ಸ್ವಂತ ವರ್ಚಸ್ಸಿನಿಂದ ಗೆದ್ದಿದ್ದೇವೆಂದು ಬೀಗುವವರು, ನೆಹರೂ ಕುಟುಂಬದ ಕುಡಿಯ ಎದುರು ಕೈ ಕಟ್ಟಿ ನಿಂತಿದ್ದಾರೆ..!

ನಮ್ಮ ಸಿಎಂ ಡಿಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಕಳೆದ ಎರಡು ತಿಂಗಳಿಂದ ಸಚಿವರ ಪಟ್ಟಿ ಹಿಡಿದುಕೊಂಡು ನಿಮ್ಮ ಮನೆ ಬಾಗಿಲಿಗೆ ಎಡತಾಕುತ್ತಿದ್ದಾರೆ. ಅವರನ್ನು ನಾಳೆ ಬಾ ನಾಳೆ ಬಾ ಅಂತ ಕಳುಹಿಸುತ್ತಿದ್ದೀರಾ. ಅವರು ಅಂಧ ಭಕ್ತರಾ ಅಥವಾ 3 ಈಡಿಯಟ್‌ಗಳಾ?
Kharge, Rahul, siddu and DK Shivakumar
ಖರ್ಗೆ, ರಾಹುಲ್ ಜೊತೆಗೆ ಡಿಕೆ ಶಿವಕುಮಾರ್, ಸಿದ್ದರಾಮಯ್ಯ
Updated on

ಬೆಂಗಳೂರು: ಇವರೆಲ್ಲ ಎಂಥೆಂಥ ನಾಯಕರು, ಅಪಾರ ಜನ ಬೆಂಬಲವಿದೆ ಎಂದು ಹೇಳಿಕೊಂಡು ಓಡಾಡುವವರು, ಸ್ವಂತ ವರ್ಚಸ್ಸಿನಿಂದ ಗೆದ್ದಿದ್ದೇವೆ ಎಂದು ಹೆಮ್ಮೆಯಿಂದ ಬೀಗುವವರು, ನೆಹರೂ ಕುಟುಂಬದ ಕುಡಿಯ ಎದುರು ಕೈ ಕಟ್ಟಿಕೊಂಡು ನಿಂತಿದ್ದಾರೆಂದು ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

ಸಚಿವ ಸಂಪುಟ ವಿಸ್ತರಣೆಗೆ ಅನುಮತಿ ಪಡೆಯಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ರಾಜ್ಯ ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ದಿನಗಟ್ಟಲೆ ಕಾಯುವಂತಾಗಿದ್ದು, ಇದು ರಾಜ್ಯದ ನಾಯಕರಿಗೆ ಮಾಡುತ್ತಿರುವ ಅವಮಾನ ಎಂದು ಬಿಜೆಪಿ ಆರೋಪಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ನಮ್ಮ ರಾಜ್ಯದ ಜನರನ್ನೇನು ಈಡಿಯಟ್‌ಗಳು ಅಂದ್ಕೊಂಡಿದ್ದೀರಾ ರಾಹುಲ್ ಗಾಂಧಿಯವರೇ? ನಮ್ಮ ಮುಖ್ಯಮಂತ್ರಿ ಡಿಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಕಳೆದ ಎರಡು ತಿಂಗಳಿಂದ ಸಚಿವರ ಪಟ್ಟಿ ಹಿಡಿದುಕೊಂಡು ನಿಮ್ಮ ಮನೆ ಬಾಗಿಲಿಗೆ ಎಡತಾಕುತ್ತಿದ್ದಾರೆ. ಅವರನ್ನು ನಾಳೆ ಬಾ ನಾಳೆ ಬಾ ಅಂತ ಕಳುಹಿಸುತ್ತಿದ್ದೀರಾ. ಅವರು ಅಂಧ ಭಕ್ತರಾ ಅಥವಾ 3 ಈಡಿಯಟ್‌ಗಳಾ? ಎಂದು ವ್ಯಂಗ್ಯವಾಡಿದ್ದಾರೆ.

ಹೀಗೆಲ್ಲ ಅವರನ್ನು ನಿಮ್ಮ ಮನೆ ಬಾಗಿಲು ಕಾಯಿಸಿದರೆ ರಾಜ್ಯದ ಜನತೆ ಏನಂದುಕೊಳ್ಳಬಹುದು!.ರಾಜ್ಯದ ಜನರು ಇವರನ್ನು ಆರಿಸಿ ಕಳುಹಿಸಿದ್ದು, ರಾಜ್ಯದ ಜನರ ಮನೆ ಬಾಗಿಲು ಕಾಯೋದಕ್ಕೋ ಅಥವಾ ರಾಹುಲ್ ಗಾಂಧಿ ಮನೆ ಬಾಗಿಲು ಕಾಯೋದಕ್ಕೋ? ನಮ್ಮ ರಾಜ್ಯದ ಅಹಿಂದ, ಹಿಂದುಳಿದ ಸಮುದಾಯ ಅಷ್ಟೇ ಅಲ್ಲ... ರಾಜ್ಯದ ಎಲ್ಲ ಸಮುದಾಯಕ್ಕೂ ಮಾಡುತ್ತಿರುವ ಅವಮಾನ ಇದು.

ಇವರೆಲ್ಲ ಎಂಥೆಂಥ ನಾಯಕರು, ಅಪಾರ ಜನ ಬೆಂಬಲವಿದೆ ಎಂದು ಹೇಳಿಕೊಂಡು ಓಡಾಡುವವರು, ಸ್ವಂತ ವರ್ಚಸ್ಸಿನಿಂದ ಗೆದ್ದಿದ್ದೇವೆ ಎಂದು ಹೆಮ್ಮೆಯಿಂದ ಬೀಗುವವರು, ಅಲ್ಲಿ ನೋಡಿದರೆ, ನೆಹರೂ ಕುಟುಂಬದ ಕುಡಿಯ ಎದುರು ಕೈ ಕಟ್ಟಿಕೊಂಡು, ದೇಹ ಮುದ್ದೆ ಮಾಡಿಕೊಂಡು, ಮುಖದಲ್ಲಿ ಕೃತಕ ನಗು ಹೊತ್ತುಕೊಂಡು, ಕೈಯಲ್ಲೊಂದು ಪಟ್ಟಿ ಹಿಡಿದು ನಿಂತಿದ್ದಾರೆಂದು ಟೀಕಿಸಿದ್ದಾರೆ.

Kharge, Rahul, siddu and DK Shivakumar
ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್: ಸೋಮವಾರ ಸಂಜೆ ಪ್ರಮಾಣವಚನ ಸಾಧ್ಯತೆ, 18 ಸಚಿವರ ಸೇರ್ಪಡೆ ನಿರೀಕ್ಷೆ..!

ನಮ್ಮ ರಾಜ್ಯದ ಪ್ರಥಮ ಪ್ರಜೆ ಹೀಗೆ ಯಾರದ್ದೋ ಮನೆ ಬಾಗಿಲು ಕಾಯುವುದನ್ನು ನೋಡುವುದೇ ಬೇಸರದ ಸಂಗತಿ. ಇಲ್ಲಿ ನೋಡಿದರೆ, ಸಚಿವರಿಗಾಗಿ ವಿಧಾನಸೌಧದ ಕೋಣೆಗಳು ಕಾಯುತ್ತಿವೆ. ಆದರೆ, ಸಚಿವ ಆಕಾಂಕ್ಷಿಗಳು ನಿಮ್ಮ ಮನೆ ಬಾಗಿಲು ಕಾಯುತ್ತಿದ್ದಾರೆ. ಸಚಿವರ ಪಟ್ಟಿಯಲ್ಲಿರುವ ಒಂದೊಂದು ಹೆಸರಿನ ಮುಂದೆಯೂ ಟಿಕ್ ಹಾಕುವುದಕ್ಕೆ ಖಾಲಿ ಬಿಟ್ಟ ಜಾಗಕ್ಕೇ ಬೇಸರ ಬಂದಿದೆಯೇನೋ. ನಮ್ಮ ರಾಜ್ಯದ ಮುಖ್ಯಮಂತ್ರಿಗಳ ಕೈಯಲ್ಲಿರುವ ಪಟ್ಟಿಯಲ್ಲಿರುವ ಸಂಖ್ಯೆಗಿಂತ ಹೆಚ್ಚು ಬಾರಿ ಮುಖ್ಯಮಂತ್ರಿಗಳು ದೆಹಲಿಗೆ ವಿಮಾನ ಹತ್ತಿರಬಹುದು. ಇಡೀ ರಾಜ್ಯದ ಜನರು ಸಚಿವರ ಮೈಕ್ ಆನ್ ಆಗುವುದನ್ನೇ ಕಾಯುತ್ತಿದ್ದಾರೆ. ಅಲ್ಲಿ ನೋಡಿದರೆ, ದೆಹಲಿಯಲ್ಲಿ ಮೈಕ್ ಆನ್ ಮಾಡಿಕೊಂಡ ರಾಹುಲ್ ಗಾಂಧಿ ಮೈಕ್ ಆಫ್ ಆಗಿದೆ ಅನ್ನುತ್ತಿದ್ದಾರೆಂದು ವ್ಯಂಗ್ಯವಾಡಿದ್ದಾರೆ.

ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಮಾತನಾಡಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು "ರಬ್ಬರ್ ಸ್ಟ್ಯಾಂಪ್ ಮುಖ್ಯಮಂತ್ರಿ" ಎಂದು ಟೀಕಿಸಿದ್ದಾರೆ.

ರಾಜ್ಯದಲ್ಲಿ ಬರ ಪರಿಸ್ಥಿತಿ ಹಾಗೂ ಕಾವೇರಿ ನೀರಿನ ಬಿಕ್ಕಟ್ಟು ಗಂಭೀರವಾಗಿದ್ದರೂ ಪ್ರಮುಖ ಇಲಾಖೆಗಳಿಗೆ ಇನ್ನೂ ಸಚಿವರ ನೇಮಕವಾಗದೇ ಆಡಳಿತ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಂತಾಗಿದೆ ಎಂದು ಆರೋಪಿಸಿದ್ದಾರೆ.

ಕರ್ನಾಟಕ ಕಂಡ ಅತ್ಯಂತ ದುರ್ಬಲ ಮತ್ತು ಅಸಹಾಯಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್. ಪ್ರಮುಖ ಇಲಾಖೆಗಳು ಸಚಿವರಿಲ್ಲದೆ ಕಾರ್ಯನಿರ್ವಹಿಸುತ್ತಿದ್ದು, ಜನರು ಬರ ಹಾಗೂ ಕಾವೇರಿ ಸಮಸ್ಯೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆಂದು ಹೇಳಿದ್ದಾರೆ.

ಇದೇ ವೇಳೆ ರಾಹುಲ್ ಗಾಂಧಿ ಅವರನ್ನು "ಅಸಮರ್ಥ ನಾಯಕ" ಎಂದು ಟೀಕಿಸಿದ ಅಶೋಕ್ ಅವರು, ಜನರ ಕಲ್ಯಾಣಕ್ಕಿಂತ ರಾಜಕೀಯ ಆಟವೇ ಅವರಿಗೆ ಮುಖ್ಯವಾಗಿದೆ ಎಂದು ಆರೋಪಿಸಿದರು. ಸಚಿವ ಸ್ಥಾನ ಆಕಾಂಕ್ಷಿಗಳಾದ 40ರಿಂದ 45 ಮಂದಿ ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಿವಾಸಗಳ ಮುಂದೆ ಹಲವು ದಿನಗಳಿಂದ ಕಾಯುವಂತಾಗಿದೆ. ಇದು ರಾಜ್ಯದ ನಾಯಕರಿಗೆ ಮಾಡಿರುವ ಬಹಿರಂಗ ಅವಮಾನ ಎಂದು ಹೇಳಿದರು.

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಸುಮಾರು ಎರಡು ತಿಂಗಳು ಕಳೆದರೂ ಸಚಿವ ಸಂಪುಟ ವಿಸ್ತರಣೆಗೆ ಇನ್ನೂ ಹೈಕಮಾಂಡ್ ಅನುಮತಿ ಪಡೆಯಲು ದೆಹಲಿಯಲ್ಲಿ ಬಾಗಿಲು ಕಾಯಬೇಕಾಗಿದೆ. ಇದು ಏಳು ಕೋಟಿ ಕನ್ನಡಿಗರಿಗೆ ಮಾಡಿದ ಅವಮಾನ. ಪಕ್ಷದ ಹೈಕಮಾಂಡ್ ಇಚ್ಛೆಗಾಗಿ ರಾಜ್ಯದ ಆಡಳಿತ ಹಾಗೂ ಅಭಿವೃದ್ಧಿಯನ್ನು ಬಲಿಕೊಡುವುದನ್ನು ಕನ್ನಡಿಗರು ಎಂದಿಗೂ ಕ್ಷಮಿಸುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು, ಸಚಿವ ಸಂಪುಟ ವಿಸ್ತರಣೆಗಾಗಿ ಇಡೀ ಸರ್ಕಾರವೇ ದೆಹಲಿಗೆ ತೆರಳಿದೆ ಎಂಬ ಬಿಜೆಪಿ ಆರೋಪದಲ್ಲಿ ಯಾವುದೇ ಸತ್ಯವಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ಮುಖ್ಯಮಂತ್ರಿ ಮಾತ್ರ ದೆಹಲಿಗೆ ಹೋಗಿದ್ದರು. ಉಳಿದ ಎಲ್ಲಾ ಸಚಿವರು ಬೆಂಗಳೂರಿನಲ್ಲೇ ತಮ್ಮ ಇಲಾಖೆಗಳ ಕೆಲಸದಲ್ಲಿ ನಿರತರಾಗಿದ್ದಾರೆ. ಮುಖ್ಯಮಂತ್ರಿ ದೆಹಲಿಗೆ ತೆರಳಿದ್ದು ಸಚಿವ ಸಂಪುಟ ವಿಸ್ತರಣೆಗೆ ಮಾತ್ರವಲ್ಲ, ರಾಜ್ಯಕ್ಕೆ ಕೇಂದ್ರದಿಂದ ಹೆಚ್ಚಿನ ನೆರವು ದೊರಕಿಸುವ ಕುರಿತು ಎಲ್ಲಾ ಪಕ್ಷಗಳ ಸಂಸದರು ಹಾಗೂ ಕೇಂದ್ರ ಸಚಿವರೊಂದಿಗೆ ಸಭೆ ನಡೆಸಲು" ಎಂದು ಬಿಜೆಪಿ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com