

ಶಿವಮೊಗ್ಗ: ನನ್ನ ಕುತ್ತಿಗೆಯನ್ನು ಕೊಯ್ದರೂ ಹಿಂದುತ್ವವನ್ನು ಮಾತ್ರ ಬಿಡುವುದಿಲ್ಲ ಎಂದು ಹೇಳಿರುವ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಬಿಜೆಪಿ ಪಕ್ಷಕ್ಕೆ ವಾಪಸ್ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ.
ದಾವಣಗೆರೆಯ ಹರಿಹರದ ಪಂಚಮಸಾಲಿ ಪೀಠದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕೆಎಸ್ ಈಶ್ವರಪ್ಪ, 'ಬಿಜೆಪಿಗೆ ಮರಳುವಂತೆ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಪಕ್ಷದಲ್ಲಿ ಪರಿವರ್ತನೆ ಆಗಬೇಕು ಎಂದು ನಾನು ಹೊರಗೆ ಬಂದಿದ್ದೇನೆ.
ಆ ಪರಿವರ್ತನೆ ಇವತ್ತಲ್ಲ ನಾಳೆ ಆಗುತ್ತೆ. ಬಿಜೆಪಿ ಕಾರ್ಯಕರ್ತರು ಪಕ್ಷದಲ್ಲಿ ಸಾಕಷ್ಟು ನೋವು ಅನುಭವಿಸುತ್ತಿದ್ದಾರೆ. ನನ್ನ ಮನಸ್ಸಲ್ಲೂ, ಯತ್ನಾಳ್ ಮನಸ್ಸಲ್ಲೂ ಇದೆ ವಿಚಾರ ಇದೆ ಎಂದಿದ್ದಾರೆ.
ಕುತ್ತಿಗೆ ಕೊಯ್ದರೂ ಹಿಂದುತ್ವ ಬಿಡಲ್ಲ
ಇದೇ ವೇಳೆ ಹಿಂದುತ್ವದ ಕುರಿತು ಮಾತನಾಡಿದ ಈಶ್ವರಪ್ಪ, 'ನಮ್ಮ ಕುತ್ತಿಗೆ ಕೊಯ್ದರೂ ಹಿಂದುತ್ವ ಬಿಟ್ಟು ಬೇರೆ ಕಡೆ ಹೋಗಲ್ಲ. ಇವತ್ತಲ್ಲ ನಾಳೆ ಪಕ್ಷಕ್ಕೆ ಒಳ್ಳೆಯ ಸ್ಥಿತಿ ಬರುತ್ತೆ. ಬಿಜೆಪಿ ಪಾದಯಾತ್ರೆ ವಿಚಾರಕ್ಕೂ ನನಗೇನೂ ಸಂಬಂಧ ಇಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಗೆ ಅಧಿಕಾರದ ಮದ
ಶಿಡ್ಲಘಟ್ಟದಲ್ಲಿ ಮಹಿಳಾ ಅಧಿಕಾರಿಗೆ ಕಾಂಗ್ರೆಸ್ ಮುಖಂಡ ಅವಾಜ್ ಹಾಕಿರುವ ವಿಚಾರವಾಗಿ, ಕಾಂಗ್ರೆಸ್‌ನವರಿಗೆ ಮೈ ಮೇಲೆ ಜ್ಞಾನ ಇಲ್ಲ. ನಮ್ಮ ಸರ್ಕಾರ ಇದೆ ಎಂದು ಹೀಗೆ ಮಾಡ್ತಿದ್ದಾರೆ. ಅಧಿಕಾರದ ಮದ ಏರಿದಾಗ ಈ ರೀತಿ ಮಾಡ್ತಾರೆ.
ರಾಜ್ಯದಲ್ಲಿ ಯಾವುದೇ ಮಹಿಳೆಯರಿಗೆ ಭದ್ರತೆ ಇಲ್ಲ. ಗೃಹ ಮಂತ್ರಿಗಳಿಗೆ ಹೇಳಿದ್ರೆ ಸಣ್ಣ ವಿಚಾರ ಬಿಡ್ರಿ ಅಂತಾರೆ. ಇಷ್ಟು ಹಗುರವಾಗಿ ತಗೆದುಕೊಳ್ಳುತ್ತಿದ್ದಾರೆ. ಅಧಿಕಾರ ಶಾಶ್ವತ ಎಂದುಕೊಂಡು ಈ ರೀತಿ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
Advertisement