

ಮಂಡ್ಯ: ಶ್ರೀರಂಗಪಟ್ಟಣದ ಜೆಡಿಎಸ್‌ನ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದ ಬಗ್ಗೆ ಸಾಕಷ್ಟು ಬಾರಿ ಚರ್ಚೆಯಾಗಿತ್ತು. ಆದರೆ, ಇದೀಗ ದಿಢೀರ್ ಸ್ಫೋಟಗೊಂಡಿದೆ.
ಪಟ್ಟಣದ ರೈಲ್ವೆ ನಿಲ್ದಾಣಕ್ಕೆ ಜನರ ಅಹವಾಲು ಆಲಿಸಲು ಗುರುವಾರ ಆಗಮಿಸಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಜೆಡಿಎಸ್‌ನ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.
ಗುರುವಾರ ಶ್ರೀರಂಗಪಟ್ಟಣ ರೈಲ್ವೆ ನಿಲ್ದಾಣ ಪರಿಶೀಲನೆಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಆಗಮಿಸಿದ್ದರು. ರವೀಂದ್ರ, ಶ್ರೀರಂಗಪಟ್ಟಣ ರೈಲ್ವೆ ನಿಲ್ದಾಣಕ್ಕೆ ಬಂದರೂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡದಿರುವುದು ಭಿನ್ನಮತಕ್ಕೆ ಪುಷ್ಠಿ ನೀಡಿದಂತಿದೆ.
2028ರ ಚುನಾವಣೆಗೆ ಜೆಡಿಎಸ್‌ನಿಂದ ಪರ್ಯಾಯ ಅಭ್ಯರ್ಥಿ ಹೆಸರು ಕೇಳಿ ಬರುತ್ತಿದ್ದಂತೆ ರವೀಂದ್ರ ದಳಪತಿಗಳ ವಿರುದ್ಧ ಮುನಿಸಿಕೊಂಡಿದ್ದರು. ಆದರೆ, ಎಲ್ಲಿಯೂ ಬಹಿರಂಗಗೊಳಿಸಿರಲಿಲ್ಲ.
ಎಚ್.ಡಿ. ಕುಮಾರಸ್ವಾಮಿ, ವಿ.ಸೋಮಣ್ಣ, ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಇಲ್ಲಿನ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ವೇಳೆ ಜೆಡಿಎಸ್ ಕಾರ್ಯಕರ್ತರು ಆರಂಭದಲ್ಲಿ ಕುಮಾರಸ್ವಾಮಿ ಮತ್ತು ರವೀಂದ್ರ ಶ್ರೀಕಂಠಯ್ಯ ಅವರ ಪರ ಘೋಷಣೆ ಕೂಗಿದರು. ರೈಲಿನ ಒಳಗೆ, ಕೇಂದ್ರ ಸಚಿವರ ಜತೆ ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ ಕುಳಿತಿರುವುದನ್ನು ಗಮನಿಸಿದ ಬಳಿಕ ರವೀಂದ್ರ ಶ್ರೀಕಂಠಯ್ಯ ಅವರನ್ನೂ ರೈಲಿಗೆ ಹತ್ತಿಸಿಕೊಳ್ಳಿ ಎಂದು ಒತ್ತಾಯಿಸಿದರು.
ರೈಲುಗಳಲ್ಲಿ ಪ್ರಯಾಣಿಸುವವರ ಅಹವಾಲು ಆಲಿಸುವ ಸಂಬಂಧ ಸ್ಥಳೀಯ ಮುಖಂಡರಿಗೆ ನಿನ್ನೆಯೇ ತಿಳಿಸಲಾಗಿದೆ. ರವೀಂದ್ರ ಶ್ರೀಕಂಠಯ್ಯ ಎಲ್ಲಿದ್ದಾರೆ, ಇಲ್ಲಿಗೆ ಕರೆಯಿರಿ ಎಂದು ಕುಮಾರಸ್ವಾಮಿ ಹೇಳಿದರು. ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಿ. ರಮೇಶ್ ಕೂಡ ರವೀಂದ್ರ ಅವರತ್ತ ಕೈ ಬೀಸಿ ಕೂಗಿದರು. ಟಿಕೆಟ್ ಕೌಂಟರ್ ಬಳಿ ನಿಂತಿದ್ದ ರವೀಂದ್ರ ಶ್ರೀಕಂಠಯ್ಯ ಮಾತ್ರ ಸ್ಥಳ ಬಿಟ್ಟು ಕದಲಿಲ್ಲ.
ಇದರಿಂದ ಬೇಸರಗೊಂಡ ಎಚ್.ಡಿ. ಕುಮಾರಸ್ವಾಮಿ, ನಾನು ರಾಜಕಾರಣ ಮಾಡಲು ಇಲ್ಲಿಗೆ ಬಂದಿಲ್ಲ. ಮಂಡ್ಯ ಜಿಲ್ಲೆಯ ಜನರ ಅಹವಾಲು ಆಲಿಸಿ ಪರಿಹಾರ ಹುಡುಕಲು ಬಂದಿದ್ದೇನೆ. ಸಮಸ್ಯೆ ಏನಾದರೂ ಇದ್ದರೆ ಹೇಳಿ. ಇದೆಲ್ಲ ಒಳ್ಳೆಯದಲ್ಲ ಎಂದರು.
ಈ ಮಾತಿನಿಂದ ತೃಪ್ತರಾಗದ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರು ಕುಮಾರಸ್ವಾಮಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರೈಲಿನಿಂದ ಇಳಿದು ರವೀಂದ್ರ ಅವರನ್ನು ಮಾತಾಡಿಸಿ. ಇಲ್ಲದಿದ್ದರೆ ನಮಗೂ ಸಮಯ ಬರುತ್ತದೆ, ನೋಡ್ತಾ ಇರಿ ಎಂದು ಏರಿದ ದನಿಯಲ್ಲಿ ಹೇಳಿದರು.
Advertisement