

ಬೆಂಗಳೂರು: ದಾವಣಗೆರೆ ದಕ್ಷಿಣ ಉಪಚುನಾವಣೆ ಫಲಿತಾಂಶ ಹೊರಬೀಳಬೇಕಿದೆ, ಅಷ್ಟರೊಳಗೆ ಕಾಂಗ್ರೆಸ್ ನೊಳಗೆ ಹಲವು ಬೆಳವಣಿಗೆಗಳು ನಡೆದು ಹೋಗಿವೆ. ದಾವಣಗೆರೆ ದಕ್ಷಿಣದಲ್ಲಿ ಮುಸಲ್ಮಾನ ನಾಯಕರಿಗೆ ಟಿಕೆಟ್ ಕೈತಪ್ಪಿದ ವಿಚಾರಕ್ಕೆ ನಡೆದ ರಾಜಕೀಯ ಬೆಳವಣಿಗೆಗಳಿಂದ ಇಬ್ಬರು ನಾಯಕರು ತಮ್ಮ ಸ್ಥಾನ ಕಳೆದುಕೊಳ್ಳುವಂತಾಯಿತು.
ಕೆಪಿಸಿಸಿ ಮಟ್ಟದಲ್ಲಿ ಮುಸ್ಲಿಂ ನಾಯಕರ ವಿರುದ್ಧ ತೆಗೆದುಕೊಂಡ ಕಠಿಣ ಕ್ರಮಗಳು ಈಗ ಸರ್ಕಾರದ ಒಳಗೂ ಸಂಚಲನ ಮೂಡಿಸಿವೆ. ಎಂಎಲ್ಸಿ ಅಬ್ದುಲ್ ಜಬ್ಬಾರ್ ಅಮಾನತು ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ನಸೀರ್ ಅಹ್ಮದ್ ರಾಜೀನಾಮೆ ವಿಚಾರ ನಿನ್ನೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಆಸ್ಫೋಟಗೊಂಡಿತು.
ನಿನ್ನೆ ಸಂಪುಟ ಸಭೆಯಲ್ಲಿ ಏನು ನಡೆಯಿತು?
ಮುಸ್ಲಿಂ ನಾಯಕರ ವಿರುದ್ಧದ ಕ್ರಮಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಸತೀಶ್ ಜಾರಕಿಹೊಳಿ ಸೇರಿದಂತೆ ಹಲವು ಸಚಿವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು ಎನ್ನಲಾಗುತ್ತಿದೆ. ನಾವು ಮುಸ್ಲಿಂ ಸಮುದಾಯವನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಪ್ರಿಯಾಂಕ್ ಖರ್ಗೆ ಎಚ್ಚರಿಸಿದರೆ, ಅಬ್ದುಲ್ ಜಬ್ಬಾರ್ ಮೇಲೆ ಕ್ರಮ ಕೈಗೊಂಡಿದ್ದು ತೀರಾ ಅವಸರದ ನಿರ್ಧಾರ. ಇದು ಸಮುದಾಯವೇ ನಮಗೆ ಸವಾಲು ಹಾಕುವಂತೆ ಮಾಡಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಲಿಂಗಾಯತ ಸಚಿವರ ಪ್ರತಿವಾದ
ಈ ವೇಳೆ ಮಧ್ಯಪ್ರವೇಶಿಸಿದ ಲಿಂಗಾಯತ ಸಮುದಾಯದ ಸಚಿವರು, ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ, ತಪ್ಪಾದಾಗ ಕ್ರಮ ಅನಿವಾರ್ಯ ಎಂದರು. ವಾದ-ಪ್ರತಿವಾದಗಳು ತಾರಕಕ್ಕೇರುತ್ತಿದ್ದಂತೆಯೇ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಸಭೆಯಿಂದ ಹೊರನಡೆದ ಘಟನೆ ನಡೆದಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಕೊನೆಗೆ ಸಿಎಂ ಸಿದ್ದರಾಮಯ್ಯ ಮಧ್ಯ ಪ್ರವೇಶಿಸಿ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಸಮಾಧಾನಪಡಿಸಿದ ಮೇಲೆ ಸಭೆ ತಿಳಿಯಾಯಿತು ಎಂದು ಹೇಳಲಾಗುತ್ತಿದೆ.
Advertisement