

ಬೆಂಗಳೂರು: ಮುಖ್ಯಮಂತ್ರಿ ಸ್ಥಾನದ ಪ್ರಬಲ ಅಕಾಂಕ್ಷಿಯಾಗಿದ್ದ ಕಾಂಗ್ರೆಸ್ನ ನಿಷ್ಠಾವಂತ ಹಿರಿಯ ನಾಯಕ ಜಿ ಪರಮೇಶ್ವರ ಅವರಿಗೆ ಸತತ ಪ್ರಯತ್ನದ ಹೊರತಾಗಿಯೂ ಈ ಬಾರಿಯೂ ಸಿಎಂ ಸ್ಥಾನ ಕೈ ತಪ್ಪಿದೆ. ಹೀಗಾಗಿ ಇತ್ತೀಚಿಗೆ ತಮಗೆ ಮೂರು ಬಾರಿ ಸಿಎಂ ಸ್ಥಾನ ಕೈತಪ್ಪಿತು ಎಂದು ಪರಮೇಶ್ವರ ಅವರು ಬೇಸರ ಹೊರ ಹಾಕಿದ್ದರು.
ಉಪ ಮುಖ್ಯಮಂತ್ರಿ ಪರಮೇಶ್ವರ ಅವರ ಹೇಳಿಕೆಗೆ ಶುಕ್ರವಾರ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ಪರಮೇಶ್ವರ ಅವರಿಗೆ ಸಿಎಂ ಸ್ಥಾನ ಕೈತಪ್ಪಲು ಅವರದೇ ಪಕ್ಷದವರಾದ ಕಾಂಗ್ರೆಸ್ಸಿಗರೇ ನೇರ ಕಾರಣ ಎಂದರು.
ಈ ಬಗ್ಗೆ ಪರಮೇಶ್ವರ ಅವರು ನಮ್ಮನ್ನು ಕೇಳುವ ಬದಲು ಮೊದಲು ತಮ್ಮದೇ ಪಕ್ಷದವರ ಜೊತೆ ಕೂತು ಚರ್ಚೆ ಮಾಡಲಿ. ಅಂದು ಅವರು ನನ್ನ ಜೊತೆ ಬಂದಾಗ ನಾನು, ಸಿಎಂ ಆಗಬೇಡಿ ಅಂತಾ ಹೇಳಿದ್ನಾ? ನೀವೇ ಮುಖ್ಯಮಂತ್ರಿಯಾಗಿ ಎಂದು ನಾನೇ ಖುದ್ದಾಗಿ ಹೇಳಿದ್ದೆ. ನೀವೇ ಸಿಎಂ ಆಗಿ ಎಂದಾಗಲೂ ಅವರು ಆಗಲಿಲ್ಲವಲ್ಲ ಎಂದು ಟಾಂಗ್ ನೀಡಿದ್ದಾರೆ.
2018ರಲ್ಲಿ ಕಾಂಗ್ರೆಸ್ 80 ಸ್ಥಾನ ಗೆದ್ದರೂ ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಅವರು ಸಿಎಂ ಆದರು. ಅವತ್ತು ನನ್ನನ್ನೂ ಮುಖ್ಯಮಂತ್ರಿ ಮಾಡಬಹುದಿತ್ತು. ಆದರೆ ಅವಕಾಶ ಸಿಗಲಿಲ್ಲ. 2026ರಲ್ಲೂ ಸಿಎಂ ಹುದ್ದೆ ನಿರೀಕ್ಷೆ ಇತ್ತು. ಆದ್ರೆ ರಾಜಕೀಯ ಕಾರಣಗಳಿಂದ ಸಾಧ್ಯವಾಗಲಿಲ್ಲ ಎಂದು ಡಿಸಿಎಂ ಪರಮೇಶ್ವರ ಇತ್ತೀಚಿಗೆ ಬೇಸರ ಹೊರಹಾಕಿದ್ದರು.
Advertisement