

ಬೆಂಗಳೂರು: ಬಳ್ಳಾರಿಯಲ್ಲಿ ಗುರುವಾರ ನಡೆದ ಹಿಂಸಾಚಾರ ಹಾಗೂ ಜನಾರ್ಧನ ರೆಡ್ಡಿಯವರಿಗೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ದ್ವೇಷ ಭಾಷಣ ಕಾಯ್ದೆಯಡಿ ಶಾಸಕ ಭರತ್ ರೆಡ್ಡಿ ವಿರುದ್ಧ ಪ್ರಕರಣ ದಾಖಲಿಸುವಂತೆ ರಾಜ್ಯ ಸರ್ಕಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.
ಬಳ್ಳಾರಿಯಲ್ಲಿ ಪಕ್ಷದ ಶಾಸಕ ಜಿ. ಜನಾರ್ದನ ರೆಡ್ಡಿ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ದ್ವೇಷ ಭಾಷಣ ಮಸೂದೆಯಡಿಯಲ್ಲಿ ಮೊದಲ ಆರೋಪಿ ಕಾಂಗ್ರೆಸ್ ನ ಭರತ್ ರೆಡ್ಡಿ ಆಗಿದ್ದಾರೆಂದು ಹೇಳಿದರು.
ಬಳ್ಳಾರಿಯಲ್ಲಿ ಭರತ್ ರೆಡ್ಡಿಯವರು ಮಾಡಿರುವುದು ದ್ವೇಷ ಭಾಷಣವಲ್ಲವೇ? ಜನಾರ್ದನ ರೆಡ್ಡಿ ಅವರ ಮನೆಯನ್ನು ನೆಲಸಮ ಮಾಡಿ ಮುಗಿಸುತ್ತೇನೆ ಎಂದು ಭರತ್ ರೆಡ್ಡಿ ಬೆದರಿಕೆ ಹಾಕಿದ್ದಾರೆ. ಇದು ಪ್ರಚೋದನಕಾರಿ ಭಾಷಣವಲ್ಲದಿದ್ದರೆ ಇನ್ನೇನು? ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸರ್ಕಾರಕ್ಕೆ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಗೌರವವಿದ್ದರೆ, ಮೊದಲು ತನ್ನದೇ ಶಾಸಕನನ್ನು ಬಂಧಿಸಬೇಕು. ಇಂತಹ ಗೂಂಡಾಗಿರಿಯನ್ನು ಸಹಿಸಲು ಸಾಧ್ಯವಿಲ್ಲ. ಘರ್ಷಣೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಬಳ್ಳಾರಿಯಲ್ಲಿ ಶಾಂತಿ ಕದಡುವ ಈ ದುಸ್ಸಾಹಸ ಪ್ರಯತ್ನವನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದರು.
ಬಳ್ಳಾರಿಯ ವೃತ್ತದಲ್ಲಿ 25 ವರ್ಷಗಳ ಹಿಂದೆ ಬಿಜೆಪಿ ನಾಯಕರಾದ ಶ್ರೀರಾಮುಲು, ಆನಂದ್ ಸಿಂಗ್ ಮತ್ತು ಸೋಮಶೇಖರ ರೆಡ್ಡಿ ಅವರು ಗೌರವ ಸಲ್ಲಿಸುವ ಸಂಕೇತವಾಗಿ ಮಹರ್ಷಿ ವಾಲ್ಮೀಕಿ ಪ್ರತಿಮೆಯನ್ನು ಸ್ಥಾಪಿಸಿದ್ದರು. ಈಗ, ರಾಜಕೀಯ ಲಾಭಕ್ಕಾಗಿ, ಕಾಂಗ್ರೆಸ್ ಕಾರ್ಯಕರ್ತರು ವೃತ್ತದ ಸುತ್ತಲೂ ಅಕ್ರಮವಾಗಿ ಬ್ಯಾನರ್ ಮತ್ತು ಪೋಸ್ಟರ್‌ಗಳನ್ನು ಹಾಕುವ ಮೂಲಕ ರೌಡಿಸಂನಲ್ಲಿ ತೊಡಗಿದ್ದಾರೆ. ಅವರು ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ಮಾಡಿ, ಬೆದರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ಖಾಸಗಿ ಗನ್‌ಮ್ಯಾನ್‌ಗಳನ್ನು ಬಳಸಿ ಜನಾರ್ಧನ ರೆಡ್ಡಿಯವರ ಮೇಲೆ ಗುಂಡು ಹಾರಿಸಲು ಯತ್ನಿಸಿದ್ದಾರೆ.ರಾಜ್ಯದಲ್ಲಿ ಪರಿಸ್ಥಿತಿ ನಿಯಂತ್ರಣ ತಪ್ಪುವ ಮೊದಲು ಅಂತಹ ಕ್ರೌರ್ಯಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಗನ್ ಮ್ಯಾನ್ ಹಾರಿಸಿದ ಗುಂಡಿನಿಂದ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಸಾವನ್ನಪ್ಪಿದ್ದಾನೆ. ಈ ಘರ್ಷಣೆಗೆ ಭರತ್ ರೆಡ್ಡಿ ಕಾರಣ. ಈ ರೌಡಿಸಂ ಅನ್ನು ಬಿಜೆಪಿ ಖಂಡಿಸುತ್ತದೆ. ಜನಾರ್ದನ ರೆಡ್ಡಿ, ಶ್ರೀರಾಮುಲು, ಆನಂದ್ ಸಿಂಗ್, ಸೋಮಶೇಖರ ರೆಡ್ಡಿ ಮತ್ತು ಇತರ ಬಿಜೆಪಿ ನಾಯಕರನ್ನು ಹೆದರಿಸಬಹುದೆಂಬ ಭ್ರಮೆಯಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಆದರೆ, ಈ ಘಟನೆಯಿಂದ ನಮ್ಮ ಪಕ್ಷದ ಕಾರ್ಯಕರ್ತರು ಧೈರ್ಯ ಕಳೆದುಕೊಳ್ಳುವುದಿಲ್ಲ ಎಂದರು.
ಇದಕ್ಕೂ ಮೊದಲು, ಬಳ್ಳಾರಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಗೊಂಡ ಬಿಜೆಪಿ ಕಾರ್ಯಕರ್ತರನ್ನು ವಿಜಯೇಂದ್ರ ಅವರು, ಭೇಟಿಯಾದರು. ಈ ವೇಳೆ ಶ್ರೀರಾಮುಲು, ಆನಂದ್ ಸಿಂಗ್ ಮತ್ತು ಇತರ ಬಿಜೆಪಿ ನಾಯಕರು ವಿಜಯೇಂದ್ರ ಅವರಿಗೆ ಸಾಥ್ ನೀಡಿದ್ದರು.
ಜನವರಿ 3 ರಂದು ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮ ನಡೆಯಬೇಕಿದ್ದ ಹಿನ್ನೆಲೆಯಲ್ಲಿ ಬಳ್ಳಾರಿಯ ಹವಂಬಾವಿ ನಗರದಲ್ಲಿರುವ ಜನಾರ್ದನ ರೆಡ್ಡಿ ಮನೆ ಮುಂಭಾಗ ಬ್ಯಾನರ್ ಅಳವಡಿಕೆ ಮಾಡಲು ಗುರುವಾರ (ಜ.1) ಒಂದು ಗುಂಪು ಮುಂದಾಗಿತ್ತು. ಈ ವೇಳೆ ಗಲಾಟೆ ಪ್ರಾರಂಭವಾಗಿತ್ತು.
ಗಲಾಟೆ ವಿಕೋಪಕ್ಕೆ ತಿರುಗಿ ಶಾಸಕ ಭರತ್ ರೆಡ್ಡಿ ಬೆಂಬಲಿಗರು ಹಾಗೂ ಜನಾರ್ದನ ರೆಡ್ಡಿ ಬೆಂಬಲಿಗರು ಕಲ್ಲು ತೂರಾಟ ನಡೆಸಿದ್ದರು. ಉದ್ವಿಗ್ನ ವಾತಾವರಣ ನಿರ್ಮಾಣವಾದ ಬೆನ್ನಲ್ಲೇ ಸ್ಥಳಕ್ಕೆ ಮಾಜಿ ಸಚಿವ ಶ್ರೀರಾಮುಲು ಹಾಗೂ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಬಂದಿದ್ದರು. ಈ ಸಂದರ್ಭದಲ್ಲಿ ಎರಡು ಕಡೆ ಮಾತಿನ ಚಕಮಕಿ ನಡೆದು ಪೊಲೀಸರು ಲಾಠಿ ಚಾರ್ಜ್ ಮಾಡಿ, ಜನರನ್ನು ಚದುರಿಸಿದ್ದರು.
ಪೊಲೀಸರು ಲಾಠಿ ಚಾರ್ಜ್ ಮಾಡಿದರೂ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದರು. ಈ ಸಂದರ್ಭದಲ್ಲಿ ಖಾಸಗಿ ಗನ್‌ಮ್ಯಾನ್‌ಗಳು ಫೈರಿಂಗ್ ಮಾಡಿದ್ದರು. ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಗುಂಡಿನ ದಾಳಿಗೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮೃತಪಟ್ಟಿದ್ದಾರೆಂದು ಹೇಳಲಾಗುತ್ತಿದೆ.
ಇದೇ ವೇಳೆ ಭರತ್ ರೆಡ್ಡಿ ಬೆಂಬಲಿಗ ಸತೀಶ ರೆಡ್ಡಿಗೆ ಗಂಭೀರ ಗಾಯಗೊಂಡಿದ್ದಾರೆ. ಗಲಾಟೆ ವಿಕೋಪದ ಬಳಿಕ ಪೊಲೀಸರು ರೆಡ್ಡಿ ಮನೆಯ ಬಳಿ ನಿಷೇಧಾಜ್ಞೆ ಜಾರಿಗೊಳಿಸಿದ್ದರು.
Advertisement