

ಬಳ್ಳಾರಿ: ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಾಟೆ ಮತ್ತು ಗೋಲಿಬಾರ್ ಪ್ರಕರಣ ರಾಜಕೀಯವಾಗಿ ಭಾರಿ ತಿರುವು ಪಡೆದುಕೊಂಡಿದ್ದು, ಜನಾರ್ದನ್ ರೆಡ್ಡಿ ಅವರನ್ನು ಗುರಿಯಾಗಿಸಿಯೇ ಗುಂಡಿನ ದಾಳಿ ನಡೆದಿದೆ ಎಂದು ಮಾಜಿ ಸಚಿವರಾದ ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.
ಬಳ್ಳಾರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ಜನಾರ್ದನ್ ರೆಡ್ಡಿ ಅವರನ್ನು ಗುರಿಯಾಗಿಸಿಯೇ ಗುಂಡಿನ ದಾಳಿ ನಡೆದಿದೆ. ಮನೆ ಮೇಲೆ ಪೆಟ್ರೋಲ್ ಬಾಂಬ್ ಎಸೆಯುವ ಪ್ಲಾನ್ ಕೂಡ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದೇ ವೇಳೆ ಶಾಸಕ ಭರತ್ ರೆಡ್ಡಿ ವಿರುದ್ಧವೂ ಗುಡಿಗಿದ್ದಾರೆ.
ಆಕಸ್ಮಿಕವಾಗಿ ನಡೆದ ಘಟನೆ ಅಲ್ಲ, ಪ್ರೀ ಪ್ಲಾನ್ಡ್ ಅಟ್ಯಾಕ್ ಆಗಿದೆ. ಕಾಂಗ್ರೆಸ್ ಕಾರ್ಯಕರ್ತರು ಬರೀ ಬ್ಯಾನರ್ ಕಟ್ಟೋಕೆ ಬಂದಿರಲಿಲ್ಲ. ಜನಾರ್ದನ ರೆಡ್ಡಿ ಅವರ ಮನೆಯ ಮೇಲೆ ಪೆಟ್ರೋಲ್ ಬಾಂಬ್ ಎಸೆದು, ಇಡೀ ಮನೆಯನ್ನೇ ಸುಟ್ಟು ಹಾಕುವ ಪ್ಲಾನ್ ಮಾಡ್ಕೊಂಡೇ ಬಂದಿದ್ದರು ಎಂದು ಶ್ರೀರಾಮುಲು ಅವರು ಆರೋಪಿಸಿದ್ದಾರೆ.
ಆ ಗುಂಡು ಹಾರಿದ್ದು ಗಾಳಿಯಲ್ಲಿ ಅಲ್ಲ, ಅದು ಜನಾರ್ದನ ರೆಡ್ಡಿ ಅವರನ್ನೇ ಗುರಿ ಮಾಡಿ ಹಾರಿಸಲಾಗಿದೆ. ಆದರೆ, ದುರಾದೃಷ್ಟವಶಾತ್ ಒಬ್ಬ ಅಮಾಯಕ ಪ್ರಾಣ ಬಿಟ್ಟ ಎಂದು ಹೇಳಿದ್ದಾರೆ.
ಘಟನೆ ನಮ್ಮೆಲ್ಲರಿಗೂ ನೋವು ತರಿಸಿದೆ. ಏನು ನಡೆಯಬಾರದಾಗಿತ್ತೋ ಅದೆಲ್ಲಾ ನಡೆದು ಹೋಗಿದೆ. ಅಮಾಯಕ ರಾಜಶೇಖರ್ ಅನ್ನೋ ಯುವಕನ ಸಾವಾಗಿದೆ. ಮಗನ ಬಗ್ಗೆ ತಾಯಿ ಭವಿಷ್ಯ ಕಟ್ಟಿಕೊಂಡಿದ್ದಳು. ಆ ಯುವಕ ಬಿಜೆಪಿ ಆಗಲಿ, ಕಾಂಗ್ರೆಸ್ ಆಗಲಿ ಯಾವುದೇ ಪಕ್ಷಕ್ಕೆ ಸೇರಿರಲಿ. ಫೈರಿಂಗ್‌ನಲ್ಲಿ ರಾಜಶೇಖರ್ ಸಾವಾಗಿದೆ. ರಾಜಶೇಖರ್ ರೆಡ್ಡಿಗೆ ಸಂತಾಪ ಸೂಚಿಸುತ್ತೇನೆ. ಆ ಕುಟುಂಬಕ್ಕೆ ನೋವು ತಡೆಯುವ ಶಕ್ತಿ ಕೊಡಲೆಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆಂದು ತಿಳಿಸಿದರು.
ಕಾಂಗ್ರೆಸ್ ಕಾರ್ಯಕರ್ತರಿಗೆ ಬ್ಯಾನರ್ ಕಟ್ಟೋದು ಬೇಡ ಎಂದು ಹೇಳಿಲ್ಲ. ಕಾರು ಹೋಗೋದಕ್ಕೆ ಜಾಗ ಬಿಟ್ಟು ಕಟ್ಟಲು ಹೇಳಲಾಗಿತ್ತು. ಜಗಳ ಮಾಡಲೇಬೇಕೆಂದು ಅವರು ಪ್ಲಾನ್ ಮಾಡಿಕೊಂಡು ಬಂದಿದ್ದಾರೆ. ಜನಾರ್ದನ ರೆಡ್ಡಿ ಬರುವಾಗ ಏಕಾಏಕೀ ಜಗಳ ಶುರುವಾಗಿತ್ತು. ನಾನೂ ಬಂದೆ. ಜನಾರ್ದನ ರೆಡ್ಡಿ ಮೇಲೆ ಗುಂಡು ಹಾರಿತು. ಅದನ್ನ ಅವರೂ ತೋರಿಸಿದ್ರು. ಅಷ್ಟರೊಳಗೆ ಪೊಲೀಸರು ಬಂದು ಗುಂಪನ್ನು ಚದುರಿಸಿದರು. ಆಗ ಗುಂಪು ಜಾಸ್ತಿ ಆಗಿ ಘೋಷಣೆಗಳೂ ಜಾಸ್ತಿಯಾಯಿತು.
ಅದಕ್ಕೂ ಮೊದಲು ಸತೀಶ್ ರೆಡ್ಡಿ ಬಾಡಿ ಗಾರ್ಡ್ಗಳು ಸಿನಿಮಾದಲ್ಲಿ ಹೊಡೆದಂತೆ ಬುಲೆಟ್ ಫೈರ್ ಮಾಡಿದ್ದರು. ಬಳ್ಳಾರಿಯಲ್ಲಿ 1982ರಲ್ಲಿ ಮಾತ್ರ ಒಂದು ಘಟನೆ ನಡೆದಿತ್ತು. ಆ ರೀತಿಯ ಘಟನೆ ಮತ್ತೇ ಇದೀಗ ನಡೆದಿದೆ. ಜನಾರ್ದನ ರೆಡ್ಡಿ ಅವರ ಮನೆ ಮುಂದೆ ಬ್ಯಾನರ್ ಕಟ್ಟಿ ಗಲಾಟೆ ಮಾಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಫೈರಿಂಗ್ ಮಾಡಿದ್ದಾರೆ. ಫೈರಿಂಗ್ ಮಾಡೋದಕ್ಕೆ ಅವಕಾಶ ಕೊಟ್ಟವರು ಯಾರು? ಮೇಲ್ನೋಟಕ್ಕೆ ಅವರಿಂದಲೇ ಫೈರಿಂಗ್ ಆಗಿರೋದು ಗೊತ್ತಾಗುತ್ತಿದೆ ಎಂದು ಆರೋಪಿಸಿದರು.
ಮಳೆ ಸುರಿಸಿದಂತೆ ಕಲ್ಲು ಸುರಿಸಿದ್ದಾರೆ. ನಮ್ಮ ಕಾರ್ಯಕರ್ತರು, ಮುಖಂಡರು ಗಾಯಗೊಂಡಿದ್ದಾರೆ. ಈಗಾಗಲೇ ನಮ್ಮವರನ್ನ ಡಿಸ್ಚಾರ್ಜ್ ಮಾಡಿದ್ದಾರೆ. ಅವರು ಕಲ್ಲು ತೂರಾಟ ಮಾಡಿದಾಗ, ನಮ್ಮವರೂ ಕಲ್ಲು ತೂರಿದ್ದಾರೆ. ಅವರ ಗನ್‌ಮ್ಯಾನ್‌ಗಳೇ ಗುಂಡು ಹಾರಿಸಿದ್ದಾರೆ.
ಸತೀಶ್ ರೆಡ್ಡಿ ಹಾಲಿ, ಮಾಜಿ ಶಾಸಕನೂ ಅಲ್ಲ. ಬಿಹಾರ್ ಮಾದರಿಯಲ್ಲಿ ಸತೀಶ್ ರೆಡ್ಡಿ ಗನ್ ಇಟ್ಕೊಂಡಿದ್ದಾನೆ. ಎಷ್ಟು ದೌರ್ಜನ್ಯ ಇವರದ್ದು? ಆ ರೀತಿ ಫೈರ್ ಮಾಡುತ್ತಾ ಹೋದರೆ ಏನ್ ಮಾಡೋದಕ್ಕೆ ಆಗುತ್ತದೆ? ಹಾಗಾಗಿ ಕಾರ್ಯಕರ್ತರೆಲ್ಲರೂ ಒಂದೆಡೆ ಸೇರಿದ್ದಾರೆ. ಆದರೂ ನಾವು ಶಾಂತಿ, ಕಾನೂನು ಸುವ್ಯವಸ್ಥೆ ಹಾಳಾಗಬಾರದು ಎಂದು ಹೇಳಿದ್ದೇವೆ. ಸತ್ಯವನ್ನೂ ಯಾರೂ ಮುಚ್ಚಡಲು ಆಗಲ್ಲ. ಕೆಟ್ಟ ಕೆಲಸ ಮಾಡಿದ ದಿನ ರಾಜಕಾರಣದಲ್ಲಿ ಇರೋದಿಲ್ಲ. ಶಾಂತಿಯುತ ಊರಲ್ಲಿ ಈ ರೀತಿ ದೌರ್ಜನ್ಯ ಮಾಡಿ, ಫೈರಿಂಗ್ ಮಾಡೋದು ಎಂದರೆ ಏನು?
ಇದು ಪೋಲಿಸರಿಂದ ಆಗಿರೋ ಫೈರಿಂಗ್ ಅಲ್ಲ. ಖಾಸಗಿ ವ್ಯಕ್ತಿಯಿಂದ ಆಗಿರೋದು. ನಮ್ಮ ತಾಯಿ-ತಂದೆ ಅದನ್ನ ಕಲಿಸಿಲ್ಲ. ಧರ್ಮದ ಪರವಾಗಿ ನಾವಿರುವವರು. ಯಾರ ಗನ್‌ನಿಂದ ಯಾರು ಹಾರಿಸಿದ್ದಾರೆ ಅದನ್ನ ಪತ್ತೆ ಹಚ್ಚಲು ಹೇಳಿದ್ದೇನೆ. ನಮ್ಮ ಗನ್‌ಮ್ಯಾನ್ ಬಳಿಯ ಬುಲೆಟ್‌ಗಳನ್ನೂ ಲೆಕ್ಕ ಮಾಡಲಿ. ಕೂಡಲೇ ಎಫ್‌ಎಸ್‌ಎಲ್'ಗೆ ಕೊಡಿ ಎಂದು ಮನವಿ ಮಾಡಿದರು.
ನಾನು ಮನಸ್ಸು ಮಾಡಿದ್ರೆ ಬಳ್ಳಾರಿ ಭಸ್ಮ ಮಾಡ್ತೇನೆ ಅಂತ ಭರತ್ ರೆಡ್ಡಿ ಹೇಳಿದ್ದಾರೆ. ಯಾವನೋ ಒಬ್ಬ ಪೆಟ್ರೋಲ್ ಬಾಂಬ್ ಎಸೆದಿದ್ದಾನೆ. ಅವರ ಮನೆ ಸುಡ್ತಿದ್ದೆ ಅಂತ ಭರತ್ ರೆಡ್ಡಿ ಅಂದಿದ್ದಾರೆ. ಅದಕ್ಕಾಗಿ ಅವರು ಎಲ್ಲವನ್ನೂ ತಂದಿದ್ದಾರೆ. ಜನಾರ್ದನ ರೆಡ್ಡಿ ಅವರ ಮನೆ ಸುಡ್ತಿದ್ದೆ, ಬಳ್ಳಾರಿಯನ್ನ ಭಸ್ಮ ಮಾಡ್ತೇನೆ ಅನ್ನೋದನ್ನ ಕೇಳಿದ್ರೆ ಪೆಟ್ರೋಲ್ ಬಾಂಬ್ ಅವರೇ ತಂದಿದ್ದು ಎಂದು ಭರತ್ ರೆಡ್ಡಿ ವಿರುದ್ಧ ಗಂಭೀರ ಆರೋಪ ಮಾಡಿದರು.
ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣಕ್ಕೆ ಆಕ್ಷೇಪಣೆ ಇಲ್ಲ
ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣಕ್ಕೆ ನಮ್ಮ ಅಭ್ಯಂತರ ಇಲ್ಲ. ಅದು ಆಗಬೇಕೆಂಬುದು ನಮ್ಮ ಆಶಯವಾಗಿದೆ. ವಾಲ್ಮೀಕಿಯನ್ನು, ಜಾತಿಯನ್ನು ನೀವು ಬಳಸಿಕೊಳ್ಳಬೇಡಿ, ನಾವು ಸಹ ಸಮಾರಂಭಕ್ಕೆ ಸಹಾಯ ಮಾಡುತ್ತೇವೆ ಎಂದರು. ಅವರು ಸಂಸ್ಕಾರ ಇಲ್ಲದಂತೆ ನಡೆದುಕೊಳ್ಳುವುದು ಥರವಲ್ಲ. ಪ್ರಚೋದನೆ, ಶಕ್ತಿ ಪ್ರದರ್ಶನ ಬೇಡ. ನಮ್ಮಮನೆಗಳ ಕಡೆಗೆ ಬಂದು ಗಲಾಟೆ ಮಾಡಿದವರು ಯಾರು, ಯಾವುದೇ ತನಿಖೆ ಮಾಡಲಿ ಎಂದರು.
ನಾನು ತಪ್ಪು ಮಾಡಲ್ಲ, ಮಾಡಿಲ್ಲ. ನಮ್ಮನ್ನು ಪೊಲೀಸರು ರಕ್ಷಣೆ ಮಾಡಿದರು. ನಾನು ನಿರೀಕ್ಷಣಾ ಜಮೀನು ಪಡೆಯಲ್ಲ. ಜನಾರ್ದನರೆಡ್ಡಿಗೆ ತೊಂದರೆ ಮಾಡುವುದು ಭರತ್ ರೆಡ್ಡಿಯದ್ದಾಗಿದೆ ಎಂದು ದೂರಿದರು.
ಪುತ್ಥಳಿ ಅನಾವರಣಕ್ಕೆ ಇಷ್ಟೆಲ್ಲ ಮಾಡಬೇಕೆ, ರಾಮುಲು ವಾಲ್ಮಿಕಿ ಸಮುದಾಯಕ್ಕೆ ಏನು ಮಾಡಿದೆಂದು ಜನರಿಗೆ ಗೊತ್ತಿದೆ. ಅವರಲ್ಲಿ ವಿನಂತಿ ಇಷ್ಟೇ ನೀವು ರಾಜಕೀಯವಾಗಿ ಬೆಳೆಯಬೇಕು. ನಿಮ್ಮಲ್ಲಿ ಸ್ಪೀಡ್ ಬೇಡ, ಸ್ಪೀಡ್ ಹೆಚ್ಚಿದರೆ ಆಕ್ಸಿಡೆಂಟ್ ಆಗುತ್ತೆ ಎಂದು ಎಚ್ಚರಿಸಿದರು. ಘಟನೆ ಬಗ್ಗೆ ಪಕ್ಷದ ರಾಜ್ಯ , ರಾಷ್ಟ್ರೀಯ ನಾಯಕರಿಗೆ ಮಾಹಿತಿ ನೀಡಿರುವೆ ಎಂದರು.
ನಮ್ಮ ಮನೆಗಳ ಬಳಿ ಬಂದು ಗಲಾಟೆ ಮಾಡಿದ್ದಾರೆ. ಈ ಬಗ್ಗೆ ಜನಾರ್ದನರೆಡ್ಡಿ ಅವರು ಹತ್ಯೆ ಯತ್ನ, ಗೂಂಡಾಗಿರಿ ಬಗ್ಗೆ ಪ್ರಕರಣ ದಾಖಲು ಮಾಡಲಿದ್ದಾರೆ.
ಶಾಸಕ ಜನಾರ್ದನರೆಡ್ಡಿ ಮಾತನಾಡಿ, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಆಪ್ತ ಸತೀಶ್ ರೆಡ್ಡಿ ಹಾಗೂ ಭರತ್ ರೆಡ್ಡಿ ತಂದೆ ನಾರಾ ಸೂರ್ಯನಾರಾಣರೆಡ್ಡಿಯಿಂದ ನನ್ನ ಹತ್ಯೆಗೆ ಸಂಚು ನಡೆದಿದೆ ಎಂದು ಆರೋಪಿಸಿದರು.
ನರ್ ಗಲಾಟೆ ನೆಪದಲ್ಲಿ ನಮ್ಮ ನಿವಾಸದ ಮುಂದೆ ಗನ್ ಮ್ಯಾನ್‌ಗಳಿಂದ ಗುಂಡಿನ ದಾಳಿಯಾಗಿದೆ. ನಾನು ಗಂಗಾವತಿಯಿಂದ ಕಾರಿನಲ್ಲಿ ಬಂದು ಇಳಿಯುತ್ತಿದ್ದಂತೆ ಗುಂಡಿನ ದಾಳಿ ಆರಂಭಿಸಿದ್ದಾರೆ. ಗನ್ ಮ್ಯಾನ್‌ಗಳು ನಾಲ್ಕಾರು ರೌಂಡ್ ಪೈರ್ ಮಾಡಿದ್ದಾರೆ. ಪುತ್ಥಳಿ ಪ್ರತಿಷ್ಟಾಪನೆ ಹೆಸರಲ್ಲಿಊರಿಗೆ ಬೆಂಕಿ ಹಚ್ಚಲು ಹೊರಟಿದ್ದಾರೆ. ಕೊಲೆಗೆಡುಕರನ್ನ ಹಿಂದಿಟ್ಟುಕೊಂಡು ದಬ್ಬಾಳಿಕೆ ನಡೆಸುತ್ತಿದ್ದಾರೆಂದು ಕಿಡಿಕಾರಿದರು.
ಏನಿದು ಪ್ರಕರಣ..?
ಬಳ್ಳಾರಿ ನಗರದಲ್ಲಿ ಬ್ಯಾನರ್ ಅಳವಡಿಕೆ ವಿಚಾರಕ್ಕೆ ಗಲಾಟೆಯಿಂದ ಮಾಜಿ ಸಚಿವ, ಶಾಸಕ ಜನಾರ್ದನ ರೆಡ್ಡಿ ಬೆಂಬಲಿಗರು ಹಾಗೂ ಶಾಸಕ ಭರತ್ ರೆಡ್ಡಿ ಬೆಂಬಲಿಗರ ನಡುವೆ ಕಲ್ಲು ತೂರಾಟವಾಗಿದೆ.
ಎರಡೂ ಕಡೆಯಿಂದ ಕಲ್ಲು ತೂರಾಟ ನಡೆದಿದ್ದು, ಕೈಯಲ್ಲಿ ಕಲ್ಲು, ಕಟ್ಟಿಗೆ ಹಿಡಿದು ಗಲಾಟೆಯಾಗಿದೆ. ಗಲಾಟೆ ಜೋರಾಗುತ್ತಿದ್ದಂತೆ ಶಾಸಕ ಭರತ್ ರೆಡ್ಡಿ ಬೆಂಬಲಿಗ ಸತೀಶ ರೆಡ್ಡಿ ಖಾಸಗಿ ಗನ್ ಮ್ಯಾನ್‌ಗಳು ಏರ್ ಫೈರ್ ನಡೆಸಿದ್ದಾರೆ. ಇದರಿಂದಾಗಿ ಭರತ್ ರೆಡ್ಡಿ ಬೆಂಬಲಿಗ ಸತೀಶ ರೆಡ್ಡಿಗೆ ಗಂಭೀರ ಗಾಯವಾಗಿದೆ.
ಇನ್ನೂ ಬ್ಯಾನರ್ ವಿಚಾರದಲ್ಲಿ ಆಗ ಗಲಾಟೆಯನ್ನ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಈ ವೇಳೆ ಲಾಠಿ ಚಾರ್ಜ್‌ನಿಂದಲೂ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದಾಗ ಐದಾರು ಬಾರಿ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಈ ಗಲಾಟೆ ವೇಳೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ನಿಧನರಾಗಿದ್ದಾರೆ. ನಂತರ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿದೆ. ವಾತಾವರಣ ತಿಳಿಗೊಳಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.
Advertisement