

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರ ತ್ಯಾಗ ಮಾಡಿ ಬಿಜೆಪಿ ಸೇರಿದ್ದ ಸುಮಲತಾ ಅಂಬರೀಷ್ ಅವರು ಪ್ರತಿಫಲದ ನಿರೀಕ್ಷೆಯಲ್ಲಿದ್ದು, ಕರ್ನಾಟಕ ರಾಜ್ಯಸಭಾ ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ.
ಜೂನ್ 18 ರಂದು ನಡೆಯುವ ರಾಜ್ಯಸಭೆ ಚುನಾವಣೆಗೆ ಮಂಡ್ಯ ಲೋಕಸಭಾ ಕ್ಷೇತ್ರ ಬಿಟ್ಟು ಕೊಟ್ಟ ಸುಮಲತಾ ಅಂಬರೀಷ್ ಅವರಿಗೆ ಅವಕಾಶ ನೀಡಲು ಬಿಜೆಪಿ ಹೈಕಮಾಂಡ್ ಒಲವು ತೋರಿದೆ ಎಂದು ತಿಳಿದು ಬಂದಿದೆ.
ಕರ್ನಾಟಕದಿಂದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ ಕೇವಲ ಒಂದೇ ಸ್ಥಾನ ಮಾತ್ರ ದೊರೆಯಲಿದೆ. ಒಂದು ಸ್ಥಾನಕ್ಕೆ ದೋಸ್ತಿಗಳ ಮಧ್ಯೆ ಕುಸ್ತಿ ಶುರುವಾಗಿದೆ. ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರನ್ನೆ ಮುಂದುವರೆಸಬೇಕೆಂದು ಜೆಡಿಎಸ್ ಪಟ್ಟು ಹಿಡಿದಿದೆ. ಆದರೂ ಇನ್ನೂ ಖಚಿತತೆ ಸಿಕ್ಕಿಲ್ಲ. ಇನ್ನೊಂದೆಡೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಕಸರತ್ತು ನಡೆಸಿದೆ.
ರಾಜ್ಯ ಬಿಜೆಪಿ ಈಗಾಗಲೇ ಮಾಜಿ ಸಿಎಂ ಡಿವಿ ಸದಾನಂದಗೌಡ ಅವರ ಹೆಸರನ್ನ ರಾಜ್ಯಸಭೆಗೆ ಶಿಫಾರಸು ಮಾಡಿದೆ. ಅತ್ತ ರಾಜ್ಯಸಭೆ ಸೀಟು ಪಡೆಯಲು ಸುಮಲತಾ ಅಂಬರೀಷ್ ಅವರು ಸಹ ಪ್ರಯತ್ನ ಮಾಡುತ್ತಿದ್ದು, ಇದೇ ವೇಳೆ ಸುಮಲತಾಗೆ ಅವರ ಬಗ್ಗೆ ಬಿಜೆಪಿ ಹೈಕಮಾಂಡ್ ವಿವರಣೆ ಕೇಳಿದ್ದಾರೆ ಎಂದು ತಿಳಿದು ಬಂದಿದೆ.
ಬಿಜೆಪಿ ಹೈಕಮಾಂಡ್ ನ ಈ ನಡೆ, ರಾಜ್ಯಸಭೆಗೆ ಸುಮಲತಾ ಅಂಬರೀಷ್ ಅಚ್ಚರಿಯ ಆಯ್ಕೆಯಾಗುತ್ತಾರಾ ಎನ್ನುವುದೇ ಕುತೂಹಲ ಮೂಡಿಸಿದೆ.
ಸುಮಲತಾ ಅವರು ಕಳೆದ ಲೋಕಸಭಾ ಚುನಾವಣೆ ವೇಳೆ ಎಚ್ ಡಿ ಕುಮಾರಸ್ವಾಮಿ ಅವರಿಗೆ ಮಂಡ್ಯ ಕ್ಷೇತ್ರ ಬಿಟ್ಟುಕೊಟ್ಟು ಬಿಜೆಪಿ ಸೇರ್ಪಡೆಯಾಗಿದ್ದರು.
Advertisement