
ಬೆಂಗಳೂರು: ನನ್ನ ಕುಟುಂಬವನ್ನು ಮುಗಿಸಲು ಡಿಕೆ.ಶಿವಕುಮಾರ್ ನಡೆಸಿದ ಪಿತೂರಿ ಎಲ್ಲರಿಗೂ ತಿಳಿದೇ ಇದೆ. ಆದರೆ, ರೈತರು ಮತ್ತು ದೇವರು ನಮ್ಮೊಂದಿಗಿದ್ದು ಜೆಡಿಎಸ್ ಮುಗಿಸಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಭಾನುವಾರ ವಾಗ್ದಾಳಿ ನಡೆಸಿದರು.
ಬಿಡದಿ ಟೌನ್‌ಶಿಪ್ ವಿರೋಧಿಸಿ ಆಯೋಜಿಸಲಾದ ರೈತರ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಡದಿ ಟೌನ್ ಶಿಪ್ ದೇವೇಗೌಡರ ಪುತ್ರನ ಕೂಸು ಎಂದು ಸುಳ್ಳು ಪ್ರಚಾರ ನಡೆಸುತ್ತಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರವಾಗಿ ಕಿಡಿಕಾರಿದರು, ಇದೇ ವೇಳೆ ಟೌನ್‌ಶಿಪ್‌ಗಾಗಿ ರೈತರ ಒಂದು ಇಂಚು ಭೂಮಿಯನ್ನು ಕೂಡ ಸ್ವಾಧೀನಪಡಿಸಿಕೊಳ್ಳಲು ಬಿಡುವುದಿಲ್ಲ ಎಂದು ಹೇಳಿದರು.
ಬಡವರು, ರೈತರ ಭೂಮಿಯನ್ನು ಲೂಟಿ ಹೊಡೆಯುತ್ತಿರುವ ವ್ಯಕ್ತಿ ನನ್ನ ಬಗ್ಗೆ ಲಘವಾಗಿ ಮಾತನಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ನಾನು ಒಬ್ಬ ರೈತನಾಗಿ ಬಿಡದಿಯಲ್ಲಿ ಜೀವನ ಕಟ್ಟಿಕೊಂಡಿದ್ದೇನೆ. ಆತನಂತೆ ಕೊಳ್ಳೆ ಹೊಡೆದ ಬಡವರ ಭೂಮಿಯಲ್ಲಿ ಶಾಲೆ, ಕಾಲೇಜು, ಮುಗಿಲೆತ್ತರದ ಕಟ್ಟಡಗಳನ್ನು ಸೇರಿ ಕೋಟೆ ಕೊತ್ತಲಗಳನ್ನು ಕಟ್ಟಿಕೊಂಡಿಲ್ಲ. ಎಲ್ಲವೂ ಹೊರಬರುತ್ತೆ, ನಿಮ್ಮ ಕಷ್ಟದ ದಿನಗಳು ಆರಂಭವಾಗಿವೆ ಎಂದು ಕಿಡಿಕಾರಿದರು.
ಬೆಂಗಳೂರು ಸುತ್ತಮುತ್ತ ನೈಸ್ ರಸ್ತೆ ಇದೆ. ಹೊಸಕೆರೆಹಳ್ಳಿ ಸುತ್ತಮುತ್ತ ಸಾರ್ವಜನಿಕರಿಂದ ಸ್ವಾಧೀನ ಮಾಡಿಕೊಂಡಿರುವ ಭೂಮಿಯನ್ನೂ ಡಿಕೆಶಿ ಕಬಳಿಸಿದ್ದಾರೆ. ಜೊತೆಗೆ, ಹಿಂದೆ ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ ಇದೇ ಶಿವಕುಮಾರ್ ಸಚಿವರಾಗಿದ್ದರು. ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ರಸ್ತೆ ಮಾಡುತ್ತೇವೆ ಭಾರೀ ಪ್ರಮಾಣದಲ್ಲಿ ಭೂಮಿಯನ್ನು ಸ್ವಾಧೀನ ಮಾಡಿಕೊಂಡರು. ಅದಕ್ಕೊಂದು ಪ್ರಾಧಿಕಾರ ಮಾಡಿ ಅದಕ್ಕೆ ಇವರೇ ಅಧ್ಯಕ್ಷರಾದರು ಎಂದು ವಾಗ್ದಾಳಿ ನಡೆಸಿದರು.
ಇಪ್ಪತ್ತು ವರ್ಷದ ಮೇಲೆ ಆಯಿತು. ರಸ್ತೆ ನಿರ್ಮಾಣ ಮಾಡಿದರಾ? ಇಲ್ಲ.. ಆ ಭೂಮಿಯನ್ನು ನುಂಗಲು ಹೊರಟಿದ್ದಾರೆ. ಆದರೆ, ಕೇವಲ ಎರಡು ಮೂರು ವರ್ಷದಲ್ಲಿ ಬೆಂಗಳೂರು-ಮೈಸೂರು ನೂತನ ಹೆದ್ದಾರಿ ನಿರ್ಮಾಣವಾಯಿತು. ನಾನು ಸಿಎಂ ಆಗಿದ್ದಾಗ ಅತ್ಯಂತ ಕ್ಷಿಪ್ರಗತಿಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಲಾಯಿತು ಎಂದು ತಿಳಿಸಿದರು.
Advertisement