

ನವದೆಹಲಿ: ರಾಜ್ಯದಲ್ಲಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನೂತನ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬರಲು ಕ್ಷಣಗಣನೆ ಆರಂಭವಾಗಿದ್ದು, ದೆಹಲಿಯಲ್ಲಿ ಸಂಪುಟ ರಚನೆಯ ಕಸರತ್ತು ನಡೆಯುತ್ತಿದೆ.
ಕಾಂಗ್ರೆಸ್ ಹೈಕಮಾಂಡ್ ಇಂದು ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆ ಹಲವು ಸುತ್ತಿನ ಸಭೆ ನಡೆಸಿದ್ದು, ಡಿಕೆಶಿ ಜೊತೆ ಪ್ರಮಾಣವಚನ ಸ್ವೀಕರಿಸಲಿರುವ ಸಚಿವರ ಪಟ್ಟಿ ಬಹುತೇಕ ಅಂತಿಮವಾಗಿದೆ ಎನ್ನಲಾಗಿದೆ.
ರಾತ್ರಿ 9 ಗಂಟೆ ವೇಳೆಗೆ ಸಚಿವರ ಅಂತಿಮ ಪಟ್ಟಿ ಸಿದ್ಧವಾಗುವ ಸಾಧ್ಯತೆ ಇದ್ದು, ಡಿಕೆ ಶಿವಕುಮಾರ್ ಅವರು ಈಗಾಗಲೇ ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದಾರೆ.
ಡಿಕೆಶಿ ಸಂಪುಟದಲ್ಲಿ ಮೂರು ಅಥವಾ ನಾಲ್ಕು ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಇದೆ. ಡಾ. ಜಿ. ಪರಮೇಶ್ವರ, ಎಂಬಿ ಪಾಟೀಲ್ ಸೇರಿದಂತೆ ನಾಲ್ಕು ಜನ ಉಪಮುಖ್ಯಮಂತ್ರಿಗಳಾಗ್ತಾರೆ ಎಂಬ ಮಾತುಗಳು ಕೇಳಿ ಬರ್ತಿತ್ತು. ಆದರೆ ಡಿಸಿಎಂ ಸ್ಥಾನದ ಮೇಲೆ ಕಣ್ಣಿಟ್ಟವರಿಗೆ ಕಾಂಗ್ರೆಸ್ ಹೈಕಮಾಂಡ್ ಶಾಕ್ ನೀಡಿದ್ದು, ಕೇವಲ ಒಂದು ಡಿಸಿಎಂ ಸ್ಥಾನ ಸೃಷ್ಟಿಸಲು ನಿರ್ಧರಿಸಿದೆ.
ಡಿಸಿಎಂ ಹುದ್ದೆಗೆ ಭಾರಿ ಪೈಪೋಟಿ ಇರುವುದರಿಂದ ಡಿಸಿಎಂ ಹುದ್ದೆ ಸೃಷ್ಟಿಸುವುದೇ ಬೇಡ ಎಂದು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿತ್ತು. ಆದರೆ ಸಿದ್ದರಾಮಯ್ಯ ಅವರು, ಕನಿಷ್ಠ ಒಂದು ಡಿಸಿಎಂ ಹುದ್ದೆಯನ್ನು ಸೃಷ್ಟಿಸಬೇಕು ಮತ್ತು ಪರಮೇಶ್ವರ ಅವರನ್ನು ಡಿಸಿಎಂ ಮಾಡಬೇಕು ಎಂದು ಪಟ್ಟು ಹಿಡಿದಿದ್ದರು. ಪರಮೇಶ್ವರ ಅವರು 8 ವರ್ಷ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ ಮತ್ತು ಸಿಎಂ ಆಕಾಂಕ್ಷಿ ಸಹ ಆಗಿದ್ದರು. ದಲಿತ ಪ್ರಭಾವಿ ನಾಯಕರಾಗಿರುವ ಪರಮೇಶ್ವರ ಅವರಿಗೆ ಡಿಸಿಎಂ ಮಾಡಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಪರಮೇಶ್ವರ ಡಿಸಿಎಂ
ಸಿದ್ದರಾಮಯ್ಯ ಸಂಪುಟದಲ್ಲಿ ಗೃಹ ಸಚಿವರಾಗಿದ್ದ ಪರಮೇಶ್ವರ ಅವರು ಡಿಸಿಎಂ ಆಗುವುದು ಬಹತೇಕ ಖಚಿತವಾಗಿದೆ. ಪರಮೇಶ್ವರ ಅವರು ಶಿವಕುಮಾರ್ ಅವರು ಸಹ ಏಕೈಕ ಉಪಮುಖ್ಯಮಂತ್ರಿಯಾಗಲು ಒಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಾಳೆ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ, ಪರಮೇಶ್ವರ ಅವರು ಉಪ ಮುಖ್ಯಮಂತ್ರಿಯಾಗಿ ಹಾಗೂ ಇತರ 10 ರಿಂದ 12 ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
Advertisement