
ಬೆಂಗಳೂರು: 2023ರಲ್ಲಿ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಹೆಬ್ಬಾಳ ಕ್ಷೇತ್ರದಲ್ಲಿಯೂ ಮತ ಕಳವು ನಡೆದಿತ್ತು’ ಎಂದು ಕ್ಷೇತ್ರದ ಶಾಸಕರೂ ಆಗಿರುವ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಗುರುವಾರ ಆರೋಪಿಸಿದ್ದಾರೆ.
ಮತ ಕಳ್ಳತನದ ಆರೋಪದ ವಿರುದ್ಧ ಸಹಿ ಸಂಗ್ರಹ ಅಭಿಯಾನದಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೆಬ್ಬಾಳದಲ್ಲಿ 20,000 ಕ್ಕೂ ಹೆಚ್ಚು ಮತಗಳನ್ನು ಕದ್ದಿದ್ದಾರೆ, ಆದರೆ, ಕ್ಷೇತ್ರದ ಮತದಾರರು ನನ್ನ ಕೈಬಿಡಲಿಲ್ಲ, 32,000 ಕ್ಕೂ ಹೆಚ್ಚು ಅಂತರದಿಂದ ಗೆಲುವು ಸಾಧಿಸುವಂತೆ ಮಾಡಿದ್ದಾರೆಂದು ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಒಂದು ಮತ ಚಲಾಯಿಸುವ ಹಕ್ಕು ನೀಡಲಾಗಿದೆ. ಆ ಒಂದು ಮತವನ್ನೇ ಕಸಿದುಕೊಳ್ಳುವಂಥ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಆ ಮೂಲಕ, ಪ್ರಜಾಪ್ರಭುತ್ವದ ಹತ್ಯೆ ಮಾಡಲಾಗುತ್ತಿದೆ. ಹೆಬ್ಬಾಳ ಕ್ಷೇತ್ರದ ವ್ಯಾಪ್ತಿಯಲ್ಲಿ ವಾಸ ಇಲ್ಲದಿದ್ದರೂ ಚುನಾವಣೆ ಸಂದರ್ಭದಲ್ಲಿ ಸಾವಿರಾರು ಜನ ಪ್ರತ್ಯಕ್ಷರಾಗುತ್ತಾರೆ.
ಬೆಂಗಳೂರು ಹೊರವಲಯದ ಪಟ್ಟಣಗಳಿಂದ ಇಲ್ಲಿಗೆ ಬಂದು ಮತ ಚಲಾಯಿಸಿ ಹೋಗುತ್ತಾರೆ. ಮತ್ತೆ ಅವರು ಬರುವುದು ಮುಂದಿನ ಚುನಾವಣೆ ವೇಳೆಗಷ್ಟೇ. ಗಂಗೇನಹಳ್ಳಿ ವಾರ್ಡ್‌ನ ವಿಳಾಸ ಹೊಂದಿದ ಸಾವಿರಕ್ಕೂ ಹೆಚ್ಚು ಜನರು ಬಂದು ಮತ ಹಾಕುತ್ತಾರೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಮುಂಬರುವ ದಿನಗಳಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ 5 ಪಾಲಿಕೆಗಳಿಗೆ ಚುನಾವಣೆಗಳು ನಡೆಯಲಿರುವುದರಿಂದ ಹೆಬ್ಬಾಳದ ಜನರು ಜಾಗರೂಕರಾಗಿರಬೇಕು ಮತ್ತು ಮತದಾರರ ಪಟ್ಟಿಯನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು ಎಂದು ಮನವಿ ಮಾಡಿದರು.
Advertisement