

ಬೆಂಗಳೂರು: ಬಿಜೆಪಿ ಅಧ್ಯಕ್ಷ ಸ್ಥಾನದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಭಾರಿ ಬದಲಾವಣೆಗಳಾಗಿದ್ದರೂ ರಾಜ್ಯ ಬಿಜೆಪಿಯಲ್ಲಿ ಬದಲಾವಣೆ ಸಾಧ್ಯತೆಗಳಿಲ್ಲ ಎನ್ನಲಾಗುತ್ತಿದ್ದು, ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಅವರು ಮುಂದುವರೆಯುವ ಸಾಧ್ಯತೆ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅವರು ಮಂಗಳವಾರ ಅಧಿಕಾರ ಸ್ವೀಕರಿಸಿದ್ದು, ಇದರ ಬೆನ್ನಲ್ಲೇ ರಾಜ್ಯ ನಾಯಕತ್ವ ಬದಲಾವಣೆ ಕುರಿತ ಗೊಂದಲಗಳಿಗೆ ತೆರೆಬಿದ್ದಂತಾಗಿದೆ.
ಹೊಸ ರಾಷ್ಟ್ರೀಯ ಅಧ್ಯಕ್ಷರು ಅಧಿಕಾರ ವಹಿಸಿಕೊಂಡ ಕೂಡಲೇ ರಾಜ್ಯ ಬಿಜೆಪಿ ನಾಯಕತ್ವದಲ್ಲಿಯೂ ಬದಲಾವಣೆಗಳು ಬರುತ್ತವೆ ಎಂಬ ಮಾತುಗಳು ಹಲವು ತಿಂಗಳುಗಳಿಂದ ಕೇಳಿ ಬಂದಿದ್ದವು.
ಇದೀಗ 45 ವರ್ಷದ ನಿತಿನ್ ನಬಿನ್ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು, ಇದರಿಂದ ಇಷ್ಟು ದಿನ ಕಿರಿಯ ಕಿರಿಯ ಎಂದು ಹೇಳಿ ರಾಜ್ಯಾಧ್ಯಕ್ಷ ಸ್ಥಾನದಲ್ಲಿರುವ ವಿಜಯೇಂದ್ರ ಅವರಿಗೆ ವಿರೋಧ ವ್ಯಕ್ತಪಡಿಸುತ್ತಿದ್ದ ನಾಯಕರ ಸ್ಪಷ್ಟ ಸಂದೇಶ ನೀಡಲಾಗಿದೆ.
ಮುಂದಿನ ವಿಧಾನಸಭಾ ಚುನಾವಣೆಗಳಲ್ಲಿ ಅಂದರೆ ಸುಮಾರು 28 ತಿಂಗಳ ನಂತರ ನಡೆಯುವ ವಿಧಾನಸಭಾ ಚುನಾವಣೆಯಲ್ಲೂ ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮುಂದುವರಿಯುತ್ತಾರೆ ಎಂದು ಪಕ್ಷದ ಹಿರಿಯ ನಾಯಕರು ಹೇಳಿದ್ದು, ಇದು ಹೈಕಮಾಂಡ್ ವಿಜಯೇಂದ್ರ ಅವರ ನಾಯಕತ್ವದ ಮೇಲಿನ ವಿಶ್ವಾಸವನ್ನು ಪ್ರತಿಬಿಂಬಿಸಿದಂತಾಗಿದೆ.
ಏತನ್ಮಧ್ಯೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅವರು ನೇಮಕಗೊಂಡಿರುವುದನ್ನು ವಿಜಯೇಂದ್ರ ಅವರು ಸ್ವಾಗತಿಸಿದ್ದಾರೆ.
ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಚುನಾಯಿತರಾದ ನಿತಿನ್ ನಬಿನ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ತಮ್ಮ ಸೈದ್ಧಾಂತಿಕ ಬದ್ಧತೆ, ಕ್ರಿಯಾಶೀಲ ನಾಯಕತ್ವ, ಸುದೀರ್ಘ ರಾಜಕೀಯ ಅನುಭವ ಹಾಗೂ ತಲಸ್ಪರ್ಶಿ ಸಂಘಟನಾ ಸಾಮರ್ಥ್ಯ ಪಕ್ಷವನ್ನು ಮತ್ತಷ್ಟು ಉತ್ತುಂಗಕ್ಕೆ ಕೊಂಡೊಯ್ಯಲಿದೆ ಎಂಬ ಅಚಲ ವಿಶ್ವಾಸ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರಿಗೂ ಇದೆ. ತಮ್ಮ ದಕ್ಷ ನಾಯಕತ್ವದಲ್ಲಿ ಸಂಘಟನೆಗೆ ಹೊಸ ವೇಗ, ಕಾರ್ಯಕರ್ತರಿಗೆ ಹೊಸ ಉತ್ಸಾಹ ಮೂಡಿದೆ ಎಂದು ಹೇಳಿದ್ದಾರೆ.
ನಮ್ಮ ಎಲ್ಲ ಹಿರಿಯ ನಾಯಕರ ಬೆಂಬಲದೊಂದಿಗೆ, ದೇಶದ ಏಳಿಗೆಯ ಗುರಿಯೆಡೆಗೆ ಪಕ್ಷವನ್ನು ತಾವು ಸಮರ್ಥವಾಗಿ ಮುನ್ನಡೆಸುವ ವಿಶ್ವಾಸ ನಮ್ಮೆಲ್ಲರಿಗಿದ್ದು, ರಾಜ್ಯದ ಸಮಸ್ತ ಕಾರ್ಯಕರ್ತರ ಪರವಾಗಿ ತಮಗೆ ಹೆಮ್ಮೆಯ ಶುಭಹಾರೈಕೆಗಳು. ತಮ್ಮ ನಾಯಕತ್ವದಲ್ಲಿ ಸಂಘಟನೆಯ ವಿಜಯದ ಪಥವನ್ನು ಮತ್ತಷ್ಟು ವಿಸ್ತರಿಸಲು ನಾವು ಶಕ್ತಿಮೀರಿ ಶ್ರಮಿಸುವ ಭರವಸೆ ನೀಡುತ್ತೇವೆಂದು ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿಯವರು ಮಾತನಾಡಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅವರು ಅವಿರೋದವಾಗಿ ಆಯ್ಕೆಯಾಗಿದ್ದು ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಪಕ್ಷ ಹಾಗೂ ದೇಶದ ಭವಿಷ್ಯದ ದೃಷ್ಟಿಯಿಂದ ಯುವ ನಾಯಕತ್ವದ ಮೇಲೆ ವಿಶ್ವಾಸ ಇಟ್ಟು ಜವಾಬ್ದಾರಿ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಅವರು, ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಹಾಗೂ ನಿರ್ಗಮಿತ ಅಧ್ಯಕ್ಷರಾದ ಜೆಪಿ ನಡ್ಡಾ ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ. ವಿಶ್ವದಲ್ಲಿ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷವನ್ನು ನೂತನ ಅಧ್ಯಕ್ಷರಾದ ನಿತಿನ್ ನಬಿನ್ ಅವರು ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗುತ್ತಾರೆ ಎನ್ನುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ.
ಮಾಜಿ ಸಚಿವ ಎಸ್ ಸುರೇಶ್ ಕುಮಾರ್ ಅವರು ಮಾತನಾಡಿಸ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುತ್ತಿರುವ ನಿತಿನ್ ನಬಿನ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಅವಧಿಯಲ್ಲಿ ಬಿಜೆಪಿಯ ವಿಸ್ತಾರ ಇನ್ನಷ್ಟು ಪ್ರಬಲವಾಗಿ ಆಗಲಿ. ನಮ್ಮ ಪಕ್ಷ ಎಲ್ಲಾ ರೀತಿಯಲ್ಲಿಯೂ #ಸರ್ವಸ್ಪರ್ಶಿ #ಸರ್ವವ್ಯಾಪ್ತಿ ಸಂಘಟನೆ ಆಗಲಿ ಎಂದು ತಿಳಿಸಿದ್ದಾರೆ.
Advertisement