

ಬೆಂಗಳೂರು: ಬೃಹನ್ ಮುಂಬೈ ಮಹಾನಗರ ಪಾಲಿಕೆ (BMC) ಸೇರಿದಂತೆ ಮಹಾರಾಷ್ಚ್ರದ 29 ನಗರ ಪಾಲಿಕೆಗಳಲ್ಲಿ ನಡೆದ ಚುನಾವಣೆಯಲ್ಲಿ ಬಳಸಿದ ಶಾಯಿ ಬಗ್ಗೆ ವಿವಾದ ಭುಗಿಲೆದ್ದಿದೆ. ಹಲವಾರು ವಾರ್ಡ್ ಗಳಲ್ಲಿ ಮತದಾನ ಬಳಿಕ ಬೆರಳಿಗೆ ಹಾಕಿರುವ ಶಾಯಿಯನ್ನು ನೈಲ್ ಪಾಲಿಶ್ ರಿಮೂವರ್ ನಿಂದ ಅಳಿಸಬಹುದು ಎಂದು ತೋರಿಸುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ವಿವಾದ ಬೆನ್ನಲ್ಲೇ ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆಯವರು ವಾಗ್ದಾಳಿ ನಡೆಸಿದ್ದಾರೆ. ಶಾಯಿ ವಿವಾದವನ್ನು ಪ್ರತ್ಯೇಕವಾಗಿ ನೋಡಬೇಡಿ. ಮುಂದಿನ 50 ಅಥವಾ 100 ವರ್ಷಗಳ ಕಾಲ ಶಾಶ್ವತವಾಗಿ ಆಡಳಿತ ನಡೆಸುವ ಉದ್ದೇಶದಿಂದ ಬಿಜೆಪಿ ಕೈಗೊಳ್ಳುತ್ತಿರುವ ಭಾಗವೇ ಇದು. ಈ ಶಾಯಿ ವಿವಾದ ಹತಾಶೆಯ ಕೊನೆಯ ಅಸ್ತ್ರವಷ್ಟೇ ಎಂದು ಹೇಳಿದ್ದಾರೆ. ಇತರೆ ಕಾಂಗ್ರೆಸ್ ನಾಯಕರೂ ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರದಾದ್ಯಂತ 29 ಪುರಸಭೆಗಳಿಗೆ ಗುರುವಾರ (ಜ.14) ಚುನಾವಣೆ ನಡೆದಿದೆ. ಈ ವೇಳೆ ಮತದಾರರು ಮತ ಚಲಾಯಿಸಿದ್ದಾರೆಂದು ಸೂಚಿಸಲು ತೋರು ಬೆರಳಿಗೆ ಗುರುತು ಹಾಕಲು ಅಳಿಸಲಾಗದ ಶಾಯಿಯ ಬದಲು ಮಾರ್ಕರ್ ಪೆನ್ನುಗಳನ್ನು ಬಳಸಲಾಗಿದೆ.
ಈ ಪೆನ್ನುಗಳಿಂದ ಹಾಕಿದ ಶಾಯಿ ಗುರುತು ಬೇಗನೆ ಅಳಿಸಿಹೋಗುತ್ತದೆ. ನೇಲ್ ಪಾಲಿಶ್ ರಿಮೂವರ್, ಸ್ಯಾನಿಟೈಸರ್ ಅಥವಾ ಸ್ವಲ್ಪ ಜೋರಾಗಿ ಉಜ್ಜಿದರೂ ಶಾಯಿ ಗುರುತು ಹೋಗುತ್ತದೆ ಎಂದು ಹಲವಾರು ಮತದಾರರು, ನಾಯಕರು ಆರೋಪಿಸಿದ್ದಾರೆ.
ಆರೋಪ ಪ್ರತ್ಯಾರೋಪಗಳ ನಡುವೆಯೇ ರಾಜ್ಯ ಚುನಾವಣಾ ಆಯೋಗ ಅಧಿಕಾರಿಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸಲು ಪತ್ರಿಕಾಗೋಷ್ಠಿ ನಡೆಸಿದರು.
ಈವರೆಗೆ ಬಳಸಲಾಗುತ್ತಿದ್ದ ಅದೇ ಶಾಯಿಯನ್ನು ಇಲ್ಲಿಯೂ ಬಳಸಲಾಗುತ್ತಿದೆ. ಯಾವುದೇ ಹೊಸ ವಸ್ತುವನ್ನು ಪರಿಚಯಿಸಲಾಗಿಲ್ಲ. ಚುನಾವಣಾ ಆಯೋಗವು 2011 ರಿಂದ ಮಾರ್ಕರ್ ಪೆನ್ ರೂಪದಲ್ಲಿ ಈ ಶಾಯಿಯನ್ನು ಬಳಸುತ್ತಿದೆ ಎಂದು ಹೇಳಿದೆ.
ಶಾಯಿ ಹಚ್ಚಿದ ನಂತರ ಒಣಗಲು ಸುಮಾರು 10 ರಿಂದ 12 ಸೆಕೆಂಡುಗಳು ತೆಗೆದುಕೊಳ್ಳುತ್ತದೆ. ಈ ಸಮಯದಲ್ಲಿ, ಮತದಾರರು ಇನ್ನೂ ಮತಗಟ್ಟೆಯೊಳಗೆ ಇರುತ್ತಾರೆ. ಅದು ಒಣಗಿದ ನಂತರ ಅದನ್ನು ಅಳಿಸಲಾಗುವುದಿಲ್ಲ. ಇದು ಭಾರತೀಯ ಚುನಾವಣಾ ಆಯೋಗವು ಬಳಸುವ ಅದೇ ಶಾಯಿಯಾಗಿದೆ. ಎರಡು ಬಾರಿ ಮತದಾನ ನಡೆದರೆ, ಮತಗಟ್ಟೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮತದಾರರು ಶಾಯಿ ಒಣಗುವ ಮೊದಲೇ ಅದನ್ನು ಉಜ್ಜಿ ತೆಗೆದರೆ, ಅದು ಮತದಾರರ ತಪ್ಪು. ಅಂತಹ ಮತದಾರರ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಬಹುದು. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುವ ವಿಡಿಯೊಗಳನ್ನು ತನಿಖೆ ಮಾಡಲಾಗುವುದು. ತಪ್ಪು ಮಾಹಿತಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.
Advertisement