

ಬೆಂಗಳೂರು: ಸಂಪುಟ ವಿಸ್ತರಣೆ ಮಾತುಕತೆಗಾಗಿ ದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಿಂದ ಕಾದು ಕುಳಿತಿದ್ದ ರಾಜ್ಯ ನಾಯಕರಿಗೆ ಕೊನೆಗೂ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ಆದರೆ, ಸಚಿವರ ಪಟ್ಟಿ ಫೈನಲ್ ಆಗದೆ ಬರಿಗೈಲಿ ವಾಪಸಾದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು, ಸಚಿವ ಸಂಪುಟಕ್ಕೆ ಸೇರ್ಪಡೆಯಾದವರ ಪಟ್ಟಿ ಸೋಮವಾರ ಸಂಜೆ ಪ್ರಮಾಣವಚನ ಸ್ವೀಕಾರದ ಸಮಯದಲ್ಲಿ ಮಾತ್ರ ತಿಳಿಯುತ್ತದೆ ಎಂದು ಹೇಳುತ್ತಾ, ಸಸ್ಪೆನ್ಸ್ ಅನ್ನು ಮುಂದುವರೆಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ ಡಿಕೆ ಶಿವಕುಮಾರ್ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಪಟ್ಟಿಯನ್ನು ಮಂಡಿಸಿ, ತಮ್ಮ ಆಯ್ಕೆಯ ಕನಿಷ್ಠ ಐದು ಶಾಸಕರನ್ನು ಸಚಿವರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ, ಆದರೆ ಸಂಪುಟ ವಿಸ್ತರಣೆಯು ಅವರ ಆಕಾಂಕ್ಷೆಗಳನ್ನು ಈಡೇರಿಸದಿದ್ದರೆ ಭಿನ್ನಮತಕ್ಕೆ ಕಾರಣವಾಗಬಹುದು ಎಂದು ಮೂಲಗಳು ತಿಳಿಸಿವೆ
ದೆಹಲಿಯಲ್ಲಿ ಮೂರರಿಂದ ನಾಲ್ಕು ದಿನ ಕಾಯುವಂತೆ ಮಾಡಿ ತಮ್ಮ ಆಯ್ಕೆಯನ್ನು ವಿವರಿಸಲು ಸಮಯ ನೀಡದ ರಾಹುಲ್ ಗಾಂಧಿ ನಡವಳಿಕೆಗೆ ಸಿದ್ದರಾಮಯ್ಯ ನಿರಾಶೆಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಶಿವಕುಮಾರ್ ತಮ್ಮ ಸಂಪುಟಕ್ಕೆ ಹೊಸ ಮುಖಗಳು ಮತ್ತು ಎರಡು ಹೆಚ್ಚುವರಿ ಡಿಸಿಎಂ ಹುದ್ದೆಗಳು ಇರಬೇಕೆಂದು ಪ್ರಸ್ತಾಪಿಸಿದ್ದಾರೆ, ಆದರೆ ಖರ್ಗೆ ತಮ್ಮ ಕಲ್ಯಾಣ-ಕರ್ನಾಟಕ ಪ್ರದೇಶವನ್ನು ಸಮರ್ಪಕವಾಗಿ ಪ್ರತಿನಿಧಿಸಬೇಕೆಂದು ಬಯಸುತ್ತಿದ್ದಾರೆ.
ಗುರುವಾರ ಸಂಜೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಶಿವಕುಮಾರ್, ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರೊಂದಿಗೆ ಮಾತುಕತೆ ನಡೆಸಿದರು, ಆದರೆ ಅವರ ಪ್ರಸ್ತಾವನೆಗಳನ್ನು ಸ್ವೀಕರಿಸಿದರೇ ಹೊರತು,ಅನುಮೋದನೆ ನೀಡಲಿಲ್ಲ ಎಂದು ಮೂಲಗಳು ತಿಳಿಸಿವೆ.
ಪಟ್ಟಿಯನ್ನು ಅಂತಿಮಗೊಳಿಸಲು ರಾಹುಲ್ ಗಾಂಧಿ ಖರ್ಗೆ ಮತ್ತು ಪ್ರಧಾನ ಕಾರ್ಯದರ್ಶಿಗಳಾದ ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೆವಾಲಾ ಅವರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು ಎಂದು ಮತ್ತೊಂದು ಮೂಲಗಳು ತಿಳಿಸಿವೆ.
ಆದರೆ ಸುರ್ಜೆವಾಲಾ ಮತ್ತು ಖರ್ಗೆ ಮೇಲುಗೈ ಸಾಧಿಸುತ್ತಿರುವುದರಿಂದ ಸಿದ್ದರಾಮಯ್ಯ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. 5-6 ಸ್ಥಾನಗಳ ಬಗ್ಗೆ ಅಸ್ಪಷ್ಟತೆಯಿದ್ದರೂ, ಉಳಿದ ಖಾಲಿ ಹುದ್ದೆಗಳು ಮತ್ತು ವಿಧಾನಸಭಾ ಸ್ಪೀಕರ್ ಹುದ್ದೆಯ ಬಗ್ಗೆ ಒಮ್ಮತ ಮೂಡಿದೆ, ಇದು ಸುರ್ಜೆವಾಲಾ ಅವರ ಆಯ್ಕೆಯಾಗಿರುವ ಮಾಜಿ ಸಚಿವ ಬಸವರಾಜ ರಾಯರಡ್ಡಿ ಅವರಿಗೆ ಹೋಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
2023 ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಕೊಡುಗೆ ನೀಡಿದ ಹಿರಿಯ ಶಾಸಕರಿಗೆ ಸಂಪುಟ ದರ್ಜೆ ಸ್ಥಾನಗಳನ್ನು ನೀಡುವುದಾಗಿ ಮುಖ್ಯಮಂತ್ರಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಭರವಸೆ ನೀಡಿದ್ದರು ಈಗ ಅದನ್ನೂ ಪೂರೈಸಬೇಕಾಗಿದೆ ಎಂದು ಮೂಲಗಳು ತಿಳಿಸಿವೆ.
2028 ರ ವಿಧಾನಸಭಾ ಚುನಾವಣೆ ಮತ್ತು 2029 ರ ಲೋಕಸಭಾ ಚುನಾವಣೆಗಳನ್ನು ಗೆಲ್ಲುವತ್ತ ರಾಹುಲ್ ಗಮನಹರಿಸುತ್ತಿರುವುದರಿಂದ, ಪಕ್ಷವು ಸಂಕಷ್ಟದ ಸಮಯದಲ್ಲಿ ಸಹಾಯ ಮಾಡಿದವರಿಗೆ ಅವಕಾಶ ನೀಡುವ ಸಾಧ್ಯತೆಯೂ ಇದೆ.
ಅವರು ಸಮೀಕ್ಷೆಯೊಂದನ್ನು ನಡೆಸಿದ್ದು, ಮತದಾರರ ಮೇಲೆ ಪ್ರಭಾವ ಬೀರುವ ಶಾಸಕರು ಸಂಪುಟದಲ್ಲಿ ಇರಬೇಕೆಂದು ಬಯಸುತ್ತಾರೆ ಎಂದು ಮೂಲಗಳು ತಿಳಿಸಿವೆ.
ಯಾರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡರೆ ಸರಕಾರದ ವರ್ಚಸ್ಸು ಹೆಚ್ಚುತ್ತದೆ ಮತ್ತು ಪಕ್ಷಕ್ಕೆ ಅನುಕೂಲವಾಗಲಿದೆ ಎಂಬ ಬಗ್ಗೆ ಎಐಸಿಸಿ ನಾಯಕರು ಸಮೀಕ್ಷೆಯ ವರದಿಯನ್ನು ಮುಂದಿಟ್ಟುಕೊಂಡು ಹೆಸರುಗಳ ಬಗ್ಗೆ ಪರಿಶೀಲನೆ ನಡೆಸಿದರು. ಆದರೆ, ರಾಜ್ಯ ನಾಯಕರು ಸೂಚಿಸಿದ ಹೆಸರುಗಳಿಗೂ ವರಿಷ್ಠರ ಸಮೀಕ್ಷೆ ವರದಿಗೂ ಹೊಂದಾಣಿಕೆಯಾಗಲಿಲ್ಲ ಎಂದು ತಿಳಿದು ಬಂದಿದೆ.