ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಬಂಡಾಯ ಬಿಸಿ: ಶಾಸಕರ ಅಸಮಾಧಾನ ಭುಗಿಲು

ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರು ನಿರ್ಗಮಿಸಿರುವುದನ್ನು ಉಲ್ಲೇಖಿಸಿದ ರಾಜಣ್ಣ, ಈ ಬೆಳವಣಿಗೆಯನ್ನು ನಿಭಾಯಿಸುವುದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ದೊಡ್ಡ ಸವಾಲಾಗಲಿದ್ದು, 2028ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದು ಕಷ್ಟವಾಗಲಿದೆ ಎಂದು ಅಭಿಪ್ರಾಯಪಟ್ಟರು.
Supporters of former minister and Gandhinagar MLA Dinesh Gundu Rao protest in front of the KPCC office on Tuesday
ಡಿ.ಕೆ. ಶಿವಕುಮಾರ್ ಸಚಿವ ಸಂಪುಟದಲ್ಲಿ ಮಾಜಿ ಸಚಿವ ಹಾಗೂ ಗಾಂಧಿನಗರ ಶಾಸಕ ದಿನೇಶ್ ಗುಂಡೂರಾವ್ ಅವರಿಗೆ ಸ್ಥಾನ ನೀಡದ ಹಿನ್ನೆಲೆಯಲ್ಲಿ, ಅವರ ಬೆಂಬಲಿಗರು ಕೆಪಿಸಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
Updated on

ಬೆಂಗಳೂರು: ಕಳೆದ ಸೋಮವಾರ ನಡೆದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆಯ ನಂತರ ಉಂಟಾಗಿರುವ ರಾಜಕೀಯ ಅಸಮಾಧಾನ ಕಾಂಗ್ರೆಸ್‌ನಲ್ಲಿ ಮುಂದುವರಿದಿದೆ. ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಹಲವು ಅಸಮಾಧಾನಿತ ಶಾಸಕರು ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದ್ದು, ಅವರ ಬೆಂಬಲಿಗರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವೆ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು, 2028ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗಲಿದೆ ಎಂದು ನೀಡಿದ ಎಚ್ಚರಿಕೆ ಪಕ್ಷದ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರು ನಿರ್ಗಮಿಸಿರುವುದನ್ನು ಉಲ್ಲೇಖಿಸಿದ ರಾಜಣ್ಣ, ಈ ಬೆಳವಣಿಗೆಯನ್ನು ನಿಭಾಯಿಸುವುದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ದೊಡ್ಡ ಸವಾಲಾಗಲಿದ್ದು, 2028ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದು ಕಷ್ಟವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕದ ಇತಿಹಾಸವನ್ನು ನೋಡಿ, ಯಾವಾಗ ಮಧ್ಯಂತರದಲ್ಲಿ ಮುಖ್ಯಮಂತ್ರಿಯನ್ನು ಬದಲಾಯಿಸಲಾಗಿದೆಯೋ, ಆ ಪಕ್ಷ ಮುಂದಿನ ಚುನಾವಣೆಯಲ್ಲಿ ಸೋಲು ಕಂಡಿದೆ. ವೀರೇಂದ್ರ ಪಾಟೀಲ, ಎಸ್. ಬಂಗಾರಪ್ಪ ಹಾಗೂ ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ಸಂದರ್ಭದಲ್ಲೂ ಇದೇ ಆಗಿತ್ತು. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿರುವುದೇ ಪಕ್ಷಕ್ಕೆ ಹಾನಿಯಾಗಿದೆ ಎಂದು ರಾಜಣ್ಣ ಸುದ್ದಿಗಾರರಿಗೆ ತಿಳಿಸಿದರು.

ಸಚಿವ ಸ್ಥಾನ ಸಿಕ್ಕಿಲ್ಲವೆಂದು ಅಸಮಾಧಾನಗೊಂಡ ಶಾಸಕರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಠಿಣ ಎಚ್ಚರಿಕೆ ನೀಡಿದರು. ರಾಜೀನಾಮೆ ನೀಡಲು ಬಯಸುವವರು ನೀಡಬಹುದು, ಅಂತಹ ರಾಜೀನಾಮೆಗಳನ್ನು ಕೆಲವೇ ನಿಮಿಷಗಳಲ್ಲಿ ಅಂಗೀಕರಿಸಲಾಗುವುದು ಎಂದು ಅವರು ಹೇಳಿದರು.

ಹೇಳಬೇಕಿದ್ದನ್ನು ನಾನು ಹೇಳಿದ್ದೇನೆ. ರಾಜಕೀಯದಲ್ಲಿ ರಾಜೀನಾಮೆಗಳು ಆಗುತ್ತಲೇ ಇರುತ್ತವೆ. ರಾಜೀನಾಮೆ ನೀಡಲು ಬಯಸುವವರನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಅವರಿಗೆ ಪಕ್ಷವೂ ಬೇಕು, ತಮ್ಮ ರಾಜಕೀಯ ಭವಿಷ್ಯವೂ ಬೇಕು ಎಂದಾದರೆ ಪಕ್ಷವೇ ಮುಖ್ಯ. ಪಕ್ಷ ಇದ್ದರೆ ಎಲ್ಲವೂ ಇರುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.

ಇದಕ್ಕೆ ತಿರುಗೇಟು ನೀಡಿದ ಮಾಜಿ ಸಚಿವ ಹಾಗೂ ಚಿಂತಾಮಣಿ ಶಾಸಕ ಎಂ.ಸಿ. ಸುಧಾಕರ್, ರಾಜೀನಾಮೆ ನೀಡಲು ಇಚ್ಛಿಸುವವರು ಕೊಡಲಿ ಎನ್ನುವುದು ಮುಖ್ಯಮಂತ್ರಿಯವರ ಶೈಲಿ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವಿನ ನಾಯಕತ್ವದ ಸಮತೋಲನವನ್ನು ಉಲ್ಲೇಖಿಸಿದ ಸುಧಾಕರ್, ಈ ಬಿಕ್ಕಟ್ಟನ್ನು ಪಕ್ಷ ಹೇಗೆ ಬಗೆಹರಿಸಲಿದೆ ಎಂದು ಪ್ರಶ್ನಿಸಿದರು. ಕೆಲವು ಜಿಲ್ಲೆಗಳಿಂದ ಈಗಾಗಲೇ ಸಾಕಷ್ಟು ಶಾಸಕರಿಗೆ ಅವಕಾಶ ನೀಡಲಾಗಿರುವುದರಿಂದ, ಉಳಿದವರಿಗೆ ಸಚಿವ ಸ್ಥಾನ ಕಲ್ಪಿಸಲು ಅವಕಾಶವೇ ಉಳಿದಿಲ್ಲ ಎಂದು ಹೇಳಿದರು. ಕಾಂಗ್ರೆಸ್ ಟಿಕೆಟ್ ಮಾತ್ರವಲ್ಲ, ಅಭ್ಯರ್ಥಿಗಳ ವೈಯಕ್ತಿಕ ಪರಿಶ್ರಮ ಮತ್ತು ವರ್ಚಸ್ಸೂ ಅವರ ಗೆಲುವಿಗೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಾತನಾಡಿದ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ, ಸಿದ್ದರಾಮಯ್ಯ ಕೂಡ ನಮ್ಮನ್ನು ನಿರಾಸೆಗೊಳಿಸಿದ್ದಾರೆ. ತಮ್ಮ ಪುತ್ರ ಡಾ. ಯತೀಂದ್ರ ಅವರ ರಾಜಕೀಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವರ ಪರ ನಿಂತಿರಬಹುದು ಎಂದು ಆರೋಪಿಸಿದರು.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಶಾಸಕರನ್ನು ಪಕ್ಷದ ಉನ್ನತ ನಾಯಕತ್ವ "ಅಸ್ಪೃಶ್ಯರಂತೆ" ನಡೆಸಿಕೊಂಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ ಈ ವಿಷಯದಲ್ಲಿ ಅಸಹಾಯಕರಾಗಿದ್ದರು ಎಂದು ನಾರಾಯಣಸ್ವಾಮಿ ಹೇಳಿದರು.

ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಅವರು ಕೋಲಾರ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಗೆದ್ದು ಕೇಂದ್ರ ಸಚಿವರೂ ಆಗಿದ್ದರೂ, ಜಿಲ್ಲೆಯ ನಿರೀಕ್ಷೆಗಳನ್ನು ಈಡೇರಿಸಲಿಲ್ಲ ಎಂದು ನಾರಾಯಣಸ್ವಾಮಿ ಆರೋಪಿಸಿದರು. ತಮ್ಮ ಪುತ್ರಿ ಹಾಗೂ ಕೆಜಿಎಫ್ ಶಾಸಕ ರೂಪಕಲಾ ಅವರ ರಾಜಕೀಯ ಭವಿಷ್ಯದ ಬಗ್ಗೆ ಮಾತ್ರ ಮುನಿಯಪ್ಪ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ ಎಂದು ದೂರಿದ ಅವರು, ಪಕ್ಷದಲ್ಲಿ ಮುಂದುವರಿಯುವುದು ಕಷ್ಟವಾಗಿದೆ ಎಂದರು.

ಪಕ್ಷದ ಮೂಲಗಳ ಪ್ರಕಾರ, ಕುರುಬ ಸಮುದಾಯದ ನಾಯಕಿಯೂ ಆಗಿರುವ ಚಿಕ್ಕಮಗಳೂರು ವಿಧಾನ ಪರಿಷತ್ ಸದಸ್ಯೆ ಕೆ.ವಿ. ಗಾಯತ್ರಿ ಶಾಂತೇಗೌಡ ಅವರನ್ನು ಸಚಿವ ಸಂಪುಟಕ್ಕೆ ಸೇರಿಸುವುದಕ್ಕೆ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದರು. ಅವರು ಸಚಿವರಾದರೆ ಹಿರಿಯತ್ವದ ಆಧಾರದ ಮೇಲೆ ವಿಧಾನ ಪರಿಷತ್ ಸಭಾನಾಯಕರಾಗುವ ಸಾಧ್ಯತೆ ಇತ್ತು. ಆ ಹುದ್ದೆ ತಮ್ಮ ಪುತ್ರ ಡಾ. ಯತೀಂದ್ರ ಅವರಿಗೆ ಸಿಗಬೇಕು ಎಂಬುದು ಸಿದ್ದರಾಮಯ್ಯ ಅವರ ಆಶಯ ಎಂದು ಪಕ್ಷದ ಒಳಮೂಲಗಳು ತಿಳಿಸಿವೆ.

ಇನ್ನೊಂದೆಡೆ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಚಿವರಾದ ದಿನೇಶ್ ಗುಂಡೂರಾವ್, ತನ್ವೀರ್ ಸೇಠ್ ಹಾಗೂ ಎಂ. ಕೃಷ್ಣಪ್ಪ ಅವರ ಬೆಂಬಲಿಗರ ಆಕ್ರೋಶವನ್ನು ಎದುರಿಸಬೇಕಾಯಿತು. ಹೈಕಮಾಂಡ್ ಸೂಚನೆಯಂತೆ ಹರಿಪ್ರಸಾದ್ ಅವರೊಂದಿಗೆ ಚರ್ಚೆ ನಡೆಸಿದರು.

ಈ ನಡುವೆ ಕಾಂಗ್ರೆಸ್ ಹೈಕಮಾಂಡ್, ವಿಶೇಷವಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಅಸಮಾಧಾನಗೊಂಡ ಶಾಸಕರನ್ನು ಸಮಾಧಾನಪಡಿಸಲು ಮುಂದಾಗಿದೆ.

ಬಂಡಾಯ ಶಾಸಕರಿಗೆ ಪ್ರಮುಖ ನಿಗಮ-ಮಂಡಳಿಗಳಲ್ಲಿ ನಾಮನಿರ್ದೇಶನ ನೀಡುವ ಮೂಲಕ ಅವರನ್ನು ಸಮಾಧಾನಪಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ಹೈಕಮಾಂಡ್ ಡಿ.ಕೆ. ಶಿವಕುಮಾರ್ ಅವರೊಂದಿಗೂ ಮಾತನಾಡಿದ್ದು, ಹೆಚ್ಚುತ್ತಿರುವ ಅಸಮಾಧಾನವನ್ನು ಶಮನಗೊಳಿಸುವಂತೆ ಸೂಚಿಸಿದೆ. ಈ ಎಲ್ಲ ಪ್ರಯತ್ನಗಳ ಬಳಿಕವೂ ಅಸಮಾಧಾನಿತ ಶಾಸಕರು ತಮ್ಮ ನಿಲುವಿನಲ್ಲಿ ಅಚಲರಾಗಿದ್ದರೆ, ಅವರು ರಾಜೀನಾಮೆ ನೀಡುವ ನಿರ್ಧಾರವನ್ನು ಮುಂದುವರಿಸಲು ಅವಕಾಶ ನೀಡುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾಗಿರುವ ಸುರ್ಜೇವಾಲಾ ಅವರು ಅಸಮಾಧಾನಿತ ಶಾಸಕರನ್ನು ವೈಯಕ್ತಿಕವಾಗಿ ಹಾಗೂ ದೂರವಾಣಿ ಮೂಲಕ ಸಂಪರ್ಕಿಸುತ್ತಿದ್ದಾರೆ. ಸೋಮವಾರ ಸಂಜೆ ರಾಜೀನಾಮೆ ಸಲ್ಲಿಸಿದ್ದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ, ರಾಜೀನಾಮೆ ಹಿಂತೆಗೆದುಕೊಳ್ಳುವಂತೆ ಮನವೊಲಿಸಲು ಪ್ರಯತ್ನಿಸಿದರು.

ಎಸ್.ಆರ್. ಶ್ರೀನಿವಾಸ್ ಸೇರಿದಂತೆ ಕೆಲವು ಶಾಸಕರು ತಾವು ಅಧ್ಯಕ್ಷರಾಗಿರುವ ಮಂಡಳಿ ಹಾಗೂ ನಿಗಮಗಳ ಹುದ್ದೆಗಳಿಗೆ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ರಾಜ್ಯ ನಾಯಕತ್ವ ಹಾಗೂ ಪಕ್ಷದ ಉನ್ನತ ನಾಯಕರ ವಿರುದ್ಧದ ಅಸಮಾಧಾನ ಈಗ ರಾಜ್ಯದ ವಿವಿಧ ಭಾಗಗಳಿಗೆ ಹರಡುತ್ತಿದೆ. ಹುಬ್ಬಳ್ಳಿಯಲ್ಲಿ ಶಾಸಕ ಅಬ್ಬಯ್ಯ ಪ್ರಸಾದ್ ಅವರ ಬೆಂಬಲಿಗರು ಮತ್ತು ಗದಗದಲ್ಲಿ ಮಾಜಿ ಸಚಿವ ಹೆಚ್.ಕೆ. ಪಾಟೀಲ ಅವರ ಬೆಂಬಲಿಗರಾದ 22 ಮಂದಿ ನಗರಸಭೆ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.

ರಾಜಕೀಯ ವಿಶ್ಲೇಷಕರ ಪ್ರಕಾರ, ಶಾಸಕರಲ್ಲಿ ಹೆಚ್ಚುತ್ತಿರುವ ಅಸಮಾಧಾನ, ಪಕ್ಷದ ನಾಯಕತ್ವದ ಮೇಲಿನ ವಿಶ್ವಾಸ ಕುಸಿತ ಹಾಗೂ ಅವರನ್ನು ಮುನ್ನಡೆಸುವ ನಾಯಕತ್ವದ ಕೊರತೆ ದೊಡ್ಡ ಪ್ರಮಾಣದ ಪಕ್ಷಾಂತರಕ್ಕೆ ಕಾರಣವಾಗಬಹುದು. ಉತ್ತರ ಕರ್ನಾಟಕದ ಕೆಲ ಶಾಸಕರು ಬಿಜೆಪಿಯತ್ತ ಮುಖ ಮಾಡಬಹುದು; ದಕ್ಷಿಣ ಕರ್ನಾಟಕದ ಕೆಲವರು ಜೆಡಿಎಸ್ ಸೇರುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಹಿರಿಯ ನಾಯಕರು ತಮ್ಮ ಹಾಗೂ ತಮ್ಮ ಮಕ್ಕಳ ರಾಜಕೀಯ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವಂತೆಯೇ, ಅನೇಕ ಶಾಸಕರೂ ತಮ್ಮ ರಾಜಕೀಯ ಭವಿಷ್ಯವನ್ನು ಸುರಕ್ಷಿತಗೊಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ, ಮೂಡಿಗೆರೆಯಿಂದ ಪ್ರಥಮ ಬಾರಿಗೆ ಆಯ್ಕೆಯಾದ ಶಾಸಕಿ ಹಾಗೂ ಮಾಜಿ ಸಚಿವೆ ಸಿ. ಮೋಟಮ್ಮ ಅವರ ಪುತ್ರಿ ನಯನಾ ಜವಾಹರ್, ಸಚಿವ ಸಂಪುಟದಲ್ಲಿ ಒಬ್ಬರೂ ಮಹಿಳಾ ಸಚಿವರನ್ನು ನೇಮಿಸದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಹೈಕಮಾಂಡ್ ಆತ್ಮಾವಲೋಕನ ಮಾಡಿಕೊಳ್ಳಬೇಕು. ಮುಂದಿನ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೂ ಮುನ್ನ ಮಹಿಳೆಯರಿಗೆ 33% ಮೀಸಲಾತಿ ಜಾರಿಯಾದರೆ, ಮಹಿಳಾ ನಾಯಕತ್ವವನ್ನು ಬೆಳೆಸದಿದ್ದರೆ ಪಕ್ಷ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಅವರು ಹೇಳಿದರು.

ಮಡಿಕೇರಿ ಕ್ಷೇತ್ರದ ಪ್ರಥಮ ಬಾರಿಗೆ ಆಯ್ಕೆಯಾದ ಶಾಸಕ ಮಂತರ್ ಗೌಡ ಅವರೂ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಅವರ ತಂದೆ ಎ. ಮಂಜು ಅವರು ಜೆಡಿಎಸ್‌ನ ಅರಕಲಗೂಡು ಶಾಸಕರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com