

ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರಿಗೆ ಎನ್ ಡಿಎ ಟಿಕೆಟ್ ನಿರಾಕರಿಸಿರುವುದನ್ನು ಅಸ್ತ್ರವಾಗಿಸಿಕೊಂಡಿರುವ ಕಾಂಗ್ರೆಸ್ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಕೇವಲ ಮಂತ್ರಿ ಕುರ್ಚಿಗೆ ಅಂಟಿಕೊಳ್ಳಲು ಕುಮಾರಸ್ವಾಮಿ ಅವರು ತಮ್ಮ ತಂದೆ, ಮಾಜಿ ಪ್ರಧಾನಿಗಳಿಗೆ ಆಗುತ್ತಿರುವ ನಿರಂತರ ಅಪಮಾನಗಳನ್ನು ಸಹಿಸಿಕೊಳ್ಳುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಭಾನುವಾರ ಮಧ್ಯರಾತ್ರಿ ಬಿಜೆಪಿ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರಿಗೆ ರಾಜ್ಯಸಭಾ ನಾಮನಿರ್ದೇಶನವನ್ನು ನಿರಾಕರಿಸಿದೆ. ಮಾಜಿ ಪ್ರಧಾನಿಗಿಂತ ಬಿಜೆಪಿಯ ಜಿಲ್ಲಾ ಮಟ್ಟದ ಕಟ್ಟಡ ನಿರ್ಮಾಣ ಉಸ್ತುವಾರಿಯಾಗಿದ್ದ ರಾಜ್ಯ ಉಪಾಧ್ಯಕ್ಷ ಎಂ. ನಾಗರಾಜ ಅವರಿಗೆ ಮಣೆ ಹಾಕಲಾಗಿದೆ.
ಯಾವುದೇ ಬೆಲೆ ತೆತ್ತಾದರೂ ಸಚಿವ ಸ್ಥಾನ ಉಳಿಸಿಕೊಳ್ಳಬೇಕು ಎಂಬ ಒಂದೇ ಕಾರಣಕ್ಕೆ ಬಿಜೆಪಿ ನಾಯಕರು ಜೆಡಿಎಸ್‌ಗೆ ಮಾಡುತ್ತಿರುವ ನಿರಂತರ ಅವಮಾನಗಳನ್ನು ಕುಮಾರಸ್ವಾಮಿ ಸಹಿಸಿಕೊಳ್ಳುತ್ತಿರುವುದು ಅತ್ಯಂತ ಆಶ್ಚರ್ಯಕರ ಎಂದು ಟೀಕಿಸಿದ್ದಾರೆ.
2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ಜಿ.ಎಸ್. ಬಸವರಾಜು ಅವರು ದೇವೇಗೌಡರನ್ನು ಸೋಲಿಸಿದ್ದರು. ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ, ಕರ್ನಾಟಕದ ಮಾಜಿ ಪ್ರಧಾನಿ ಎಂಬ ಗೌರವ ನೀಡಿ ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷವು ದೇವೇಗೌಡರನ್ನು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ ಮಾಡಲು ಬೆಂಬಲ ನೀಡಿತ್ತು ಎಂದು ಸುರ್ಜೇವಾಲ ನೆನಪಿಸಿದ್ದಾರೆ.
ಕುಮಾರಸ್ವಾಮಿ ಏನಾದರೂ ಬಿಜೆಪಿಯೊಂದಿಗೆ ಕೈಜೋಡಿಸಿದರೆ ನಾನು ಅವರನ್ನು ನನ್ನ ಮಗನೆಂದು ಒಪ್ಪುವುದಿಲ್ಲ, ತ್ಯಜಿಸುತ್ತೇನೆ ಎಂದು ಸ್ವತಃ ದೇವೇಗೌಡರೇ ಈ ಹಿಂದೆ ಸಾರ್ವಜನಿಕವಾಗಿ ಹೇಳಿದ್ದರು. ಈ ಎಲ್ಲಾ ಹೇಳಿಕೆಗಳನ್ನು ಗಾಳಿಗೆ ತೂರಿ ಅಕ್ಟೋಬರ್ 2023ರಲ್ಲಿ ಜೆಡಿಎಸ್ ಮತ್ತು ಕುಮಾರಸ್ವಾಮಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಮೋದಿ ಸರ್ಕಾರದಲ್ಲಿ ಬೃಹತ್ ಕೈಗಾರಿಕೆ ಸಚಿವರಾದರು ಎಂಬುದನ್ನು ಸುರ್ಜೇವಾಲ ನೆನಪಿಸಿದ್ದಾರೆ.
ಇದೀಗ 2026 ರ ಜೂನ್ 7 ರಂದು ಅದೇ ಬಿಜೆಪಿ ಮಾಜಿ ಪ್ರಧಾನಿಗೆ ರಾಜ್ಯಸಭಾ ಟಿಕೆಟ್ ನಿರಾಕರಿಸಿ ಪಕ್ಷದ ಸಾಮಾನ್ಯ ನಾಯಕನಿಗೆ ಮಣೆ ಹಾಕಿದೆ. ಯಾವ ಬೆಲೆ ತೆತ್ತಾದರೂ ಸರಿ, ಯಾವುದೇ ಪರಿಸ್ಥಿತಿಯಲ್ಲಾದರೂ ಸರಿ, ಅಧಿಕಾರ ಹಿಡಿಯುವುದು ಮತ್ತು ಕುರ್ಚಿ ಉಳಿಸಿಕೊಳ್ಳುವುದು ಮಾತ್ರವೇ ಸದ್ಯ ಕರ್ನಾಟಕದಲ್ಲಿ ಜೆಡಿಎಸ್‌ನ ಏಕೈಕ ಮೂಲಮಂತ್ರ ಮತ್ತು ಸಿದ್ಧಾಂತವಾಗಿದೆ ಎಂಬುದು ಈ ಬೆಳವಣಿಗೆಯಿಂದ ಸಾಬೀತಾಗಿದೆ ಎಂದು ಸುರ್ಜೇವಾಲಾ ವ್ಯಂಗ್ಯವಾಡಿದ್ದಾರೆ.
Advertisement