

ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸುವ ಯಾವ ನೈತಿಕತೆ ‘ಬೇಬಿ ಯಡಿಯೂರಪ್ಪರಿಗೆ’ ಇದೆ ಎಂದು ರಾಮಮಂದಿರ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರಿಗೆ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಕೇಳಿದ್ದಾರೆ,
ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಹರಿಪ್ರಸಾದ್ , “ಚೆಕ್ ಮೂಲಕ ಲಂಚ ಪಡೆದ ಪ್ರಕರಣದಲ್ಲಿ ಜೈಲಿಗೆ ಹೋದ ದೇಶದ ಮೊದಲ ಮುಖ್ಯಮಂತ್ರಿಯ ಪುತ್ರ ವಿಜಯೇಂದ್ರ ಯಡಿಯೂರಪ್ಪ ಇಂದು ಕಾಂಗ್ರೆಸ್‌ಗೆ ನೈತಿಕತೆಯ ಪಾಠ ಹೇಳುತ್ತಾರೆ. ಭ್ರಷ್ಟಾಚಾರದ ಬಗ್ಗೆ ತಮ್ಮದೇ ಪಕ್ಷದ ನಾಯಕರಿಂದ ಗಂಭೀರ ಆರೋಪಗಳಿಗೆ ಗುರಿಯಾಗಿರುವ ಬಿ ಎಸ್ ಯಡಿಯೂರಪ್ಪ, ಈಗಲೂ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪಿ. ಈ ರೀತಿ ಅಸಹಾಯಕ ಅಪ್ರಾಪ್ತ ಹುಡುಗಿಯನ್ನು ಲೈಂಗಿಕವಾಗಿ ಪೀಡಿಸಿದ ಮನೆಯ ಹುಡುಗ ಪ್ರಭು ಶ್ರೀರಾಮಚಂದ್ರನ ಹಣ ಕಳವು ಆರೋಪಿಗಳ ಪರ ವಹಿಸುವುದರಲ್ಲಿ ವಿಶೇಷವೇನೂ ಕಾಣುವುದಿಲ್ಲ” ಎಂದು ಟೀಕಿಸಿದ್ದಾರೆ.
“ನ್ಯಾಷನಲ್ ಹೆರಾಲ್ಡ್ ಮೇಲಿನ ಕೇಂದ್ರದ ದುರುದ್ದೇಶದ ಆರೋಪಗಳಿಗೆ ನ್ಯಾಯಾಲಯವೇ ಛೀಮಾರಿ ಹಾಕಿದೆ. ಅಕ್ರಮವಾಗಿದ್ದರೆ ಹನ್ನೆರಡು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವವರು ಕ್ರಮ ತೆಗೆದುಕೊಳ್ಳುವ ಧೈರ್ಯ ಯಾಕಿಲ್ಲ. ನ್ಯಾಷನಲ್ ಹೆರಾಲ್ಡ್ ಲಾಭ ಮಾಡುವ ಸಂಸ್ಥೆಯಲ್ಲ, ಜನಸೇವೆ ಮಾಡುವ ಟ್ರಸ್ಟ್. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಬಗ್ಗೆ ಮಾತಾನಾಡುವ ನೈತಿಕತೆ ಇದೆಯಾ ಈ ಬೇಬಿ ಯಡಿಯೂರಪ್ಪರಿಗೆ ಎಂದು ಪ್ರಶ್ನಿಸಿದ್ದಾರೆ.
ಅಯೋಧ್ಯೆಯಲ್ಲಿ ಭ್ರಷ್ಟಾಚಾರ ನಡೆದಿರುವುದು, ಜನ ಸಾಮಾನ್ಯರ ದೇಣಿಗೆಯನ್ನು ನುಂಗಿ ನೀರು ಕುಡಿದಿದ್ದು, ಯಾವುದೇ ರಸೀದಿ ಇಲ್ಲದೆ ಕೋಟ್ಯಾಂತರ ಹಣ ಲೂಟಿ ಹೊಡೆದಿದ್ದಾರೆ ಎಂಬುದನ್ನು ಇಡೀ ದೇಶ ನೋಡಿದೆ. ಬಿಜೆಪಿ ಪಕ್ಷದ ಸರ್ಕಾರವೇ ಇರುವ ಉತ್ತರ ಪ್ರದೇಶ ಸರ್ಕಾರ ಈ ಸಂಬಂಧ ಎಸ್ಐಟಿ ತನಿಖೆ ನಡೆಸುತ್ತಿದೆ. ಹೀಗಿರುವಾಗ ರಾಮನ ಹೆಸರಿನಲ್ಲಿ ನಡೆದ ಭ್ರಷ್ಟಾಚಾರವನ್ನು ನಾವು ಪ್ರಶ್ನಿಸಿದಾಗ ಭ್ರಷ್ಟರಿಗಲ್ಲದೇ ಇನ್ನಾರಿಗೆ ಕಸಿವಿಸಿಯಾಗಲು ಸಾಧ್ಯ” ಎಂದು ಟೀಕಿಸಿದ್ದಾರೆ.
“ಬಿ ವೈ ವಿಜಯೇಂದ್ರ ಇನ್ನೂ ರಾಜಕೀಯದಲ್ಲಿ ಎಳಸು. ರಾಮಮಂದಿರ ಹಗರಣವನ್ನು ಸಿಬಿಐಗೆ ವಹಿಸಬೇಕು ಎಂದರೆ ಸಿಬಿಐಯನ್ನು ನಂಬುತ್ತೇವೆ ಎಂದಲ್ಲ. ಸಿಬಿಐ ತನಿಖೆಗಾಗಿ ಒತ್ತಾಯಿಸುವುದರ ಉದ್ದೇಶ, ಪ್ರಕರಣವನ್ನು ರಾಜ್ಯ ಸರ್ಕಾರದ ಅಥವಾ ಸ್ಥಳೀಯ ಪೊಲೀಸರ ಪ್ರಭಾವದಿಂದ ದೂರವಿಟ್ಟು ಸ್ವತಂತ್ರ ಸಂಸ್ಥೆಯ ಮೂಲಕ ತನಿಖೆ ನಡೆಸುವಂತೆ ಆಗ್ರಹಿಸುವುದು. ಹಾಗಂತ, ಬಿಜೆಪಿ ಕಾಲದಲ್ಲಿ ಸಿಬಿಐ ಸೇರಿದಂತೆ ಯಾವುದೇ ತನಿಖಾ ಸಂಸ್ಥೆಯ ಕಾರ್ಯವೈಖರಿ, ಅದರ ತನಿಖೆಯ ನಿಷ್ಪಕ್ಷಪಾತತೆ ಮತ್ತು ಅಂತಿಮ ವರದಿಯನ್ನು ಪ್ರಶ್ನಿಸುವ ಅಥವಾ ವಿಮರ್ಶಿಸುವ ಹಕ್ಕು ನಮಗೆ ಇರುತ್ತದೆ” ಎಂದು ಹೇಳಿದ್ದಾರೆ.