

ನವದೆಹಲಿ: ಸಚಿವ ಸಂಪುಟ ವಿಸ್ತರಣೆಯಾಗಿ ಒಂದು ವಾರ ಕಳೆದರೂ ನೂತನ ಸಚಿವರಿಗೆ ಖಾತೆ ಹಂಚಿಕೆಗೆ ಕಾಂಗ್ರೆಸ್ ಹೈಕಮಾಂಡ್ ಇನ್ನೂ ಗ್ರೀನ್‌ಸಿಗ್ನಲ್ ನೀಡಿಲ್ಲ. ಹೀಗಾಗಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಭಾನುವಾರ ರಾತ್ರಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಸಂಪುಟ ಪುನರ್ರಚನೆ ಮತ್ತು ಹೊಸದಾಗಿ ಸೇರ್ಪಡೆಗೊಂಡ ಸಚಿವರಿಗೆ ಖಾತೆಗಳ ಹಂಚಿಕೆ ಕುರಿತು ಚರ್ಚೆ ನಡೆಸಿದರು.
ಸಚಿವ ಸ್ಥಾನ ವಂಚಿತ ಹಿರಿಯ ಶಾಸಕರ ಅಸಮಾಧಾನ ತಣಿಸುವುದು ಹಾಗೂ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುವ ವಿಚಾರದಲ್ಲಿ ಸಿಎಂ ಡಿಕೆ ಶಿವಕುಮಾರ್ ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ. ಆಗಸ್ಟ್ 13ರಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಅದಕ್ಕೂ ಮುನ್ನ ಖಾತೆ ಹಂಚಿಕೆ ಪೂರ್ಣಗೊಳಿಸುವ ಒತ್ತಡವೂ ಹೆಚ್ಚಾಗಿದೆ.
ಭಾನುವಾರ ರಾತ್ರಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸುಮಾರು 11 ಗಂಟೆ ವೇಳೆಗೆ ರಾಜಾಜಿ ಮಾರ್ಗದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದರು. ಖರ್ಗೆ ಭೇಟಿ ಬಳಿಕ ಮಾತನಾಡಿದ ಸಿಎಂ, ಖಾತೆ ಹಂಚಿಕೆ ಕುರಿತು ಏನು ಮಾಡಬೇಕೆಂದು ಹೈಕಮಾಂಡ್ ತಿಳಿಸುತ್ತದೆ ಎಂದು ಹೇಳಿದರು.
ಖಾತೆ ಹಂಚಿಕೆ ವಿಳಂಬವಾಗುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ, ದೆಹಲಿಯಲ್ಲಿ ನಾನು ಎಷ್ಟು ದಿನ ಇದ್ದೆ, ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಎಷ್ಟು ದಿನ ಇದ್ದರು ಎಂದು ಡಿಕೆಶಿ ಮರುಪ್ರಶ್ನಿಸಿದರು. ಈಗಾಗಲೇ ಸಚಿವರು ಮೂರು ದಿನಗಳ ಕಾಲ ಪ್ರವಾಸ ನಡೆಸಿ ಬರ ಪರಿಸ್ಥಿತಿ ಕುರಿತು ಅಧ್ಯಯನ ಮಾಡಿ ವರದಿ ನೀಡಿದ್ದಾರೆ. ಸಚಿವರು ಉತ್ತಮ ಕೆಲಸ ಮಾಡಿದ್ದಾರೆ ಎಂದೂ ಹೇಳಿದರು.
ವಿಧಾನಮಂಡಲ ಅಧಿವೇಶನ ಆರಂಭವಾಗುತ್ತಿದ್ದರೂ ಸಚಿವರಿಗೆ ಖಾತೆ ಹಂಚಿಕೆಯಾಗಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಶೀಘ್ರದಲ್ಲೇ ಖಾತೆಗಳನ್ನು ಹಂಚಿಕೆ ಮಾಡಲಾಗುವುದು ಎಂದರು. ಅಗತ್ಯಬಿದ್ದರೆ ಅಧಿವೇಶನದಲ್ಲಿ ಎಲ್ಲ ಖಾತೆಗಳ ಬಗ್ಗೆಯೂ ತಾನೊಬ್ಬನೇ ಉತ್ತರಿಸುವುದಾಗಿ ಹೇಳಿದರು.
ಪುನರ್ರಚನೆ ಜೊತೆಗೆ, ಹೊಸದಾಗಿ ಸೇರ್ಪಡೆಗೊಂಡ ಇಬ್ಬರು ಸಚಿವರಾದ ಎಚ್ ಸಿ ಬಾಲಕೃಷ್ಣ ಮತ್ತು ಬಿ ನಾಗೇಂದ್ರ ಅವರನ್ನು ಕೈಬಿಡುವ ಸಾಧ್ಯತೆಯ ಬಗ್ಗೆಯೂ ಚರ್ಚಿಸಿದರು, ಅವರು ಒಕ್ಕಲಿಗ ನಾಯಕ ವಿಜಯನಗರ ಶಾಸಕ ಎಂ ಕೃಷ್ಣಪ್ಪ ಮತ್ತು ಬ್ಯಾಡಗಿ ಭಾಗದ ಕುರುಬ ಶಾಸಕ ಬಸವರಾಜ ಶಿವಣ್ಣನವರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಿದ್ದಾರೆ. ವೇಣುಗೋಪಾಲ್ ಅವರೊಂದಿಗೆ ಚರ್ಚಿಸಿದ ನಂತರ ಈ ಬದಲಾವಣೆಗಳ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.