

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ನಾಯಕ ರಾಮ್ ಮಾಧವ್ ಅವರು ಪಾಕಿಸ್ತಾನದ ಅಧಿಕಾರಿಗಳೊಂದಿಗೆ ನಾಲ್ಕು ರಹಸ್ಯ ಸಭೆಗಳನ್ನು ನಡೆಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಆರೋಪಿಸಿದರು.
ಪಕ್ಷದ ಪ್ರಚಾರ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಹರಿಪ್ರಸಾದ್, ಮುಂಬರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಚುನಾವಣೆಯ ಹೊಣೆಯನ್ನು ಬಿಜೆಪಿ ರಾಮ್ ಮಾಧವ್ ಅವರಿಗೆ ನೀಡಿರುವುದನ್ನು ಉಲ್ಲೇಖಿಸಿದರು.
ಜಿಬಿಎ ಚುನಾವಣೆಯ ಜವಾಬ್ದಾರಿ ಹೊಂದಿರುವ ರಾಮ್ ಮಾಧವ್ ಅವರು ಕೊಲಂಬೊ ಹಾಗೂ ಲಂಡನ್ ಗಳಲ್ಲಿ ಪಾಕಿಸ್ತಾನದ ಪ್ರತಿನಿಧಿಗಳೊಂದಿಗೆ ನಾಲ್ಕು ಸಭೆಗಳನ್ನು ನಡೆಸಿದ್ದಾರೆ. ಹಿಲ್ಟನ್ ಹೊಟೇಲ್ ನಲ್ಲಿ ಪಾಕಿಸ್ತಾನದ ಉನ್ನತ ಅಧಿಕಾರಿಗಳು, ಅಪಾಯಕಾರಿ ಐಎಸ್‌ಐನ ಮಾಜಿ ಮೇಜರ್ ಜನರಲ್ ಸೇರಿದಂತೆ ಹಲವರನ್ನು ಭೇಟಿಯಾಗಿದ್ದಾರೆ. ಅವರು ನಾಲ್ಕು ರಹಸ್ಯ ಸಭೆಗಳನ್ನು ನಡೆಸಿದ್ದಾರೆ ಎಂದು ಹರಿಪ್ರಸಾದ್ ಮಾಧ್ಯಮ ವರದಿಯನ್ನು ಉಲ್ಲೇಖಿಸಿ ಹೇಳಿದರು.
ಆದರೆ, ರಾಮ್ ಮಾಧವ್ ಈ ಆರೋಪವನ್ನು ಈಗಾಗಲೇ ತಳ್ಳಿಹಾಕಿದ್ದಾರೆ. ತಾವು ಪಾಕಿಸ್ತಾನದೊಂದಿಗೆ ಯಾವುದೇ 'ಟ್ರ್ಯಾಕ್-2' ಸಂವಾದದಲ್ಲಿ ಭಾಗವಹಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಜೂನ್ 27ರಂದು ಎಕ್ಸ್‌ನಲ್ಲಿ ಮಾಡಿದ್ದ ಪೋಸ್ಟ್‌ನಲ್ಲಿ, ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಸ್ಟ್ರಾಟೆಜಿಕ್ ಸ್ಟಡೀಸ್ (IISS) ಆಯೋಜಿಸಿದ್ದ ದಕ್ಷಿಣ ಏಷ್ಯಾ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೊಲಂಬೊಗೆ ತೆರಳಿದ್ದೆ ಎಂದು ಹೇಳಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾರತ, ಶ್ರೀಲಂಕಾ, ಅಮೆರಿಕ, ಯುನೈಟೆಡ್ ಕಿಂಗ್‌ಡಮ್, ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದ ವಿದ್ವಾಂಸರು ಪಾಲ್ಗೊಂಡಿದ್ದರು ಎಂದೂ, ಇಷ್ಟು ದೇಶಗಳು ಭಾಗವಹಿಸುವ ಕಾರ್ಯಕ್ರಮವನ್ನು ಟ್ರ್ಯಾಕ್-2 ಸಂವಾದ ಎಂದು ಕರೆಯಲು ಸಾಧ್ಯವಿಲ್ಲ. ನಾನು ಎರಡು ದಿನಗಳ ಸಂವಾದದಲ್ಲಿ ಪಾಲ್ಗೊಂಡಿಲ್ಲ. ಒಂದು ಅಧಿವೇಶನದಲ್ಲಿ ಮಾತನಾಡಲು ಆಹ್ವಾನಿಸಲಾಗಿತ್ತು. ಮಾತನಾಡಿ ಅಲ್ಲಿಂದ ಹೊರಟೆ ಎಂದು ಅವರು ಸ್ಪಷ್ಟಪಡಿಸಿದ್ದರು.
ಆದಾಗ್ಯೂ, ಹರಿಪ್ರಸಾದ್ ಅವರು ಈ ವಿಚಾರವನ್ನು ಆರ್‌ಎಸ್‌ಎಸ್ ಮುಖ್ಯಸ್ಥ ಡಾ. ಮೋಹನ್ ಭಾಗವತ್ ಇತ್ತೀಚೆಗೆ ಪಾಕಿಸ್ತಾನದೊಂದಿಗೆ ಸಂವಾದಕ್ಕೆ ಬೆಂಬಲ ಸೂಚಿಸಿದ್ದ ಹೇಳಿಕೆಗೆ ಸಂಬಂಧಿಸಿ ಪ್ರಸ್ತಾಪಿಸಿದರು.
ಆಪರೇಷನ್ ಸಿಂದೂರ್ ನಡೆದ ಎರಡು ತಿಂಗಳ ಬಳಿಕ ರಾಮ್ ಮಾಧವ್ ಲಂಡನ್‌ನಲ್ಲಿ ಪಾಕಿಸ್ತಾನದ ಪ್ರತಿನಿಧಿಗಳನ್ನು ಭೇಟಿಯಾಗಿದ್ದಾರೆ ಎಂದು ಹರಿಪ್ರಸಾದ್ ಹೇಳಿದರು.
ಡಾ. ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿ ಅಧಿಕಾರದಲ್ಲಿದ್ದಾಗ ನಮ್ಮ ನಿಲುವು ಸ್ಪಷ್ಟವಾಗಿತ್ತು. ಪಾಕಿಸ್ತಾನ ಭಯೋತ್ಪಾದನೆಗೆ ಬೆಂಬಲ ನೀಡುವವರೆಗೆ ಅದರೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ನಾವು ಹೇಳಿದ್ದೆವು ಎಂದರು.
ರಾಮ್ ಮಾಧವ್ ಅವರಿಗೆ ಈ ಸಭೆಗಳನ್ನು ನಡೆಸಲು ಯಾರಿಂದ ಅಧಿಕಾರ ದೊರೆತಿತ್ತು ಎಂಬುದನ್ನು ಸ್ಪಷ್ಟಪಡಿಸುವಂತೆ ಹರಿಪ್ರಸಾದ್ ಆಗ್ರಹಿಸಿದರು.
ಅವರು ವಿದೇಶಾಂಗ ಸಚಿವರಲ್ಲ, ಶಾಸಕರಲ್ಲ ಅಥವಾ ಸಂಸದರಲ್ಲ. ಹಾಗಿದ್ದರೆ ಆರ್‌ಎಸ್‌ಎಸ್ ವಿದೇಶಾಂಗ ನೀತಿ ಕುರಿತ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳುತ್ತಿದೆ ಎಂದು ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು 2015ರಲ್ಲಿ ಪಾಕಿಸ್ತಾನಕ್ಕೆ ಅನಿರೀಕ್ಷಿತ ಭೇಟಿ ನೀಡಿದ್ದನ್ನು ಹಾಗೂ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರು 2005ರಲ್ಲಿ ಪಾಕಿಸ್ತಾನದ ಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಅವರನ್ನು ಪ್ರಶಂಸಿಸಿದ್ದನ್ನು ಹರಿಪ್ರಸಾದ್ ನೆನಪಿಸಿದರು.
ಚುನಾವಣೆ ಬಂದಾಗ ಬಿಜೆಪಿ ಪಾಕಿಸ್ತಾನ, ಚಿಕನ್, ಮಟನ್, ಮೀನು, ಮಂಗಳಸೂತ್ರ, ಹಲಾಲ್, ಹಿಜಾಬ್ ಹಾಗೂ ಅಜಾನ್ ಬಗ್ಗೆ ಮಾತನಾಡುತ್ತದೆ. ಸಾಮಾನ್ಯ ಕಾರ್ಮಿಕ ಅಥವಾ ರೈತರ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂದು ಹರಿಪ್ರಸಾದ್ ಟೀಕಿಸಿದರು.