

ಬೆಂಗಳೂರು: ಗುಂಡು ಹಾರಿಸಿ ತಮ್ಮದೇ ಪಕ್ಷದ ಕಾರ್ಯಕರ್ತನನ್ನು ಬಲಿ ಪಡೆದ ಶಾಸಕನನ್ನು ಉಚ್ಛಾಟಿಸುವ ತಾಕತ್ತು ನಿಮ್ಮ ಪಕ್ಷಕ್ಕಿದೆಯೇ? ಎಂದು ಕಾಂಗ್ರೆಸ್'ಗೆ ಬಿಜೆಪಿ ಪ್ರಶ್ನೆ ಮಾಡಿದೆ.
ಬಳ್ಳಾರಿ ಗಲಭೆ ಪ್ರಕರಣ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಿಡಿಕಾರಿದೆ. ಗಲಭೆ ನಡೆಸಿದ್ದು ಕಾಂಗ್ರೆಸ್ ಶಾಸಕ, ಗುಂಡು ಹಾರಿಸಿದ್ದೂ ಕಾಂಗ್ರೆಸ್ ಗೂಂಡಾಗಳ ಕಡೆಯವರು, ಬಿಜೆಪಿ ಶಾಸಕರನ್ನು ಹತ್ಯೆ ಮಾಡಲು ಪ್ರಚೋದಿಸಿದ್ದೂ ಕಾಂಗ್ರೆಸ್ ಶಾಸಕ. ಆದರೆ, ಅಮಾನತಿನ ಶಿಕ್ಷೆ ಮಾತ್ರ ಸರ್ಕಾರಿ ಅಧಿಕಾರಿಗೆ ಎಂದು ಕಿಡಿಕಾರಿದೆ.
ಪೂರ್ವನಿಯೋಜಿತ, ಸರ್ಕಾರಿ ಪ್ರಾಯೋಜಿತ ಮತ್ತು ಆಡಳಿತ ಯಂತ್ರವೇ ನೇರವಾಗಿ ಭಾಗಿಯಾದ ಪ್ರಕರಣಕ್ಕೆ ಆಗಷ್ಟೇ ಅಧಿಕಾರ ಸ್ವೀಕರಿಸಿದ ಸರ್ಕಾರಿ ಅಧಿಕಾರಿಯನ್ನು ಸಿದ್ದಾರಾಮಯ್ಯ ಸರ್ಕಾರ ಅಮಾನತುಗೊಳಿಸಿದ್ದೇಕೆ? ಎಂದು ಪ್ರಶ್ನಿಸಿದೆ.
ಗುಂಡು ಹಾರಿಸಿ ತಮ್ಮದೇ ಪಕ್ಷದ ಕಾರ್ಯಕರ್ತನನ್ನು ಬಲಿ ಪಡೆದ ಶಾಸಕನನ್ನು ಉಚ್ಛಾಟಿಸುವ ತಾಕತ್ತು ಕಾಂಗ್ರೆಸ್ ಪಕ್ಷಕ್ಕಿದೆಯೇ? ಎಂದೂ ಪ್ರಶ್ನಿಸಿದೆ.
ಈ ನಡುವೆ ಶುಕ್ರವಾರ ಸಂಜೆ ಮಾಜಿ ಸಚಿವ ಮತ್ತು ಶಾಸಕ ಜಿ. ಜನಾರ್ಧನ ರೆಡ್ಡಿ ಅವರ ಬಳ್ಳಾರಿಯ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಭೇಟಿ ನೀಡಿ, ಕೆಲಕಾಲ ಮಾತುಕತೆ ನಡೆಸಿದರು.
ಬಳಿಕ ಮಾತನಾಡಿದಅವರು, ಜನಾರ್ದನ ರೆಡ್ಡಿ ಅವರ ಮನೆ ನುಚ್ಚು ನೂರು ಮಾಡುತ್ತೇನೆ; ಪುಡಿಪುಡಿ ಮಾಡುತ್ತೇನೆ. ಭಸ್ಮ ಮಾಡುತ್ತೇನೆ; ಮುಗಿಸಿಬಿಡುವೆ ಎಂಬ ಧಾಟಿಯಲ್ಲಿ ಕೈ ಶಾಸಕ ಮಾತನಾಡಿದ್ದಾರೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಸರ್ಕಾರಕ್ಕೆ ನಾಡಿನ ನೆಲದ ಕಾನೂನಿನ ಬಗ್ಗೆ ಗೌರವ ಇದ್ದರೆ, ಮೊದಲು ನಿಮ್ಮ ಶಾಸಕನನ್ನು ಒದ್ದು ಒಳಗೆ ಹಾಕಿ ಎಂದು ಆಗ್ರಹಿಸಿದರು.
ಈ ರೀತಿ ಗೂಂಡಾಗಿರಿ ನಡೆಯುವುದಿಲ್ಲ ಎಂದು ಅವರಿಗೂ ಅರ್ಥ ಆಗಬೇಕು. ಮಹರ್ಷಿ ವಾಲ್ಮೀಕಿಯವರಿಗೆ ಯಾವ ರೀತಿ ಗೌರವ ಕೊಡಬೇಕೆಂಬ ಸೌಜನ್ಯ ಇವರಿಗೆ ಇಲ್ಲ. ಒಳ್ಳೆಯ ವಾತಾವರಣ ಹಾಳು ಮಾಡುವ ದುಸ್ಸಾಹಸಕ್ಕೆ ಕೈ ಹಾಕಿದ್ದು ಇದನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ ಎಂದು ತಿಳಿಸಿದರು.
Advertisement