ಪಾದಚಾರಿ ಒತ್ತುವರಿ ತೆರವು ಕಾರ್ಯಾಚರಣೆ: ಶಿವಾಜಿನಗರಕ್ಕೊಂದು, ಮಲ್ಲೇಶ್ವರಂಗೊಂದು ಕಾನೂನಾ?

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ಮಾತಿಗೆ ಶಿವಾಜಿನಗರದಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ. ಕಾಂಗ್ರೆಸ್ ಶಾಸಕರೇ ಇರುವ ಶಿವಾಜಿನಗರದಲ್ಲಿ ಎಂದಿನಂತೆಯೇ ಫುಟ್‌ಪಾತ್‌ನಲ್ಲಿ ಎಗ್ಗಿಲ್ಲದೆ ಬೀದಿ ವ್ಯಾಪಾರ ನಡೆಯುತ್ತಿದೆ.
file photo
ಸಂಗ್ರಹ ಚಿತ್ರ
Updated on: 

ಬೆಂಗಳೂರು: ಶಿವಾಜಿನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಮತ್ತೆ ವಿವಾದದ ಕೇಂದ್ರಬಿಂದುವಾಗಿದ್ದು, ಕಾರ್ಯಾಚರಣೆ ಕೇವಲ ಕೆಲವು ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಆರೋಪಿಸಿರುವ ಬಿಜೆಪಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

ಮಲ್ಲೇಶ್ವರಂನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಸರ್ಕಾರ, ಶಿವಾಜಿನಗರದಲ್ಲಿ ಮಾತ್ರ ಮೃದು ಧೋರಣೆ ಅನುಸರಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಜ್ಯ ಬಿಜೆಪಿ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ಮಾತಿಗೆ ಶಿವಾಜಿನಗರದಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ. ಕಾಂಗ್ರೆಸ್ ಶಾಸಕರೇ ಇರುವ ಶಿವಾಜಿನಗರದಲ್ಲಿ ಎಂದಿನಂತೆಯೇ ಫುಟ್‌ಪಾತ್‌ನಲ್ಲಿ ಎಗ್ಗಿಲ್ಲದೆ ಬೀದಿ ವ್ಯಾಪಾರ ನಡೆಯುತ್ತಿದೆ ಎಂದು ಆರೋಪಿಸಿದೆ.

ಮುಂದುವರಿದು, ಮಲ್ಲೇಶ್ವರಕ್ಕೆ ಒಂದು ಕಾನೂನು, ಶಿವಾಜಿನಗರಕ್ಕೆ ಇನ್ನೊಂದು ಕಾನೂನಾ? ಶಿವಾಜಿನಗರದಲ್ಲಿ ಫುಟ್‌ಪಾತ್ ತೆರವುಗೊಳಿಸುವುದಕ್ಕೆ ನಿಮಗೆ ಧೈರ್ಯವಿಲ್ಲವೇ? ಅಥವಾ ವೋಟ್‌ಬ್ಯಾಂಕ್ ರಾಜಕಾರಣದ ಭಯವೇ? ಎಂದು ಪ್ರಶ್ನಿಸಿದೆ.

ಇದೇ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೂಡ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ಫುಟ್‌ಪಾತ್ ತೆರವು ಕಾರ್ಯಾಚರಣೆ ಕೇವಲ ಪ್ರಚಾರಕ್ಕೆ ಸೀಮಿತವಾಗಿದೆ ಎಂದು ಟೀಕಿಸಿದ್ದಾರೆ.

file photo
Watch | GBA ಅಧಿಕಾರಿಗಳ ಮೇಲೆ ದಾಳಿಗೆ ಹಣ ಸುಲಿಗೆ ಮಾಡುವವರು ಕಾರಣ: ಕೃಷ್ಣ ಬೈರೇಗೌಡ

ಎರಡು ದಿನಗಳ ಹಿಂದೆ ತೆರವು ಕಾರ್ಯಾಚರಣೆ ವೇಳೆ ಅಧಿಕಾರಿಗಳ ಮೇಲೆ ಹಲ್ಲೆ ನಡೆಯಿತು, ಎಫ್‌ಐಆರ್ ಕೂಡ ದಾಖಲಾಗಿದೆ. ಆದರೆ, ನಿಮ್ಮ ಜೋರು ಮಾತುಗಳು ಮತ್ತು ಬಡಾಯಿ ಕೇವಲ ಪ್ರಚಾರಕ್ಕಷ್ಟೇ ಸೀಮಿತವಾಗಿದೆ" ಎಂದು ಹೇಳಿದ್ದಾರೆ.

ಅಲ್ಲದೆ, ಮತ್ತೆ ಫುಟ್‌ಪಾತ್‌ನಲ್ಲಿ ವ್ಯಾಪಾರ ಯಥಾಸ್ಥಿತಿಯಲ್ಲಿದೆ. ನಿಮ್ಮ ಕಾರ್ಯಾಚರಣೆ ಶಿವಾಜಿನಗರದಲ್ಲಿ ನಡೆಯುವುದಿಲ್ಲ ಎಂಬುದಕ್ಕೆ ಇದೇ ಸಾಕ್ಷಿ ಎಂದು ಆರೋಪಿಸಿದ್ದಾರೆ.

ಫುಟ್‌ಪಾತ್ ತೆರವು ಕಾರ್ಯಾಚರಣೆಗೆ ಸ್ಪಷ್ಟ ನಿಯಮ ರೂಪಿಸಿ, ಬೀದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

ಇತ್ತೀಚೆಗೆ ಶಿವಾಜಿನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಜಿಬಿಎ ಅಧಿಕಾರಿಗಳ ಮೇಲೆ ಹಲ್ಲೆ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಬೆಳವಣಿಗೆಯ ನಡುವೆ ಫುಟ್‌ಪಾತ್ ತೆರವು ವಿಚಾರ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com