

ವಿಜಯನಗರ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಳೆದ 5 ದಶಕಗಳಿಂದ ಬಡವರು, ರೈತರ, ಶೋಷಿತರು, ಪೀಡಿತರ ಪರವಾಗಿ ಹೋರಾಟ ಮಾಡಿದವರು. ಇದು ಇಂದಿನ ಯುವಪೀಳಿಗೆ ಮತ್ತು ಎಲ್ಲ ರಾಜಕಾರಣಿಗಳಿಗೆ ಮಾದರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಎಸ್‍ವೈ ಅಭಿಮಾನೋತ್ಸವದ ಮುಖೇನ ಮತ್ತೊಮ್ಮೆ ಆ ಹೋರಾಟದ ಕಿಚ್ಚು ರಾಜ್ಯದಲ್ಲಿ ಬರಬೇಕಿದೆ. ಪ್ರಾಮಾಣಿಕವಾಗಿ ಎಲ್ಲ ಸಮುದಾಯದ ಪರವಾಗಿ ಧ್ವನಿ ಎತ್ತುವ ಕೆಲಸ ಆಗಬೇಕಿದೆ ಎಂದರು. ಯಡಿಯೂರಪ್ಪ ಒಂದು ಸಮುದಾಯದ ನಾಯಕರಲ್ಲ. ನಾಡಿನ ಎಲ್ಲ ಸಮುದಾಯದವರು ಅವರನ್ನು ತಮ್ಮ ನಾಯಕರೆಂದು ಗುರುತಿಸಿದ್ದಾರೆ ಎಂದು ಹೇಳಿದರು.
ಯಡಿಯೂರಪ್ಪನವರು ಪರಿಶ್ರಮದಿಂದ ರಾಜ್ಯದಲ್ಲಿ ಸಂಘಟನೆ ಮಾಡಿದವರು. ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಅವರು ಎಲ್ಲರಿಗೂ ಪ್ರೇರಣಾಶಕ್ತಿ ಎಂದು ವಿಶ್ಲೇಷಿಸಿದರು. ಯಡಿಯೂರಪ್ಪನವರ ಹೆಸರು ಕೇಳಿದರೆ ನಮ್ಮ ಕಾರ್ಯಕರ್ತರಲ್ಲಿ ರೋಮಾಂಚನ ಆಗುತ್ತದೆ ಎಂದರು. ಅವರು ಬಿಜೆಪಿಯ ಅಗ್ರಗಣ್ಯ ನಾಯಕರು ಎಂದು ತಿಳಿಸಿದರು.
ಯಡಿಯೂರಪ್ಪನವರ ಶಕ್ತಿಯನ್ನು ಬಳಸಿಕೊಂಡು ಬಿಜೆಪಿ ಸಂಘಟನೆಯನ್ನು ಬಲಪಡಿಸಲಾಗುವುದು ಎಂದು ಹೇಳಿದರು. ಸುಮಾರು 8ರಿಂದ 10 ಲಕ್ಷ ಜನರು ಈ ಕಾರ್ಯಕ್ರಮಕ್ಕೆ ಸೇರುವ ನಿರೀಕ್ಷೆ ಇದೆ ಎಂದು ಪ್ರಶ್ನೆಗೆ ಉತ್ತರಿಸಿದರು.
ಪಕ್ಷದಲ್ಲಿ ಯಡಿಯೂರಪ್ಪನವರಿಗೆ ಅನ್ಯಾಯ ಆಗಿಲ್ಲ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು. ನಮ್ಮದೊಂದು ರಾಷ್ಟ್ರೀಯ ಪಕ್ಷ. ಪಕ್ಷ ಯಾವತ್ತು ಬೇಕಾದರೂ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಎಂದು ಅವರು ರಾಜ್ಯಾಧ್ಯಕ್ಷ ಹುದ್ದೆ ಕುರಿತ ಪ್ರಶ್ನೆಗೆ ಉತ್ತರ ನೀಡಿದರು.
ನನ್ನನ್ನು ರಾಜ್ಯಾಧ್ಯಕ್ಷನಾಗಿ ಮಾಡಿದ್ದು, ರಾಜ್ಯಾದ್ಯಂತ ಪ್ರವಾಸ ಮಾಡಿ ಸಂಘಟನೆ ಕೆಲಸ ಮಾಡುತ್ತಿದ್ದೇನೆ. ಪಕ್ಷದ ತೀರ್ಮಾನಕ್ಕೆ ನಾವು ಬದ್ಧರಾಗಿ ಇರಬೇಕಾಗುತ್ತದೆ ಎಂದು ತಿಳಿಸಿದರು.
Advertisement