
ಬೆಂಗಳೂರು: ದಸರಾ ಉದ್ಘಾಟನೆಗೆ ಬರುವ ಬಾನು ಮುಷ್ತಾಕ್ ಅವರು ಓರ್ವ ಮುಸ್ಲಿಂ. ಕುಂಕುಮ ಹಚ್ಚುವುದು ಅವರ ಧರ್ಮದಲ್ಲಿ ಇಲ್ಲ. ಬೇರೆ ಧರ್ಮದರವನ್ನು ನೀವು ಹಿಂದೂಗಳಾಗಿ ಎನ್ನುವುದು ಸರಿಯಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ವಿರುದ್ಧ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ.
ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ಹೌದು ಬಿಡಿ ಸಿಎಂ ಸಿದ್ದರಾಮಯ್ಯ ಅವರೇ, ನಾಡಹಬ್ಬ ದಸರಾ ಉದ್ಘಾಟನೆ ಮಾಡುವ ವ್ಯಕ್ತಿಗೆ ಹಿಂದೂ ಧರ್ಮದ ಬಗ್ಗೆ ನಂಬಿಕೆ ಇಲ್ಲದಿದ್ದರೂ ಪರವಾಗಿಲ್ಲ. ಆದರೆ, ಇಫ್ತಾರ್ ಕೂಟಕ್ಕೆ ಹೋಗುವವರು ಮಾತ್ರ ತಲೆಗೆ ಮುಸ್ಲಿಂ ಟೋಪಿ ಧರಿಸದಿದ್ದರೆ ಗಂಟಲಿನಲ್ಲಿ ಬಿರಿಯಾನಿ ಇಳಿಯುವುದಿಲ್ಲ, ಅಲ್ಲವೇ? ಎಂದು ವ್ಯಂಗ್ಯವಾಡಿದ್ದಾರೆ.
ದಸರಾ ಉದ್ಘಾಟನೆಗೆ ಬರುವ ವ್ಯಕ್ತಿಗೆ ಹಣೆಯಲ್ಲಿ ಕುಂಕುಮ ಇಲ್ಲದಿದ್ದರೂ ಪರವಾಗಿಲ್ಲ, ಹಿಂದೂ ಧರ್ಮದ ಬಗ್ಗೆ ನಂಬಿಕೆ ಇಲ್ಲದಿದ್ದರೂ ಪರವಾಗಿಲ್ಲ, ಹಿಂದೂ ದೇವತೆಗಳ ಬಗ್ಗೆ ಶ್ರದ್ಧೆ ಇಲ್ಲದಿದ್ದರೂ ಪರವಾಗಿಲ್ಲ. ಆದರೆ ಇಫ್ತಾರ್ ಕೂಟಕ್ಕೆ ಹೋಗುವವರು ಮಾತ್ರ ತಲೆಗೆ ಮುಸ್ಲಿಂ ಟೋಪಿ ಧರಿಸದಿದ್ದರೆ ಗಂಟಲಿನಲ್ಲಿ ಬಿರಿಯಾನಿ ಇಳಿಯುವುದಿಲ್ಲ, ಅಲ್ಲವೇ? ನಾಚಿಕೆಯಾಗಬೇಕು ಹಿಂದೂ ವಿರೋಧಿ ಕಾಂಗ್ರೆಸ್ ಪಕ್ಷದ ಲಜ್ಜೆಗೆಟ್ಟ ತುಷ್ಟೀಕರಣಕ್ಕೆ ಎಂದು ಕಿಡಿಕಾರಿದ್ದಾರೆ.
ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಿದ್ದರಾಮಯ್ಯ ಅವರು, ಬೂಕರ್ ಪ್ರಶಸ್ತಿ ವಿಜೇತರಾದ ಬಾನು ಮುಷ್ತಾಕ್ ಓರ್ವ ಮುಸ್ಲಿಂ ಮಹಿಳೆಯಾಗಿದ್ದು, ಕುಂಕುಮ ಹಚ್ಚಿಕೊಳ್ಳುವುದು ಅವರ ಧರ್ಮದಲ್ಲಿಲ್ಲ. ದಸರಾ ಹಬ್ಬವನ್ನು ನಾಡಹಬ್ಬ ಎಂದು ಆಚರಿಸುತ್ತೇವೆ. ಬೇರೆ ಧರ್ಮದವರನ್ನು ಉದ್ಘಾಟಕರನ್ನಾಗಿ ಆಹ್ವಾನಿಸಿದರೆ ಕುಂಕುಮ ಹಚ್ಚಿಕೊಂಡು ಬನ್ನಿ, ಹಿಂದೂಗಳಾಗಿ ಎನ್ನುವುದು ತರವಲ್ಲ. ಮುಸ್ಲಿಂ ಗುರುಗಳು ಮುಷ್ತಾಕ್ ಅವರ ವಿರುದ್ಧ ಫತ್ವಾ ಹೊರಡಿಸಿಲ್ಲ ಎಂದು ಹೇಳಿದ್ದರು.
Advertisement