
ಬೆಂಗಳೂರು: ಗುತ್ತಿಗೆದಾರರ ಬೆದರಿಕೆ ಸರ್ಕಾರದ ಮುಂದೆ ನಡೆಯಲ್ಲ ಎಂಬ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರ ಹೇಳಿಕೆಗೆ ರಾಜ್ಯ ಬಿಜೆಪಿ ಕಿಡಿಕಾರಿದೆ.
ನಿನ್ನೆಯಷ್ಟೇ ಕುಮಾರಪಾರ್ಕ್ ನಲ್ಲಿನ ಸರ್ಕಾರಿ ವಸತಿ ಗೃಹದಲ್ಲಿ ಶನಿವಾರ ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳೊಂದಿಗೆ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಡಿಕೆ.ಶಿವಕುಮಾರ್ ಅವರು, ರಾಜ್ಯದಲ್ಲಿರುವ ಗುತ್ತಿಗೆದಾರರ ಸಂಕಷ್ಟ, ನೋವು ನನಗೆ ಅರ್ಥವಾಗುತ್ತದೆ. ಸರ್ಕಾರದ ಆರ್ಥಿಕ ಸ್ಥಿತಿಗತಿ ನೋಡಿಕೊಂಡು ಹಂತಹಂತವಾಗಿ ಬಾಕಿ ಹಣವನ್ನು ಪಾವತಿ ಮಡಾಲಾಗುವುದು. ಆದರೆ, ಯಾವುದೇ ಗಡುವು, ಧಮ್ಕಿ ಹಾಕಿ ಸರ್ಕಾರವನ್ನು ಹೆದರಿಸಲು ಆಗುವುದಿಲ್ಲ ಎಂದು ಹೇಳಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ಬಾಕಿ ಬಿಲ್ ಕೊಡಿ ಎಂದು ಕೇಳಿದರೆ ಅದು "ಧಮ್ಕಿ" ಹೇಗೆ ಆಗುತ್ತದೆ ಡಿಸಿಎಂ ಡಿಕೆ.ಶಿವಕುಮಾರ್ ಅವರೇ? ಬಾಕಿ ಬಿಲ್ ಕೊಡದಿದ್ದರೆ ತಮ್ಮ ಹಕ್ಕಿಗಾಗಿ ಮುಷ್ಕರ ಮಾಡಬೇಕಾಗುತ್ತದೆ ಎಂದು ಹೇಳುವುದು "ಧಮ್ಕಿ" ಹೇಗೆ ಆಗುತ್ತದೆ ಉಪಮುಖ್ಯಮಂತ್ರಿಗಳೇ? ಎಂದು ಪ್ರಶ್ನಿಸಿದ್ದಾರೆ.
ಬಹುಶಃ ರಾಹುಲ್ ಗಾಂಧಿ ಅವರು ಜೇಬಿನಲ್ಲಿ ಇಟ್ಟುಕೊಂಡು ಓಡಾಡುವ ಸಂವಿಧಾನ ಪುಸ್ತಕದಲ್ಲಿ ನಾಗರೀಕರಿಗೆ ಮುಷ್ಕರ, ಹೋರಾಟ ಮಾಡುವ ಹಕ್ಕಿಲ್ಲ ಅನ್ನಿಸುತ್ತೆ. ಆದರೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದಲ್ಲಿ ನಾಗರಿಕರು, ಗುತ್ತಿಗೆದಾರರು ತಮ್ಮ ಹಕ್ಕಿಗಾಗಿ ಸರ್ಕಾರವನ್ನು ಪ್ರಶ್ನಿಸಲೂ ಬಹುದು, ಮುಷ್ಕರ ಮಾಡಬಹುದು, ಹೋರಾಟವನ್ನೂ ಮಾಡಬಹುದು.
ಇಷ್ಟಕ್ಕೂ ಗುತ್ತಿಗೆದಾರರ ಬಿಲ್ ಯಾಕೆ ಕ್ಲಿಯರ್ ಮಾಡುತ್ತಿಲ್ಲ? ಒಂದಾ ಪಾಪರ್ ಸರ್ಕಾರದ ಬಳಿ ದುಡ್ಡಿಲ್ಲದೆ ಸಂಪೂರ್ಣವಾಗಿ ದಿವಾಳಿ ಆಗಿರಬೇಕು. ಇಲ್ಲಾ ನಿಮ್ಮ ಕಮಿಷನ್ ಬೇಡಿಕೆ ಈಡೇರಿಸಲಾಗದೆ ಗುತ್ತಿಗೆದಾರರು ನೀವು ಕೇಳುತ್ತಿರುವ ಪರ್ಸೆಂಟೇಜ್ ಗೆ ಒಪ್ಪದೇ ಇರಬಹುದು. ರಸ್ತೆಗುಂಡಿಗಳ ದುಸ್ಥಿತಿ ಬಗ್ಗೆ ದನಿ ಎತ್ತಿದ ಉದ್ಯಮಿಗಳಿಗೆ ಧಮ್ಕಿ ಹಾಕಿ ಅವಮಾನ ಮಾಡಿದ್ದಾಯ್ತು, ಈಗ ಗುತ್ತಿಗೆದಾರರಿಗೆ ಧಮ್ಕಿ ಹಾಕುತ್ತಿದೆ ಈ ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರ. ಪರಿಸ್ಥಿತಿ ಹೀಗೆ ಮುಂದುವರೆದರೆ ಕರ್ನಾಟಕಕ್ಕೆ ಯಾವ ಉದ್ಯಮಗಳೂ ಬರುವುದಿಲ್ಲ, ಯಾವ ಗುತ್ತಿಗೆದಾರರು ಸರ್ಕಾರದ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ.
Advertisement