

ಬೆಂಗಳೂರು: ಮಾಜಿ ಸಚಿವ ವಿನಯ್ ಕುಲಕರ್ಣಿ ಜೈಲಿನಿಂದ ಬಿಡುಗಡೆಯಾಗಿ ಬಂದ ಕೂಡಲೇ ಇಂದು ಬೆಳಗ್ಗೆ ಪತ್ನಿ ಮತ್ತು ಮಕ್ಕಳ ಜೊತೆ ಬೆಂಗಳೂರಿನ ಸದಾಶಿವನಗರದಲ್ಲಿರುವ ಸಿಎಂ ಡಿ ಕೆ ಶಿವಕುಮಾರ್ ನಿವಾಸಕ್ಕೆ ತೆರಳಿ ಅವರನ್ನು ಭೇಟಿ ಮಾಡಿದ್ದಾರೆ.
ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಬಿಗ್ ರಿಲೀಫ್ ಸಿಕ್ಕಿದೆ. ಹೈಕೋರ್ಟ್ ವಿಭಾಗೀಯ ಪೀಠ ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿದೆ. ಸ್ಪೆಷಲ್ ಕೋರ್ಟ್ ವಿಧಿಸಿರುವ ಶಿಕ್ಷೆ ಅಮಾನತ್ತಿನಲ್ಲಿಟ್ಟು ತಡೆ ನೀಡಿದೆ. ದೋಷಿ ತೀರ್ಪಿಗೂ ತಡೆ ನೀಡಿ ನ್ಯಾಯಮೂರ್ತಿ ಬಸವರಾಜ್ ಹಾಗೂ ಮೊಹಮ್ಮದ್ ನವಾಜ್ ಅವರಿದ್ದ ವಿಭಾಗೀಯ ಪೀಠ ಆದೇಶಿಸಿದೆ. ಇದೀಗ ಹೊರ ಬಂದ ಕೂಡಲೇ ಡಿಕೆಶಿ ಭೇಟಿ ಮಾಡಿದ್ದಾರೆ.
ಈ ವೇಳೆ ಅವರನ್ನು ಮಾಧ್ಯಮ ಪ್ರತಿನಿಧಿಗಳು ಮಾತನಾಡಲು ಯತ್ನಿಸಿದಾಗ, ಹೈಕೋರ್ಟ್ ನ್ಯಾಯಾಧೀಶರುಗಳಿಗೆ, ಕ್ಷೇತ್ರದ ಜನತೆಗೆ ಧನ್ಯವಾದ ಹೇಳುತ್ತೇನೆ, ಈಗ ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ಸಿಎಂ ಜೊತೆಗೆ ಏನು ಚರ್ಚೆ ಮಾಡಿಲ್ಲ. ಮುಂದೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
ನಿನ್ನೆ ರಾತ್ರಿ ಜೈಲಿನಿಂದ ಹೊರಬಂದ ವಿನಯ್ ಕುಲಕರ್ಣಿ ಮಾಧ್ಯಮಗಳೊಂದಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ನೇರವಾಗಿ ವಾಹನದಲ್ಲಿ ತೆರಳಿದರು. ಈ ವೇಳೆ ಜೈಲು ಹೊರಗೆ ಸೇರಿದ್ದ ಅಭಿಮಾನಿಗಳು ಅವರಿಗೆ ಹೂವಿನ ಹಾರ ಹಾಕಿ ಸ್ವಾಗತ ಕೋರಿದರು. ಕೆಲ ಅಭಿಮಾನಿಗಳೊಂದಿಗೆ ಶೇಕ್‌ಹ್ಯಾಂಡ್ ಮಾಡಿ ಅವರು ಅಲ್ಲಿಂದ ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ನಿವಾಸದತ್ತ ತೆರಳಿದ್ದರು.
ಯೋಗೇಶ್‌ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ವಿನಯ್ ಕುಲಕರ್ಣಿ, ತಮ್ಮ ಶಿಕ್ಷೆಗೆ ತಡೆ ನೀಡುವಂತೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಶಿಕ್ಷೆಗೆ ತಾತ್ಕಾಲಿಕ ತಡೆ ನೀಡಿ ಜಾಮೀನು ಮಂಜೂರು ಮಾಡಿತ್ತು. 106 ದಿನಗಳ ಜೈಲುವಾಸದ ಬಳಿಕ ಹೈಕೋರ್ಟ್ ಜಾಮೀನಿನ ಮೇಲೆ ವಿನಯ್ ಕುಲಕರ್ಣಿ ಬಿಡುಗಡೆಯಾಗಿದ್ದಾರೆ. ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 10 ಆರೋಪಿಗಳಿಗೆ ಜಾಮೀನು ಸಿಕ್ಕಿದೆ.