ನಿಮ್ಮಿಂದ ದೇಶಭಕ್ತಿಯ ಪಾಠ ಬೇಕಿಲ್ಲ, ಯಾರಿಂದಲೂ ಸರ್ಟಿಫಿಕೇಟ್ ಬೇಕಿಲ್ಲ: RSS-BJP-ABVP ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಬಿಜೆಪಿಗೆ ರಾಷ್ಟ್ರಗೀತೆ ಸೇರಿದಂತೆ ಎಲ್ಲವನ್ನೂ ರಾಜಕೀಯ ಅಸ್ತ್ರವನ್ನಾಗಿ ಬಳಸುವುದರಲ್ಲೇ ಆಸಕ್ತಿ. ಎಷ್ಟು ಪ್ರಕರಣಗಳನ್ನು ಬೇಕಾದರೂ ದಾಖಲಿಸಿಕೊಳ್ಳಲಿ. ನಮಗೆ ಇವರಿಂದ ದೇಶಭಕ್ತಿಯ ಯಾವುದೇ ಪ್ರಮಾಣಪತ್ರ ಬೇಕಿಲ್ಲ.
Priyank Kharge
ಪ್ರಿಯಾಂಕ್ ಖರ್ಗೆ
Updated on

ಬೆಂಗಳೂರು: ದೇಶಭಕ್ತಿಯ ವಿಚಾರದಲ್ಲಿ ಬಿಜೆಪಿ, ಆರ್‌ಎಸ್‌ಎಸ್‌ ಹಾಗೂ ಎಬಿವಿಪಿಯಿಂದ ಕಾಂಗ್ರೆಸ್‌ಗೆ ಯಾವುದೇ ಪ್ರಮಾಣಪತ್ರದ ಅಗತ್ಯವಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಯುವ ಮೋರ್ಚಾ, ಎಬಿವಿಪಿ ಅಥವಾ ಆರ್‌ಎಸ್‌ಎಸ್‌ ಆಗಿರಲಿ, ಇವರಿಂದ ನಾವು ದೇಶಭಕ್ತರು ಅಥವಾ ದೇಶದ್ರೋಹಿಗಳು ಎಂಬ ಪ್ರಮಾಣಪತ್ರ ಪಡೆಯುವ ಅಗತ್ಯವಿಲ್ಲ. ಸ್ವಾತಂತ್ರ್ಯ ಹೋರಾಟಕ್ಕೆ ಇವರ ಕೊಡುಗೆ ಏನೂ ಇಲ್ಲ. ಇವರ ರಾಜಕೀಯ ಮಾರ್ಗದರ್ಶಕರು 52 ವರ್ಷಗಳ ಕಾಲ ರಾಷ್ಟ್ರಧ್ವಜವನ್ನೇ ಹಾರಿಸಿರಲಿಲ್ಲ” ಎಂದು ಆರೋಪಿಸಿದರು.

ಸ್ವಾತಂತ್ರ್ಯ ದಿನಾಚರಣೆಯಂದು ‘ವಂದೇ ಮಾತರಂ’ ಗೀತೆಯ ಗಾಯನಕ್ಕೆ ಅಡ್ಡಿಪಡಿಸಿದ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್‌ ದಾಖಲಾಗಿರುವ ಬೆನ್ನಲ್ಲೇ ಪ್ರಿಯಾಂಕ್ ಖರ್ಗೆ ಈ ಹೇಳಿಕೆ ನೀಡಿದ್ದಾರೆ.

ಇದೇ ವೇಳೆ ವಿರೋಧ ಪಕ್ಷಗಳ ಆರೋಪಗಳನ್ನು ತಳ್ಳಿಹಾಕಿದ ಅವರು, ಸಂಘ ಪರಿವಾರ ರಾಷ್ಟ್ರೀಯ ಸಂಕೇತಗಳನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಬಿಜೆಪಿಗೆ ರಾಷ್ಟ್ರಗೀತೆ ಸೇರಿದಂತೆ ಎಲ್ಲವನ್ನೂ ರಾಜಕೀಯ ಅಸ್ತ್ರವನ್ನಾಗಿ ಬಳಸುವುದರಲ್ಲೇ ಆಸಕ್ತಿ. ಎಷ್ಟು ಪ್ರಕರಣಗಳನ್ನು ಬೇಕಾದರೂ ದಾಖಲಿಸಿಕೊಳ್ಳಲಿ. ನಮಗೆ ಇವರಿಂದ ದೇಶಭಕ್ತಿಯ ಯಾವುದೇ ಪ್ರಮಾಣಪತ್ರ ಬೇಕಿಲ್ಲ ಎಂದು ಹೇಳಿದರು.

ಯುಜಿಸಿ-ನೆಟ್‌ ಪರೀಕ್ಷೆ ಮುಂದೂಡಿಕೆ ಬಗ್ಗೆಯೂ ಟೀಕೆ

ಇದೇ ವೇಳೆ ಯುಜಿಸಿ-ನೆಟ್‌ ಪರೀಕ್ಷೆ ಮುಂದೂಡಿಕೆ ಹಾಗೂ ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಅವರ ನಾಯಕತ್ವದ ಕುರಿತು ಮಾತನಾಡಿದ ಪ್ರಿಯಾಂಕ್ ಖರ್ಗೆ, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಕೇಂದ್ರ ಸರ್ಕಾರ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಟೀಕಿಸಿದರು.

ಧರ್ಮೇಂದ್ರ ಪ್ರಧಾನ್ ಅವರನ್ನು ಹಲವು ತಿಂಗಳುಗಳ ಕಾಲ ಹುದ್ದೆಯಿಂದ ಕೆಳಗಿಳಿಸದೆ ಕೇಂದ್ರ ಸರ್ಕಾರ ವಿಳಂಬ ಮಾಡಿತು. ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಬಳಿಕ ಅನಿವಾರ್ಯವಾಗಿ ಅವರು ರಾಜೀನಾಮೆ ನೀಡಿದರು ಎಂದು ಆರೋಪಿಸಿದರು.

ಶಿಕ್ಷಣ ಸಚಿವರ ಬದಲಾವಣೆಯ ಕುರಿತು ಮಾತನಾಡಿದ ಅವರು, “ಒಬ್ಬರ ಬದಲು ಮತ್ತೊಬ್ಬರನ್ನು ನೇಮಿಸಲಾಗಿದೆ. ಆಗಲೇ ನಾನು ಹೇಳಿದ್ದೆ, ಇದು ಹೊಸ ಬಾಟಲಿಯಲ್ಲಿರುವ ಹಳೆಯ ಮದ್ಯ. ಏನೂ ಬದಲಾಗುವುದಿಲ್ಲ. ಪ್ರಹ್ಲಾದ್ ಜೋಶಿ ಅವರು ಧರ್ಮೇಂದ್ರ ಪ್ರಧಾನ್ ಅವರಷ್ಟೇ ಅಸಮರ್ಥರು ಎಂಬುದು ವಾಸ್ತವ” ಎಂದು ಟೀಕಿಸಿದರು.

Priyank Kharge
ಪೊಲೀಸ್ ನೇಮಕಾತಿ ಪರೀಕ್ಷೆ: ಧಾರ್ಮಿಕ ಉಡುಪಿಗೆ ಯಾವುದೇ ನಿರ್ಬಂಧವಿಲ್ಲ; ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ

ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆಯೂ ಆರೋಪ

ಇದೇ ವೇಳೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅಕ್ರಮಗಳಿಗೂ ಆರ್‌ಎಸ್‌ಎಸ್‌ ಸಂಪರ್ಕವಿದೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದರು.

“ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು. ಅಲ್ಲಿ ಯಾರು ಇದ್ದರು? ಆರ್‌ಎಸ್‌ಎಸ್‌ನ ವ್ಯಕ್ತಿಯೊಬ್ಬರು ಇದ್ದರು. ಎಲ್ಲ ಸಂಸ್ಥೆಗಳನ್ನು ಯಾರು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ? ಇವರು ನಿಧಾನವಾಗಿ ಎಲ್ಲರನ್ನೂ ಪ್ರಭಾವಿತರಾಗಿಸುತ್ತಿದ್ದಾರೆ. ನಮ್ಮ ಪೀಳಿಗೆ ಮಾಡಿದ ತಪ್ಪುಗಳನ್ನು ಜೆನ್‌ ಝಡ್‌ ಪುನರಾವರ್ತಿಸುವುದಿಲ್ಲ ಮತ್ತು ಆರ್‌ಎಸ್‌ಎಸ್‌ನ ಉದ್ದೇಶವನ್ನು ಅರ್ಥಮಾಡಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ” ಎಂದು ಹೇಳಿದರು.

‘ಸಾವಿರ ತಲೆಗಳ ವಿಷಸರ್ಪ’ ಹೇಳಿಕೆಗೆ ಬೆಂಬಲ

ಬಳಿಕ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಈ ಹಿಂದೆ ಆರ್‌ಎಸ್‌ಎಸ್‌ ಅನ್ನು ‘ಸಾವಿರ ತಲೆಗಳ ವಿಷಸರ್ಪ’ ಎಂದು ಟೀಕಿಸಿರುವುದರ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಆರ್‌ಎಸ್‌ಎಸ್‌ನ ಪ್ರಭಾವ ಇನ್ನೂ ವ್ಯಾಪಕವಾಗಿದೆ ಎಂದು ಹೇಳಿದರು.

“ಇದು ಕೇವಲ ಸಾವಿರ ತಲೆಗಳ ಸರ್ಪ ಎಂದು ನಾನು ಭಾವಿಸುವುದಿಲ್ಲ. ಅಸಂಖ್ಯಾತ ಜನರನ್ನು ಅವರು ಪ್ರಭಾವಿತರಾಗಿಸಿದ್ದಾರೆ. ಅಸಮಾಧಾನ ಹಾಗೂ ಕೋಮು ವಿಭಜನೆಯ ಬೀಜ ಬಿತ್ತಲು ಅವರನ್ನು ಬಳಸಿಕೊಳ್ಳಲಾಗುತ್ತಿದೆ. ಇದು ಸ್ಪಷ್ಟವಾಗಿ ಗೋಚರಿಸುತ್ತಿದೆ. ರಾಷ್ಟ್ರ ನಿರ್ಮಾಣದಲ್ಲಿ ಶೂನ್ಯ ಕೊಡುಗೆ, ಆದರೆ ದೇಶದಲ್ಲಿ ಗೊಂದಲ ಸೃಷ್ಟಿಸುವಲ್ಲಿ ಶೇ.100ರಷ್ಟು ಕೊಡುಗೆ ಎಂಬಂತಾಗಿದೆ” ಎಂದು ಆರೋಪಿಸಿದರು.

ಇದಕ್ಕೂ ಮುನ್ನ ಯತೀಂದ್ರ ಸಿದ್ದರಾಮಯ್ಯ ಅವರು ಆರ್‌ಎಸ್‌ಎಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಜಾತೀಯತೆ, ಕೋಮುವಾದ ಹಾಗೂ ಮನುಸ್ಮೃತಿ ಸಿದ್ಧಾಂತದ ವಿಷವನ್ನು ಸಮಾಜದಲ್ಲಿ ಹರಡುವ ಸಂಘಟನೆ ಎಂದು ಟೀಕಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com