ಪರಿಷತ್ ಸಭಾಪತಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕೌಂಟರ್; ನಾಮಪತ್ರ ಸಲ್ಲಿಸಿದ BJP ಅಭ್ಯರ್ಥಿ; ಸ್ಪೀಕರ್ ಚುನಾವಣೆ ಬಹಿಷ್ಕಾರ

ಮತ್ತೊಂದುಕಡೆ, ವಿಧಾನಸಭೆಯಲ್ಲಿ, ಪ್ರಮುಖ ವಿರೋಧ ಪಕ್ಷವಾದ ಬಿಜೆಪಿ, ಸ್ಪೀಕರ್ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದೆ.
Oppn fields candidate for Legislative Council Chairman post, to boycott Speaker election
ನಾಮಪತ್ರ ಸಲ್ಲಿಸಿದ BJP ಅಭ್ಯರ್ಥಿ
Updated on

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಗೆ ಕೌಂಟರ್ ಕೊಡಲು ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಿರ್ಧರಿಸಿದ್ದು, ಎನ್‍ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಪರಿಷತ್ ಸದಸ್ಯ ಪಿ.ಎಚ್. ಪೂಜಾರ್ ಅವರು ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ.

ಮತ್ತೊಂದುಕಡೆ, ವಿಧಾನಸಭೆಯಲ್ಲಿ, ಪ್ರಮುಖ ವಿರೋಧ ಪಕ್ಷವಾದ ಬಿಜೆಪಿ, ಸ್ಪೀಕರ್ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದೆ.

ಡಿಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ವಿಸ್ತರಣೆಯಾದ ನಂತರ, ಆಗಸ್ಟ್ 14 ರಂದು ವಿಧಾನಸಭಾ ಸ್ಪೀಕರ್ ಮತ್ತು ಪರಿಷತ್ ಸಭಾಪತಿ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

Oppn fields candidate for Legislative Council Chairman post, to boycott Speaker election
ಸ್ಪೀಕರ್-ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಜಿ.ಎಸ್ ಪಾಟೀಲ್, ಸಲೀಂ ಅಹ್ಮದ್ ಕಣಕ್ಕೆ!

ಇಂದು ಬೆಳಗ್ಗೆ, ಹಿರಿಯ ಕಾಂಗ್ರೆಸ್ ಶಾಸಕ ಜಿ ಎಸ್ ಪಾಟೀಲ್ ಅವರು ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದು, ಎಂಎಲ್‌ಸಿ ಸಲೀಮ್ ಅಹ್ಮದ್ ಅವರು ಸಭಾಪತಿ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದಾರೆ.

ಇದೀಗ ಬಿಜೆಪಿ ಎಂಎಲ್‌ಸಿ ಪಿಎಚ್ ಪೂಜಾರ್ ಅವರು ಸಭಾಪತಿ ಸ್ಥಾನಕ್ಕೆ ಎನ್‌ಡಿಎ ಅಭ್ಯರ್ಥಿಯಾಗಿ, ಪರಿಷತ್ ಕಾರ್ಯದರ್ಶಿಗೆ ನಾಮಪತ್ರ ಸಲ್ಲಿಸಿದ್ದಾರೆ.

ಆದಾಗ್ಯೂ, ವಿರೋಧ ಪಕ್ಷಗಳು ವಿಧಾನಸಭಾ ಸ್ಪೀಕರ್ ಸ್ಥಾನಕ್ಕೆ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಬದಲಾಗಿ ಸ್ಪೀಕರ್ ಚುನಾವಣೆಯನ್ನೇ ಬಹಿಷ್ಕರಿಸಲು ನಿರ್ಧರಿಸಿವೆ. ಹೀಗಾಗಿ ಕಾಂಗ್ರೆಸ್‌ನ ಜಿಎಸ್ ಪಾಟೀಲ್ ಅವರು ಅವಿರೋಧವಾಗಿ ಆಯ್ಕೆಯಾಗುವ ಬಹುತೇಕ ಖಚಿತವಾಗಿದೆ.

ಜೂನ್ 3 ರಂದು ಡಿಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟಕ್ಕೆ ಸೇರುವ ಮುನ್ನ ಯು ಟಿ ಖಾದರ್ ಅವರು ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಇನ್ನು ಬಸವರಾಜ್ ಹೊರಟ್ಟಿ ಅವರ ಇತ್ತೀಚಿನ ರಾಜೀನಾಮೆಯ ನಂತರ ಪರಿಷತ್ತಿನ ಸಭಾಧ್ಯಕ್ಷ ಸ್ಥಾನ ಖಾಲಿಯಾಗಿದೆ.

ಸ್ಪೀಕರ್ ಚುನಾವಣೆಯನ್ನು ಬಿಜೆಪಿ ಬಹಿಷ್ಕರಿಸುತ್ತದೆ. ಆದರೆ ಚುನಾವಣೆಯ ಬಳಿಕ ಪೀಠಕ್ಕೆ ಎಂದಿನಂತೆಯೇ ಗೌರವದಿಂದ ನಡೆದುಕೊಳ್ಳುತ್ತೇವೆ. ಇದು ಕಾಂಗ್ರೆಸ್‌ನ ಸರ್ವಾಧಿಕಾರದ ವಿರುದ್ಧದ ಪ್ರತಿಭಟನೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ತಿಳಿಸಿದ್ದಾರೆ.

ವಿಧಾನಸಭೆ ಕಲಾಪದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆಯ ಸಭಾಧ್ಯಕ್ಷರ ಚುನಾವಣೆ ಶುಕ್ರವಾರ ನಡೆಯಲಿದೆ. ಸದನಕ್ಕೆ ಸಾರ್ವಭೌಮತ್ವ ಇದೆ ಹಾಗೂ ವಿಧಾನಸಭಾ ಸದಸ್ಯರಿಗೆ ಹಕ್ಕು ಇದೆ. ಆದರೆ ಕಾಂಗ್ರೆಸ್‌ ಪಕ್ಷ ಸಂವಿಧಾನ ಬಾಹಿರವಾಗಿ ತನ್ನ ಲೆಟರ್‌ಹೆಡ್‌ನಲ್ಲಿ ಆಯ್ಕೆ ಮಾಡಲಾಗುವ ಸಭಾಧ್ಯಕ್ಷರ ಹೆಸರನ್ನು ಉಲ್ಲೇಖ ಮಾಡಿದೆ. ಸದನದ ಸಾರ್ವಭೌಮತ್ವವನ್ನು ಕಸಿಯುವ ಕೆಲಸವನ್ನು ದೆಹಲಿಯ ನಕಲಿ ಗಾಂಧಿ ಕುಟುಂಬ ಮಾಡಿದೆ. ಪಕ್ಷದ ಪಟ್ಟಿಯಲ್ಲಿ ಸ್ಪೀಕರ್‌ ಹೆಸರನ್ನು ಪ್ರಕಟಿಸುವ ಹೊಸ ಸಂಪ್ರದಾಯವನ್ನು ಹುಟ್ಟುಹಾಕಲಾಗಿದೆ. ಸಭಾಧ್ಯಕ್ಷರು ಸದನದಿಂದ ಚುನಾಯಿತರಾಗಬೇಕಿದ್ದರೂ, ಪಕ್ಷದಿಂದಲೇ ಚುನಾಯಿತರನ್ನಾಗಿ ಮಾಡಲಾಗಿದೆ. ಇದು ಪ್ರಜಾಪ್ರಭುತ್ವ ವಿರೋಧಿ ನೀತಿ ಎಂದರು.

ವಿಧಾನಪರಿಷತ್‌ ಸಭಾಪತಿಯಾಗಿದ್ದ ಬಸವರಾಜ ಹೊರಟ್ಟಿ ಅವರು ರಾಜೀನಾಮೆ ನೀಡುತ್ತೇನೆ ಎಂದಿದ್ದರೂ ಅವರ ಕಚೇರಿಗೆ ಶಾಸಕರು ನುಗ್ಗಿ ರಾಜೀನಾಮೆ ಪಡೆದಿದ್ದಾರೆ. ಇದು ಕೂಡ ಸಂವಿಧಾನಕ್ಕೆ ಮಾಡಿರುವ ಅಪಚಾರ. ಇಲ್ಲಿನ ಹೊಸ ಸಭಾಪತಿ ಹಾಗೂ ಉಪಸಭಾಪತಿಗಳ ಹೆಸರನ್ನು ಕೂಡ ಪಕ್ಷದ ಪಟ್ಟಿಯಲ್ಲಿ ತೋರಿಸಲಾಗಿದೆ. ಶಾಸಕ ಎ.ಎಸ್‌.ಪೊನ್ನಣ್ಣ ಅವರನ್ನು ಉಪ ಸಭಾಧ್ಯಕ್ಷ ಎಂದು ತೋರಿಸಲಾಗಿತ್ತು. ನಂತರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಇದರಲ್ಲಿ ಯಾವುದು ಸರಿ ಎಂದು ತಿಳಿಸದೆ ಗೊಂದಲದ ಗೂಡು ಮಾಡಿದ್ದಾರೆ. ಇವೆಲ್ಲವೂ ಸದನದ ನೀತಿ ನಿಯಮಗಳನ್ನು ಮೀರಿದ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದರು.

ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಕಾಂಗ್ರೆಸ್‌ ಅಪಚಾರ ಮಾಡಿರುವುದರಿಂದ ವಿಧಾನಸಭಾಧ್ಯಕ್ಷರ ಆಯ್ಕೆಯ ಚುನಾವಣೆಯನ್ನು ಬಿಜೆಪಿಯಿಂದ ಬಹಿಷ್ಕಾರ ಮಾಡಲಾಗುತ್ತಿದೆ. ಚುನಾವಣೆಯಲ್ಲಿ ನಾವು ಭಾಗಿಯಾಗುವುದಿಲ್ಲ. ಆದರೆ ಚುನಾವಣೆಯ ನಂತರ ಮಾತ್ರ ಪೀಠಕ್ಕೆ ಗೌರವದಿಂದ ನಡೆದುಕೊಳ್ಳುತ್ತೇವೆ. ಇದು ಪೀಠದ ವಿರುದ್ಧವಲ್ಲ, ಆದರೆ ಕಾಂಗ್ರೆಸ್‌ನ ಲೆಟರ್‌ಹೆಡ್‌ ಹಾಗೂ ಸರ್ವಾಧಿಕಾರದ ವಿರುದ್ಧ ಮಾಡುತ್ತಿರುವ ಪ್ರತಿಭಟನೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com