

ಬೆಂಗಳೂರು: ಸಿದ್ದರಾಮಯ್ಯ ಬಣದ ನಾಯಕರು ಮತ್ತು ಶಾಸಕರು ಏ.12ರಿಂದ 2 ದಿನಗಳ ಕಾಲ ದೆಹಲಿಗೆ ಭೇಟಿ ನೀಡಲು ಸಜ್ಜಾಗುತ್ತಿದ್ದು, ಇದರ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ ವಿಚಾರ ಕುರಿತ ಚರ್ಚೆ ಗರಿಗೆದರಿದೆ.
ವಿಧಾನಸಭೆಯ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ನೇತೃತ್ವದ ತಂಡದಲ್ಲಿ ಇತ್ತೀಚೆಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದ 30-35 ಶಾಸಕರು ದೆಹಲಿಗೆ ಭೇಟಿ ನೀಡುತ್ತಿದ್ದಾರೆಂದು ಮೂಲಗಳು ತಿಳಿಸಿವೆ.
ಈ ತಂಡವು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ ಸಿ ವೇಣುಗೋಪಾಲ್ ಮತ್ತು ಕರ್ನಾಟಕದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಲು ಚಿಂತನೆ ನಡೆಸಿದ್ದಾರೆಂದು ತಿಳಿದುಬಂದಿದೆ.
ಸಚಿವ ಸಂಪುಟ ಪುನಾರಚನೆಗೆ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಒಪ್ಪಿಗೆ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದ್ದು, ಇದರ ಬೆನ್ನಲ್ಲೇ ಸಚಿವರಾಗಲು ಶಾಸಕರು ಲಾಬಿ ನಡೆಸಲು ಮುಂದಾಗಿದ್ದಾರೆಂದು ತಿಳಿದುಬಂದಿದೆ.
ಪಕ್ಷದ ಹಿತದೃಷ್ಟಿಯಿಂದ ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಸಬೇಕೆಂದು ಅವರು ಒತ್ತಾಯಿಸಬಹುದು ಎಂದು ಮೂಲವೊಂದು ಟಿಎನ್‌ಐಇಗೆ ತಿಳಿಸಿದೆ.
ಟಿಬಿ ಜಯಚಂದ್ರ, ಬೇಲೂರು ಗೋಪಾಲಕೃಷ್ಣ, ಟಿ ರಘುಮೂರ್ತಿ, ಕೆಎಂ ಶಿವಲಿಂಗೇಗೌಡ, ಕೆ ಷಡಕ್ಷರಿ, ಬಿಆರ್ ಪಾಟೀಲ್, ರಾಜು ಕಾಗೆ, ಲಕ್ಷ್ಮಣ್ ಸವದಿ, ಎಆರ್ ಕೃಷ್ಣಮೂರ್ತಿ, ಕೆವೈ ನಂಜೇಗೌಡ, ಎಸ್‌ಎನ್ ನಾರಾಯಣಸ್ವಾಮಿ, ರಾಘವೇಂದ್ರ ಹಿಟ್ನಾಳ್, ಎಸ್‌ಆರ್ ಶ್ರೀನಿವಾಸ್, ರಮೇಶ್ ಬಂಡಿಸಿದ್ದೇಗೌಡ, ಸುಬ್ಬಾರೆಡ್ಡಿ, ಜಿಎಸ್ ಪಾಟೀಲ್ ಸೇರಿದಂತೆ ಇತರರು ದೆಹಲಿಗೆ ಭೇಟಿ ನೀಡುತ್ತಿದ್ದಾರೆಂದು ಎಂದು ಮೂಲಗಳು ತಿಳಿಸಿವೆ.
ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರು ಸಿದ್ದರಾಮಯ್ಯ ತಮ್ಮ ಪೂರ್ಣ ಅವಧಿಯನ್ನು ಪೂರ್ಣಗೊಳಿಸುತ್ತಾರೆ ಎಂದು ಹೇಳಿದ ಕೆಲವು ದಿನಗಳ ನಂತರ ಈ ಬೆಳವಣಿಗೆಗಳು ಕಂಡು ಬಂದಿವೆ.
ಈ ನಡುವೆ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಹೇಗೇ ಬಂದರೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂಬ ನಿಲುವನ್ನು ಸಿದ್ದು ಬಣ ಕೈಗೊಂಡಿದ್ದು, ಈ ಸಂದೇಶವನ್ನು ಹೈಕಮಾಂಡ್'ಗೆ ತಲುಪಿಸಲು ಸಜ್ಜಾಗಿದ್ದಾರೆಂದು ತಿಳಿದುಬಂದಿದೆ.
ಕೇರಳ ಚುನಾವಣೆ ಏಪ್ರಿಲ್ 9ರಂದು ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ಮತದಾನ ಪೂರ್ಣಗೊಂಡ ಬಳಿಕ ನಾಯಕರು ಲಭ್ಯವಾಗಲಿದ್ದಾರೆ. ಹೀಗಾಗಿ ಏ.12ರಂದು ದೆಹಲಿಗೆ ಭೇಟಿ ನೀಡಲು ಸಿದ್ದು ಬಣ ಯೋಜನೆ ರೂಪಿಸಿದೆ ಎಂದು ಮೂಲಗಳು ತಿಳಿಸಿವೆ.
ಏತನ್ಮಧ್ಯೆ ಸಿದ್ದರಾಮಯ್ಯ ಅವರೂ ಕೂಡ ಸಚಿವ ಸಂಪುಟ ಪುನರ್‌ರಚನೆಗೆ ಅನುಮತಿ ಪಡೆಯಲು ಶೀಘ್ರದಲ್ಲೇ ದೆಹಲಿಗೆ ತೆರಳುವ ಸಾಧ್ಯತೆ ಇದೆ.
ಮತ್ತೊಂದೆಡೆ ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ ನೇತೃತ್ವದ ಮೊದಲ ಬಾರಿಗೆ ಆಯ್ಕೆಯಾಗಿರುವ ಶಾಸಕರು, ಡಿಕೆ.ಶಿವಕುಮಾರ್ ಬೆಂಬಲಿದ ನಾಯಕರು-ಶಾಸಕರು ಸಿಎಂ ಬದಲಾವಣೆ ವಿಷಯವನ್ನು ಮತ್ತೆ ಮುನ್ನೆಲೆಗೆ ತರಲು ಯೋಜನೆಯನ್ನು ರೂಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಮುಖ್ಯಸ್ಥ ಡಿಕೆ ಶಿವಕುಮಾರ್ ಶೀಘ್ರದಲ್ಲೇ ಹೈಕಮಾಂಡ್ ಭೇಟಿ ನೀಡುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಗ್ರಾಮೀಣಾಭಿವೃದ್ಧಿ ಹಾಗೂ ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆಯವರು, ನಾಯಕತ್ವ ಬದಲಾವಣೆ ಕುರಿತ ಅಂತಿಮ ನಿರ್ಧಾರವನ್ನು ಹೈಕಮಾಂಡ್, ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಸೇರಿ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದು, ಏಪ್ರಿಲ್ 9 ನಂತರದ ಬೆಳವಣಿಗೆಗಳನ್ನು ಕಾದು ನೋಡಬೇಕಿದೆ. ಅಲ್ಲಿಯವರೆಗೂ ಇತರರು ಏನು ಮಾತನಾಡುತ್ತಾರೆ (ನಾಯಕತ್ವ ಬದಲಾವಣೆ) ಎಂಬುದು ಅಪ್ರಸ್ತುತ ಎಂದು ತಿಳಿಸಿದ್ದಾರೆ.
Advertisement