ ತಡೆಯಲು ಏಕೆ ಸಾಧ್ಯವಾಗಲಿಲ್ಲ? ಎಂದು ಪ್ರಶ್ನಿಸಿದರು.
Advertisement