

ಬೆಂಗಳೂರು: ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಆರ್ಥಿಕ ಬಿಕ್ಕಟ್ಟಿನಲ್ಲಿದ್ದು, ಅದನ್ನು ಮುಚ್ಚಿಹಾಕಲು ಬಿಜೆಪಿ ಸಂಸದರ ವಿರುದ್ಧ ಆರೋಪಗಳನ್ನು ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಅವರು ಶನಿವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್ ವಿರುದ್ಧ ರಾಜ್ಯ ಸರ್ಕಾರ ಮೂಲ ಸಂವಿಧಾನಕ್ಕೆ ವ್ಯತಿರಿಕ್ತವಾಗಿ ಆದೇಶ ಮಾಡಿದೆ. ಇದು ಕೋರ್ಟ್ನಲ್ಲಿ ನಿಲ್ಲುವುದಿಲ್ಲ ಎಂದು ಹೇಳಿದರು.
ನಾವು ಆರ್‌ಎಸ್‌ಎಸ್ ಕಾರ್ಯಕ್ರಮಗಳಿಂದ ದೂರ ಉಳಿಯುವ ಪ್ರಶ್ನೆಯೇ ಇಲ್ಲ. ಇದು ಸ್ವತಂತ್ರ ದೇಶ - ನಮಗೆ ವಾಕ್ ಸ್ವಾತಂತ್ರ್ಯ, ವೈಯಕ್ತಿಕ ಸ್ವಾತಂತ್ರ್ಯ, ಸಾಮಾಜಿಕ ಮತ್ತು ಧಾರ್ಮಿಕ ಸ್ವಾತಂತ್ರ್ಯವಿದೆ. ಆರ್‌ಎಸ್‌ಎಸ್ ವಿರುದ್ಧದ ರಾಜ್ಯ ಸರ್ಕಾರದ ಆದೇಶವು ಮೂಲ ಸಂವಿಧಾನಕ್ಕೆ ವಿರುದ್ಧವಾಗಿದೆ ಮತ್ತು ಇದಿು ಯಾವುದೇ ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ ಎಂದು ತಿಳಿಸಿದರು.
ಬೇರೆ ಸಂಘಟನೆಗಳು ಪಥ ಸಂಚಲನಕ್ಕೆ ಅವಕಾಶ ಕೇಳಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಯಾರು ಪಥ ಸಂಚಲನ ಕಾರ್ಯಕ್ರಮ ಮಾಡುತ್ತಾರೆ ಅವರಿಗೆ ಅವಕಾಶ ಇದೆ. ಬೇರೆ ಸಂಘಟನೆಗಳು ಪಥ ಸಂಚಲನ ಮಾಡುವುದಿದ್ದರೆ ಮಾಡಲಿ. ಇದು ದೊಡ್ಡ ದೇಶ. ಇಲ್ಲಿ ಎಲ್ಲ ಸಂಘಟನೆಗಳಿಗೆ ಅವಕಾಶ ಕೊಡಬೇಕು. ಪಥ ಸಂಚಲನಕ್ಕೆ ಅವಕಾಶ ಕೊಡುವ ವಿಚಾರದಲ್ಲಿ ಕೋರ್ಟ್ ಸರಿಯಾದ ತೀರ್ಮಾನ ಮಾಡಿದೆ. ನವೆಂಬರ್ 2ಕ್ಕೆ ಪಥ ಸಂಚಲನಕ್ಕೆ ಮುಂಜಾಗ್ರತೆ ಕ್ರಮದ ಬಗ್ಗೆ ಸರ್ಕಾರಕ್ಕೆ ಎಚ್ಚರಿಸಿದೆ. ಶಾಂತಿ ಸುವ್ಯವಸ್ಥೆ ಕಾಪಾಡಿ ಅವಕಾಶ ಕಲ್ಪಿಸಬೇಕು ಎಂದು ಸೂಚಿಸಿದೆ. ಪಥ ಸಂಚಲನ ಎಲ್ಲ ಕಡೆ ನಡೆದಿದೆ. ಎಲ್ಲಿ ಆಕ್ಷೇಪ ಇದೆಯೋ ಅಲ್ಲಿ ತೊಂದರೆಯಾಗಿದೆ. ಸರ್ಕಾರದ ಆದೇಶದಿಂದ ಗೊಂದಲ ಉಂಟಾಗಿದೆ ಎಂದರು.
ಪಥ ಸಂಚಲನದಲ್ಲಿ ದೊಣ್ಣೆಗಳನ್ನು ಬಳಸುವ ಬಗ್ಗೆ ಸಚಿವರು ಆಕ್ಷೇಪ ಎತ್ತುತ್ತಾರೆ ಎನ್ನುವ ಕುರಿತು ಪ್ರಶ್ನೆಗೆ ಉತ್ತರಿಸಿ, ಪಥ ಸಂಚಲನದಿಂದ ಯಾರಿಗಾದರೂ ತೊಂದರೆಯಾಗಿದೆಯಾ? ಸರ್ಕಾರ ಸಮಾಜದಲ್ಲಿ ಕ್ಷೋಭೆ ಉಂಟುಮಾಡುವ ಕೆಲಸ ಮಾಡುತ್ತಿದೆ. ಇಷ್ಟು ವರ್ಷದಿಂದ ಸಂಘ ಪಥ ಸಂಚಲನ ಮಾಡುತ್ತಿದೆ. ಯಾರಿಗಾದರೂ ತೊಂದರೆಯಾಗಿದೆಯಾ?. ಮೊಹರಂನಲ್ಲಿ ಕಬ್ಬಿಣದ ಚಾಟಿಯಿಂದ ಹೊಡೆದುಕೊಳ್ಳುತ್ತಾರೆ ಅದು ಸರಿನಾ? ಜಗತ್ತಿನಲ್ಲಿ ಎಲ್ಲರಿಗೂ ಅವರದೇ ಆದ ನಂಬಿಕೆಗಳಿವೆ. ಸರ್ಕಾರ ಅವುಗಳಿಗೆ ಧಕ್ಕೆ ತರುವ ಕೆಲಸ ಮಾಡುವುದು ಸರಿಯಲ್ಲ. ಸರ್ಕಾರದ ಎದುರು ಸಾಕಷ್ಟು ಸಮಸ್ಯೆಗಳಿವೆ. ಸಾಕಷ್ಟು ಮಳೆಯಾಗಿದೆ, ಅದಕ್ಕೆ ಪರಿಹಾರ ಕೊಡುವುದನ್ನು ಬಿಟ್ಟು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಆರ್ಥಿಕ ದುಸ್ಥಿತಿಯಲ್ಲಿದೆ. ಅದನ್ನು ಮುಚ್ಚಿಕೊಳ್ಳಲು ಆರೋಪ ಮಾಡುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ರಾಜ್ಯಕ್ಕೆ ಕೇಂದ್ರದಿಂದ ಬರುವಷ್ಟು ಹಣ ಬಂದಿದೆ. ರಾಜ್ಯದ ರೈಲ್ವೆ ಯೋಜನೆಗಳಿಗೆ ಯುಪಿಎ ಅವಧಿಯಲ್ಲಿ 5 ಸಾವಿರ ಕೋಟಿ ರೂ. ಘೋಷಣೆ ಆಗಿತ್ತು, ಆದರೆ, ಅದು ಬಿಡುಗಡೆ ಆಗಿರಲಿಲ್ಲ. ನಮ್ಮ ಅವಧಿಯಲ್ಲಿ ಪ್ರತಿ ವರ್ಷ ಅದಕ್ಕಿಂತ ಹೆಚ್ಚು ಹಣ ರಾಜ್ಯಕ್ಕೆ ಬಂದಿದೆ. ರಾಜ್ಯ ಸರ್ಕಾರ ತಮ್ಮ ಲೋಪ ಮುಚ್ಚಿಕೊಳ್ಳಲು ಎಂಪಿಗಳ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
Advertisement