
ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಮತ್ತು ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಂಗಳವಾರ ಹೇಳಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಪಕ್ಷದ ನಾಯಕರ ಅಭಿಪ್ರಾಯ ಸಂಗ್ರಹಿಸಲು ಹೈಕಮಾಂಡ್ ರಾಜ್ಯಕ್ಕೆ ವೀಕ್ಷಕರನ್ನು ರವಾನಿಸಿರುವ ಹಿನ್ನೆಲೆಯಲ್ಲಿ ಸಚಿವರು ಹೇಳಿಕೆ ನೀಡದ್ದಾರೆ.
ಮುಖ್ಯಮಂತ್ರಿ ನಿವಾಸದಲ್ಲಿ ನಡೆದದ್ದು, ಯಾವುದೇ ಕಾರ್ಯಸೂಚಿ ಇಲ್ಲದ ಭೋಜನಕೂಟವಷ್ಟೇ ಎಂದು ಸಚಿವ ಎಂಬಿ.ಪಾಟೀಲ್ ಅವರು ಹೇಳಿದ್ದಾರೆ.
ಮುಖ್ಯಮಂತ್ರಿ ಆಯ್ಕೆ ಮಾಡುವ ಮೊದಲು ಹೈಕಮಾಂಡ್ ವೀಕ್ಷಕರನ್ನು ರಾಜ್ಯಕ್ಕೆ ರವಾನಿಸುತ್ತಾರೆ. ಈ ವೀಕ್ಷಕರು ನಾಯಕರ ಅಭಿಪ್ರಾಯಗಳನ್ನು ಸಂಗ್ರಹಿಸುತ್ತಾರೆ. ನಂತರ ಹೈಕಮಾಂಡ್'ಗೆ ಈ ಬಗ್ಗೆ ಮಾಹಿತಿ ನೀಡುತ್ತಾರೆ. ಇದು ನಮ್ಮ ಪಕ್ಷದಲ್ಲಿ ನಡೆದುಕೊಂಡು ಬಂದಿರುವ ಸಂಪ್ರದಾಯ. ಇದರ ಬಗ್ಗೆ ಬಿಜೆಪಿ ತಲೆಕೆಡಿಸಿಕೊಳ್ಳುವುದು ಬೇಡ. ಅವರು ಅವರ ಸಮಸ್ಯೆ ಬಗ್ಗೆ ಗಮನ ಕೊಡಲಿ. ಅವರ ಮನೆಯೇ ಒಡೆದಿದೆ. ಅದರ ಬಗ್ಗೆ ಗಮನಹರಿಸಲಿ ಎಂದು ಹೇಳಿದರು.
ಪ್ರತೀ ವರ್ಷ ಸಿಎಂ ಸಭೆ ಕರೆಯುತ್ತಾರೆ. ಸೋಮವಾರ ನಡೆದ ಭೋಜನಕೂಟ ಕೂಟ ಭಿನ್ನವೇನಲ್ಲ ಎಂದು ಸಚಿವ ಸಂತೋಷ್ ಲಾಡ್ ಅವರು ಹೇಳಿದರು.
ನವೆಂಬರ್ ಕ್ರಾಂತಿ ಕುರಿತ ಊಹಾಪೋಹ ಕುರಿತು ಮಾತನಾಡಿ, ಭೋಜನಕೂಟದಲ್ಲಿ ಈ ಬಗ್ಗೆ ಯಾವುದೇ ಚರ್ಚೆಗಳೂ ನಡೆದಿಲ್ಲ. ಈ ಬಗ್ಗೆ ಚರ್ಚಿಸಲು ಬಯಸಿದರೆ ಸಿಎಂ ಹಾಗೂ ಡಿಸಿಎಂ ಇಬ್ಬರಿಗೂ ಹಕ್ಕಿದೆ. ಹೈಕಮಾಂಡ್ ನಿರ್ಧಾರ ಅಂತಿಮವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದು, ಐದು ಗ್ಯಾರಂಟಿ ಯೋಜನೆಗಳನ್ನು ಕಾರ್ಯಗತಗೊಳಿಸುವತ್ತ ಗಮನಹರಿಸಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಹೇಳಿದ್ದಾರೆ.
ಸಿಎಂ ಮತ್ತು ಡಿಸಿಎಂ ಅಧಿಕಾರಾವಧಿಯ ಕುರಿತು ಶಾಸಕರು ಸೇರಿದಂತೆ ನಾಯಕರು ನಡೆಸುವ ಸಾರ್ವಜನಿಕ ಚರ್ಚೆಗಳ ಕುರಿತು ಮಾತನಾಡಿ, ಅವು ಅನಗತ್ಯ ಮತ್ತು ಪಕ್ಷಕ್ಕೆ ಹಾನಿಕಾರಕ ಎಂದು ತಿಳಿಸಿದರು.
ಸಿಎಂ ಅಥವಾ ಡಿಸಿಎಂ ಪರವಾಗಿ ಅಥವಾ ವಿರುದ್ಧವಾಗಿ ಹೇಳಿಕೆಗಳ ಅಗತ್ಯವಿಲ್ಲ. ನಾಯಕರು ಸಂಯಮದಿಂದ ವರ್ತಿಸಬೇಕು. ಹೈಕಮಾಂಡ್ ಅಂತಹ ಚರ್ಚೆಗಳಿಗೆ ಬ್ರೇಕ್ ಹಾಕಬೇಕು ಎಂದು ಹೇಳಿದ್ದಾರೆ.
Advertisement