

ಬೆಂಗಳೂರು: ಎಲ್ಲಾ ಧರ್ಮದವರೂ ದೇಶದಲ್ಲಿರುವಾಗ ವಂದೇ ಮಾತರಂ ರಾಷ್ಟ್ರಗೀತೆ ಆಗಲು ಸಾಧ್ಯವಿಲ್ಲ ಎಂದು ಎಂಎಲ್‌ಸಿ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದ ಅವರು, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು, ವಂದೇ ಮಾತರಂ ಹೇಳಿ ರಾಷ್ಟ್ರಗೀತೆಯನ್ನು ಡೀ ಪ್ರಮೋಟ್ ಮಾಡಲು ಕೇಂದ್ರ ಸರ್ಕಾರ ಪ್ರಯತ್ನ ಮಾಡುತ್ತಿದೆ. ಆರ್‌ಎಸ್‌ಎಸ್‌ನ ಗೋಳವಲ್ಕರ್ ರಾಷ್ಟ್ರಗೀತೆಯ ಬಗ್ಗೆಯೇ ಅಪಸ್ವರ ಎತ್ತಿದ್ದರು. ಒಂದೇ ಒಂದು ದಿನವೂ ರಾಷ್ಟ್ರ ಗೀತೆಯನ್ನು ಅವರ ಸಂಘದಲ್ಲಿ ಹಾಡಿದವರಲ್ಲ. ಅದೇ ಕಾರಣಕ್ಕೆ ವಂದೇ ಮಾತರಂನ್ನು ಎಲ್ಲಾ ಕಡೆ ಕಡ್ಡಾಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮೊದಲು ವಂದೇ ಮಾತರಂ, ಬಳಿಕ ರಾಷ್ಟ್ರಗೀತೆ ಹಾಡುವುದು ರಾಷ್ಟ್ರಗೀತೆಗೆ ಅಪಮಾನ ಮಾಡಿದ ಹಾಗೆ. ಬಿಜೆಪಿ ಸರ್ಕಾರ ನಮ್ಮ ಶಿಷ್ಟಾಚಾರಕ್ಕೆ ಅಪಮಾನ ಮಾಡುತ್ತಿದೆ. ಬಿಜೆಪಿಯವರು ರಾಷ್ಟ್ರಗೀತೆಯ ವಿರುದ್ಧವೇ ಹೋಗ್ತಿದ್ದಾರೆ. ವಂದೇ ಮಾತರಂ ಬೆಂಗಾಲ್ ಪ್ರಾಂತ್ಯದ ರಾಷ್ಟ್ರಗೀತೆ ಆಗಿತ್ತೇ ವಿನಃ ಇಡೀ ದೇಶದ ರಾಷ್ಟ್ರಗೀತೆ ಆಗಿರಲಿಲ್ಲ. ಬೆಂಗಾಲ್ ಚುನಾವಣೆ ಸಲುವಾಗಿ ವಂದೇ ಮಾತರಂ ಕಡ್ಡಾಯ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ದೇವರ ಹೆಸರು ಕೂಡ ವಂದೇ ಮಾತರಂನಲ್ಲಿದೆ. ಎಲ್ಲ ಧರ್ಮದವರೂ ಈ ದೇಶದಲ್ಲಿ ಇರುವಾಗ ವಂದೇ ಮಾತರಂ ರಾಷ್ಟ್ರಗೀತೆ ಆಗಲು ಸಾಧ್ಯವಿಲ್ಲ. ಕೆಟ್ಟ ಭಾವನೆಗಳನ್ನು ಕೆರಳಿಸಲು, ಕೋಮು ಭಾವನೆ ಕೆರಳಿಸಲು ಇದನ್ನು ತಂದಿದ್ದಾರೆ. ಇದೂ ಕೂಡ ಚುನಾವಣಾ ಗಿಮಿಕ್ ಎಂದು ಕಿಡಿಕಾರಿದ್ದಾರೆ.
ಪತ್ರಿಕೆಗಳಲ್ಲಿ ನಿತ್ಯ ಭವಿಷ್ಯಕ್ಕೆ ಬೆಲೆ ಸಿಕ್ತಾ ಇಲ್ಲ ಎಂದು ರಾಜ್ಯದಲ್ಲಿ ಮೂಡಿರುವ ನಾಯಕತ್ವ ಗೊಂದಲ ಕುರಿತು ಪ್ರತಿಕ್ರಿಯೆ ನೀಡಿದ ಬಿಕೆ ಹರಿಪ್ರಸಾದ್, ಡಿಕೆ ಶಿವಕುಮಾರ್ ಅವರು ಪಕ್ಷದ ಅಧ್ಯಕ್ಷರು, ಅವರು ಕೇವಲ ಬಂಡೆ ಅಲ್ಲ, ಅವರು ಒಂದು ರೈಲ್ವೇ ಇಂಜಿನ್. ಅದು ಬರುವಾಗ ದೊಡ್ಡವಾಗ ದೊಡ್ಡ ಸೌಂಡ್ ಆಗುತ್ತದೆ ಎಂದರು.
ಅದು ಬರುವಾಗ ಚಾ ಮಾರೋವ್ರು, ತಿಂಡಿ ಮಾರೋವ್ರು ದೊಡ್ಡ ಸೌಂಡ್ ಮಾಡ್ತಾರೆ, ಅವರು ಪಕ್ಷದ ಅಧ್ಯಕ್ಷರಾಗಿ ಎಲ್ಲರನ್ನೂ ಎಳೆದುಕೊಂಡು ಹೋಗ್ತಾ ಇದ್ದಾರೆ, ಅವರು ಬಂದಾಗ ಹೋದಾಗ ಆರ್ಭಟ ಇದ್ದೇ ಇರುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಏನೇ ಆದರೂ ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ, ಸೋನಿಯಾ ಗಾಂಧಿ ಅವರು ನಾಯಕತ್ವ ಗೊಂದಲ ಬಗ್ಗೆ ತೀರ್ಮಾನ ಮಾಡ್ತಾರೆ, ಒಂದು ಕಡೆ ಸಿಎಂ, ಮತ್ತೊಂದು ಕಡೆ ಕೆಪಿಸಿಸಿ ಅಧ್ಯಕ್ಷರು, ಇಬ್ಬರಲ್ಲೂ ಗೊಂದಲ ಸೃಷ್ಟಿ ಆಗದ ರೀತಿಯಲ್ಲಿ ಹೈಮಾಂಡ್ ತೀರ್ಮಾನ ಮಾಡುತ್ತದೆ ಎಂದು ಅಭಿಪ್ರಾಯಪಟ್ಟರು.
Advertisement