

ಬೆಂಗಳೂರು: ಅಂಬೇಡ್ಕರ್ ಫೋಟೋ ಮತ್ತು ಸಂವಿಧಾನದ ಪ್ರತಿಯನ್ನು ಜೇಬಿನಲ್ಲಿಟ್ಟುಕೊಂಡು ಓಡಾಡಿದ್ರೆ ಉಪಯೋಗವಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಪರೋಕ್ಷವಾಗಿ ರಾಹುಲ್ ಗಾಂಧಿಗೆ ಟಾಂಗ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇಡೀ ಪ್ರಪಂಚದಲ್ಲಿ ನಮ್ಮ ದೇಶದಂತ ಸಂವಿಧಾನ ಎಲ್ಲೂ ಇಲ್ಲ, ಅಂತಹ ಸಂವಿಧಾನವನ್ನು ಅಂಬೇಡ್ಕರ್ ರಚಿಸಿದ್ದಾರೆ. ಅವರಿಗೆ ಚಿರ ಋುಣಿಗಳಾಗಿ ನಾವಿರಬೇಕು. ಅಂಬೇಡ್ಕರ್ ಫೋಟೋ ಮತ್ತು ಸಂವಿಧಾನದ ಪ್ರತಿಯನ್ನು ಜೇಬಿನಲ್ಲಿಟ್ಟುಕೊಂಡು, ಕೆಂಪು ಬಣ್ಣದೊಂದು ಡೈರಿ ತೋರಿಸಿಕೊಂಡು ಪಾರ್ಲಿಮೆಂಟ್ ನಲ್ಲಿ ಓಡಾಡಿದ್ರೆ ಏನು ಉಪಯೋಗವಿಲ್ಲ. ಸಂವಿಧಾನವನ್ನು ರಕ್ಷಿಸುವ ಕೆಲಸ ಮಾಡಬೇಕು
ಈ ಸರ್ಕಾರ ಹೋರಾಟ ಮಾಡು ಉದ್ದೇಶದಿಂದ ನಾನು ಕೂಡ ಸುಮ್ಮನೆ ಇರುವ ಹಾಗಿಲ್ಲ. ಜನರ ಪರವಾಗಿ ನಾನು ಸಹ ದನಿ ಎತ್ತಬೇಕಾಗಿದೆ. ಇನ್ನು ಮುಂದೆ ವಾರದಲ್ಲಿ ಎರಡು ದಿನ ಕರ್ನಾಟಕದಲ್ಲೇ ಇರುತ್ತೇನೆ. ಪಕ್ಷವನ್ನು ಸಂಘಟನೆ ಮಾಡುತ್ತೇನೆ ಹಾಗೂ ಜನರ ಪರವಾಗಿಯೂ ಹೋರಾಟ ನಡೆಸುತ್ತೇನೆ ಎಂದು ಕೇಂದ್ರ ಸಚಿವರು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಿ. ಪೊಲೀಸ್ ಕೇಸುಗಳಿಗೆಲ್ಲ ಹೆದರಬೇಡಿ. ಆ ಕೇಸುಗಳನ್ನು ಕಿತ್ತೆಸೆಯುವುದು ನಮ್ಮ ಜವಾಬ್ದಾರಿ ಎಂದು ಕುಮಾರಸ್ವಾಮಿ ಅವರು ನಿರುದ್ಯೋಗಿ ಯುವಕರಿಗೆ ಧೈರ್ಯ ತುಂಬಿದರು.
ಈ ಕೆಟ್ಟ ಸರ್ಕಾರದ ವಿರುದ್ಧ ಇಡೀ ರಾಜ್ಯದ ಎಲ್ಲೆಡೆ ಹೋರಾಟ ಮಾಡಬೇಕು. ಧಾರವಾಡ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ಹೋರಾಟ ನಡೆಸಬೇಕು. ಇದನ್ನು ನಾನು ರಾಜಕೀಯಕ್ಕಾಗಿ ಕೇವಲ ರಾಜಕೀಯಕ್ಕಾಗಿ ಹೇಳುತ್ತಿಲ್ಲ. ಪ್ರತಿಭಾವಂತ ನಿರುದ್ಯೋಗಿ ಯುವಜನರ ಭವಣೆಯನ್ನು ಕಂಡು ರೋಸಿ ಹೋಗಿ ಹೇಳುತ್ತಿದ್ದೇನೆ ಎಂದು ಕೇಂದ್ರ ಸಚಿವರು ಬೇಸರದಿಂದ ಹೇಳಿದರು.
ನಾನು ಮುಕ್ತ ಮನಸ್ಸಿನಿಂದ ಹೇಳುತ್ತಿದ್ದೇನೆ. ಈ ಸರ್ಕಾರದಿಂದ ರಾಜ್ಯಕ್ಕೆ ಒಳ್ಳೆಯದು ಆಗುವುದಿಲ್ಲ. ನಾವು ಅಧಿಕಾರದಲ್ಲಿದ್ದಾಗ ಮಾತ್ರ ಈ ರಾಜ್ಯಕ್ಕೆ ಒಳ್ಳೆಯದಾಗಿದೆ. ಹೀಗಾಗಿ ಮುಂದೆ ನಾವು ಜನರ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಬೇಕಾಗಿದೆ ಎಂದು ಸಚಿವರು ಹೇಳಿದರು.
ಅತಿಯಾಗಿ ಓಲೈಸಲ್ಪಟ್ಟ ಸಮುದಾಯದ ನಾಯಕರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು. ಇದು ಕಾಂಗ್ರೆಸ್‌ನ ದ್ವಂದ್ವ ನೀತಿಯನ್ನು ಪ್ರತಿಬಿಂಬಿಸುತ್ತದೆ. ಜನರು ಎಲ್ಲವನ್ನೂ ಬಹಳ ಹತ್ತಿರದಿಂದ ಗಮನಿಸುತ್ತಿದ್ದಾರೆ.
ಪ್ರಜಾಪ್ರಭುತ್ವದಲ್ಲಿ, ಎಲ್ಲಾ ಸಮುದಾಯಗಳನ್ನು ಸಮಾನವಾಗಿ ನೋಡಬೇಕು. ಒಬ್ಬರು ಒಂದು ಸಮುದಾಯವನ್ನು ಓಲೈಸುವಾಗ ಇನ್ನೊಂದು ಸಮುದಾಯವನ್ನು ದಮನ ಮಾಡಬಾರದು. ರಾಜಕೀಯ ಪಕ್ಷಗಳು ಯಾವುದೇ ಒಂದು ಸಮುದಾಯದ ಶಾಶ್ವತ ಬೆಂಬಲವನ್ನು ಅವಲಂಬಿಸಲು ಸಾಧ್ಯವಿಲ್ಲ" ಎಂದು ಅವರು ಹೇಳಿದರು.
Advertisement