

ಬೆಂಗಳೂರು: ಗಣರಾಜ್ಯೋತ್ಸವ ದಿನದಂದು ರಾಜ್ಯಪಾಲರು ರಾಜ್ಯ ಸರ್ಕಾರ ಬರೆದುಕೊಟ್ಟ ಭಾಷಣವನ್ನು ನಿರಾಕರಿಸಿದ್ದೇ ಆದರೆ, ಕೇಂದ್ರ ಸರ್ಕಾರದ ಏಜೆಂಟ್ ಎಂದು ಸಾಬೀತಾಗುತ್ತದೆ ಎಂದು ಸಚಿವ ಎಂಬಿ.ಪಾಟೀಲ್ ಅವರು ಭಾನುವಾರ ಹೇಳಿದ್ದಾರೆ.
ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಧಾನಸಭೆಯ ಜಂಟಿ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಓದದಿರುವ ಮೂಲಕ, ರಾಜ್ಯಪಾಲರು ಕೇಂದ್ರದ ಆಜ್ಞೆಯ ಮೇರೆಗೆ ಕಾರ್ಯನಿರ್ವಹಿಸುತ್ತಿರುವ ಅನುಮಾನಗಳು ಮೂಡಿವೆ. ಇದೀಗ ಗಣರಾಜ್ಯೋತ್ಸವ ದಿನದಂದೂ ಅದೇ ರೀತಿ ನಡೆದುಕೊಂಡಿದ್ದೇ ಆದರೆ, ಕೇಂದ್ರ ಸರ್ಕಾರದ ಏಜೆಂಟ್ ಎಂಬುದು ಸಾಬೀತಾಗುತ್ತದೆ ಎಂದು ಹೇಳಿದ್ದಾರೆ.
ರಾಜ್ಯವನ್ನು ಅಧಿಕೃತವಾಗಿ ಪ್ರತಿನಿಧಿಸುತ್ತಿರುವುದರಿಂದ ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಓದುವುದು ರಾಜ್ಯಪಾಲರ ಕರ್ತವ್ಯ. ಇದೇ ರಾಜ್ಯಪಾಲರು ಈ ಹಿಂದೆ ಸರ್ಕಾರದ ಭಾಷಣವನ್ನು ಓದಿದ್ದಾರೆ, ಆದರೆ ಈಗೇಕೆ ನಿರಾಕರಿಸಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಮನ್ರೇಗಾ ಯೋಜನೆಯನ್ನು ಮರುನಾಮಕರಣ ಮಾಡುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಟೀಕಿಸುವ ವಿಷಯವಿರುವುದರಿಂದ ರಾಜ್ಯಪಾಲರು ಭಾಷಣವನ್ನು ಓದಲು ನಿರಾಕರಿಸಿದ್ದಾರೆ. ಯೋಜನೆಯ ಮರುನಾಮಕರಣದ ವಿರುದ್ಧ ರಾಜ್ಯ ಸರ್ಕಾರ ಧ್ವನಿ ಎತ್ತುತ್ತಿದೆ. ಯೋಜನೆಯಲ್ಲಿ ಮಾಡಲಾದ ರಚನಾತ್ಮಕ ಬದಲಾವಣೆಗಳು ಗ್ರಾಮೀಣ ಜನರ ಉದ್ಯೋಗಾವಕಾಶಗಳನ್ನು ಕಸಿದುಕೊಳ್ಳುತ್ತವೆ. ರಾಜ್ಯ ಸರ್ಕಾರ ಕೇಂದ್ರದ ಕ್ರಮವನ್ನು ವಿರೋಧಿಸುತ್ತದೆ. ರಾಜ್ಯಪಾಲರು ಸರ್ಕಾರದ ಭಾಷಣವನ್ನು ಓದಬೇಕಾಗಿತ್ತು, ಅದು ಅವರ ಸಾಂವಿಧಾನಿಕ ಕರ್ತವ್ಯವಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯಪಾಲರು ರಾಜ್ಯ ಸರ್ಕಾರದ ಭಾಷಣವನ್ನು ಓದಲು ನಿರಾಕರಿಸುತ್ತಿರುವ ಕೆಟ್ಟ ನಿದರ್ಶನ ಹೊರಹೊಮ್ಮಿದೆ. ಇದನ್ನು ಮೊದಲು ಪ್ರಾರಂಭಿಸಿದ್ದು ತಮಿಳುನಾಡು ರಾಜ್ಯಪಾಲರು ಮತ್ತು ಈಗ ಕರ್ನಾಟಕ ರಾಜ್ಯಪಾಲರು ಅದನ್ನೇ ಅನುಸರಿಸಿದ್ದಾರೆ. ಬಿಜೆಪಿ ಆಡಳಿತವಿಲ್ಲದ ರಾಜ್ಯಗಳ ರಾಜ್ಯಪಾಲರು ಇಂತಹ ಸಂವಿಧಾನಬಾಹಿರ ಕ್ರಮಗಳನ್ನು ಕೈಗೊಂಡಿದ್ದಾರೆಂದು ಕಿಡಿಕಾರಿದರು.
Advertisement