

ಬೆಂಗಳೂರು: ಬಿಡದಿಯಲ್ಲಿ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ) ಯೋಜನೆ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಲು ಸಿದ್ಧನಿದ್ದೇನೆಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾನುವಾರ ಹೇಳಿದ್ದಾರೆ.
ಕನಕಪುರ ಸಮೀಪದ ರಾಮ ಮಂದಿರ ಉದ್ಘಾಟನೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಬಿಡದಿ ಟೌನ್‌ಶಿಪ್ ಬಗ್ಗೆ ಕುಮಾರಸ್ವಾಮಿಯವರೊಂದಿಗೆ ಚರ್ಚೆಗೆ ನಾನು ಸಿದ್ಧ. ದಿನಾಂಕವನ್ನು ಮಾಧ್ಯಮವೇ ನಿಗದಿ ಮಾಡಲಿ. ಅವರು ಮುಖ್ಯಮಂತ್ರಿ ಆಗಿದ್ದಾಗಲೂ ಚರ್ಚೆಗೆ ನಾನು ಸಮ್ಮತಿಸಿದ್ದೆ. ಈಗಲೂ ಅವರನ್ನೇ ಚರ್ಚೆಗೆ ಆಹ್ವಾನಿಸುತ್ತಿದ್ದೇನೆಂದು ಪ್ರತಿ ಸವಾಲು ಹಾಕಿದರು.
ಕುಮಾರಸ್ವಾಮಿ ಚರ್ಚೆಗೆ ಯಾವಾಗ ಸಿದ್ಧರಿರುತ್ತಾರೋ ಆಗ ನಾನು ಸಿದ್ಧ. ಮೂರು ದಿನಗಳ ಮುಂಚಿತವಾಗಿ ತಿಳಿಸಿದರೆ ಸಾಕು, ಚರ್ಚೆಗೆ ಬರಲು ಸಮಯ ಮಾಡಿಕೊಳ್ಳುತ್ತೇನೆ. ಈ ಯೋಜನೆ ರಾಜಕೀಯದ ವಿಷಯವಾಗುತ್ತಿದೆ. ಈ ಯೋಜನೆಯನ್ನು ಆರಂಭಿಸಿದ್ದು ನಾನಲ್ಲ, ಕುಮಾರಸ್ವಾಮಿಯವರೇ ಎಂದು ಹೇಳಿದರು.
ಬಿಡದಿ ಟೌನ್‌ಶಿಪ್ ಯೋಜನೆಗೆ ತಾನು ಅವಕಾಶ ನೀಡುವುದಿಲ್ಲ ಎಂಬ ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ, “ರೈತರಿಗೆ 800 ಚದರ ಅಡಿ ಭೂಮಿ ನೀಡುವುದಾಗಿ ಕುಮಾರಸ್ವಾಮಿಯವರೇ ಭರವಸೆ ನೀಡಿದ್ದರು. ಈಗ ನಾವು ಆ ಯೋಜನೆಯನ್ನು ಮುಂದುವರಿಸುತ್ತಿದ್ದೇವೆ” ಎಂದು ಸ್ಪಷ್ಟಪಡಿಸಿದರು.
“ಕುಮಾರಸ್ವಾಮಿಯಾಗಲೀ ನಾನಾಗಲೀ ಶಾಶ್ವತವಲ್ಲ. ಆದರೆ ನಮ್ಮ ನಿರ್ಣಯಗಳು ಶಾಶ್ವತವಾಗಿರುತ್ತವೆ. ಈ ಯೋಜನೆ ಮುಂದಿನ ತಲೆಮಾರಿಗೆ ಬಹುಮಟ್ಟಿಗೆ ಪ್ರಯೋಜನಕಾರಿಯಾಗಲಿದೆ. ಅವರು ನಮ್ಮನ್ನು ನೆನಪಿಸಿಕೊಳ್ಳುತ್ತಾರೆ. ನನ್ನ ಕ್ಷೇತ್ರದಲ್ಲಿ ರಸ್ತೆಗಳ ಅಗಲೀಕರಣ ಮಾಡಿದ್ದೇವೆ. ಭೂಸ್ವಾಧೀನಕ್ಕೆ ಪ್ರತಿ ಚದರ ಅಡಿಗೆ ರೂ.1,500 ಪರಿಹಾರ ನೀಡಲಾಗಿದೆ” ಎಂದು ಹೇಳಿದರು.
ಭೂಸ್ವಾಧೀನಕ್ಕೆ ಅವಕಾಶ ನೀಡುವುದಿಲ್ಲ: ಕುಮಾರಸ್ವಾಮಿ
ಈ ನಡುವೆ ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಭೈರಮಂಗಲ, ಕಾಂಚುಗನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದ ಕುಮಾರಸ್ವಾಮಿ, “ಬಿಡದಿ ಸುತ್ತಮುತ್ತಲಿನ ಫಲವತ್ತಾದ ಕೃಷಿ ಭೂಮಿಯನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಳ್ಳಲು ನಾವು ಅವಕಾಶ ನೀಡುವುದಿಲ್ಲ. ಒಂದು ಇಂಚಿನ ಭೂಮಿಯನ್ನೂ ಕೊಡಲ್ಲ ಎಂದು ಎಚ್ಚರಿಕೆ ನೀಡಿದರು.
ನನ್ನ ಬಳಿ ಮಹಿಳಾ ರೈತರು ತಮ್ಮ ಭೂಮಿಯನ್ನು ಉಳಿಸಿಕೊಳ್ಳುವಂತೆ ಕಣ್ಣೀರಿಟ್ಟು ಬೇಡಿಕೊಂಡಿದ್ದಾರೆ. ನನ್ನ ಸಹೋದರಿಯರ ಭೂಮಿಯನ್ನು ರಕ್ಷಿಸುವ ಜವಾಬ್ದಾರಿ ನನ್ನದು. ಸರ್ಕಾರಗಳು ಬರುತ್ತವೆ ಹೋಗುತ್ತವೆ, ಆದರೆ ಜನರು ಶಾಶ್ವತ. ಸರ್ಕಾರಗಳು ಜನಾಭಿಪ್ರಾಯಕ್ಕೆ ಮಣಿಯಲೇಬೇಕು. ಇಲ್ಲದಿದ್ದರೆ ಜನರಿಗೆ ಪಾಠ ಕಲಿಸುವುದೂ ಗೊತ್ತಿದೆ ಎಂದು ಹೇಳಿದರು.
Advertisement