

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಪಕ್ಷ, ಪಕ್ಷದ ನಾಯಕತ್ವ, ವಿಶೇಷವಾಗಿ ಸೋನಿಯಾ ಗಾಂಧಿ ಮತ್ತು ಕರ್ನಾಟಕದ ಜನರಿಗೆ ಶುಕ್ರವಾರ ಧನ್ಯವಾದ ಅರ್ಪಿಸಿದ್ದಾರೆ. ಅಲ್ಲದೆ ಇದು ಅವರ ರಾಜಕೀಯ ಜೀವನದ 13ನೇ ಚುನಾವಣೆಯಾಗಿದ್ದು, ಇದೇ ಕೊನೆಯ ಅವಧಿ ಆಗಬಹುದು ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಶಾಸಕರಾಗಿ ಮತ್ತು ಲೋಕಸಭಾ ಸದಸ್ಯರಾಗಿ ಹಲವು ಬಾರಿ ಆಯ್ಕೆಯಾಗಿ ಸೇವೆ ಸಲ್ಲಿಸಿರುವ 83 ವರ್ಷದ ಹಿರಿಯ ನಾಯಕ ಖರ್ಗೆ ಅವರಿಗೆ ಇದು ಎರಡನೇ ರಾಜ್ಯಸಭಾ ಅವಧಿಯಾಗಿದೆ.
ರಾಜ್ಯಸಭೆಗೆ ಮಲ್ಲಿಕಾರ್ಜುನ ಖರ್ಗೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದು, ಚುನಾವಣಾಧಿಕಾರಿಯಿಂದ ಆಯ್ಕೆ ಪ್ರಮಾಣ ಪತ್ರವನ್ನು ಸ್ವೀಕರಿಸಿದರು. ಪ್ರಮಾಣ ಪತ್ರ ಸ್ವೀಕರಿಸುವ ವೇಳೆ ಇದು ನನ್ನ ಕೊನೆಯ ಪ್ರಮಾಣಪತ್ರ ಸ್ವೀಕಾರ ಆಗಬಹುದು ಎಂದರು.
ಇದೇ ವೇಳೆ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡಿರುವುದಕ್ಕೆ ಆಡಳಿತಾರೂಢ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಖರ್ಗೆ, ಈ ಕ್ರಮವನ್ನು "ಕಾನೂನುಬಾಹಿರ, ಅನೈತಿಕ ಮತ್ತು ಪ್ರಜಾಪ್ರಭುತ್ವ ವಿರೋಧಿ" ಎಂದು ಟೀಕಿಸಿದರು.
ಕಾಂಗ್ರೆಸ್ ಪಕ್ಷವನ್ನು "ಮುಗಿಸುವ" ಪಿತೂರಿಯ ಭಾಗವಾಗಿ ಮೋದಿ ಉದ್ದೇಶಪೂರ್ವಕವಾಗಿ ಇದನ್ನು ಮಾಡುತ್ತಿದ್ದಾರೆ ಎಂದು ಖರ್ಗೆ ಆರೋಪಿಸಿದರು.
"ನಾನು ನಿಜಕ್ಕೂ ಅದೃಷ್ಟಶಾಲಿ. ಇದು ನನ್ನ 13ನೇ ಚುನಾವಣೆ ಮತ್ತು ಕಾಂಗ್ರೆಸ್ ಪಕ್ಷವು ಜನರಿಗೆ ಸೇವೆ ಸಲ್ಲಿಸಲು ಅವಕಾಶ ನೀಡಿದೆ. ನಾನು ಸೋನಿಯಾ ಗಾಂಧಿಯವರಿಗೂ ಕೃತಜ್ಞನಾಗಿದ್ದೇನೆ. ಅವರು ಜನ ಸೇವೆ ಸಲ್ಲಿಸಲು ನನಗೆ ಅವಕಾಶ ನೀಡಿದ್ದಾರೆ. ನನ್ನ ಪಕ್ಷ ಮತ್ತು ಜನರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ದೀರ್ಘಕಾಲ ಸೇವೆ ಸಲ್ಲಿಸಿದ ಸಾರ್ವಜನಿಕ ಪ್ರತಿನಿಧಿಯಾಗಿ ಉಳಿಯಲು ನನಗೆ ಸಹಕರಿಸಿದ ಕರ್ನಾಟಕದ ಜನರಿಗೆ ಮತ್ತು ನನ್ನ ಪಕ್ಷದ ಜನರಿಗೆ ಮತ್ತು ನಿಮ್ಮೆಲ್ಲರಿಗೂ (ಮಾಧ್ಯಮ) ನಾನು ಕೃತಜ್ಞನಾಗಿದ್ದೇನೆ" ಎಂದು ಹೇಳಿದರು.
ಮಧ್ಯಪ್ರದೇಶದಿಂದ ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ತಿರಸ್ಕೃತಗೊಂಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ, ಎಐಸಿಸಿ ಅಧ್ಯಕ್ಷ, ಪಕ್ಷವು ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಪಾಲಿಸುವುದಾಗಿ ಹೇಳಿದರು.
"ಸುಪ್ರೀಂ ಕೋರ್ಟ್ ಪ್ರಕಾರ, ಚುನಾವಣಾ ಆಯೋಗದ ಮುಂದೆ ಮೊದಲ ಮೇಲ್ಮನವಿ, ನಂತರ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್. ಆದರೆ ಇದು ವಿಶೇಷ ಪ್ರಕರಣವಾಗಿದೆ. ಈ ಪ್ರಕರಣದಲ್ಲಿ ತೆಗೆದುಕೊಳ್ಳುವ ಸಮಯವನ್ನು ಪರಿಗಣಿಸಿ ಸುಪ್ರೀಂ ಕೋರ್ಟ್ ಪರಿಹಾರ ನೀಡಬೇಕೆಂದು ನಾವು ಬಯಸಿದ್ದೇವೆ. ಈಗ ನಾವು ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಅನುಸರಿಸಿ ಹೈಕೋರ್ಟ್‌ಗೆ ಹೋಗುತ್ತೇವೆ" ಎಂದು ಅವರು ಹೇಳಿದರು.
ನಟರಾಜನ್ ಅವರ ನಾಮಪತ್ರ ತಿರಸ್ಕೃತಗೊಂಡಿರುವುದು "ಕಾನೂನುಬಾಹಿರ, ಅನೈತಿಕ ಮತ್ತು ಪ್ರಜಾಪ್ರಭುತ್ವ ವಿರೋಧಿ" ಎಂದು ಟೀಕಿಸಿದ ಖರ್ಗೆ, "ಪ್ರಧಾನಿ ಮೋದಿಯವರ ನಿರ್ದೇಶನವಿಲ್ಲದೆ ಇದು ನಡೆಯಲು ಸಾಧ್ಯವಿಲ್ಲ. ಇದು ತುಂಬಾ ದೊಡ್ಡ ವಿಷಯ. ಕಾಂಗ್ರೆಸ್ ಪಕ್ಷ, ಪ್ರಜಾಪ್ರಭುತ್ವವನ್ನು ಮುಗಿಸುವ ಪಿತೂರಿಯ ಭಾಗವಾಗಿ ಮೋದಿ ಇದನ್ನು ಉದ್ದೇಶಪೂರ್ವಕವಾಗಿ ಮಾಡುತ್ತಿದ್ದಾರೆ. ಅವರು ತಮ್ಮ ಜನರು ಎಲ್ಲೆಡೆ ಇರುವುದನ್ನು ಖಚಿತಪಡಿಸಿಕೊಂಡಿದ್ದಾರೆ. ಅವರನ್ನು ಇಷ್ಟಪಡುವ ಜನರನ್ನು ರಿಟರ್ನಿಂಗ್ ಅಧಿಕಾರಿಗಳನ್ನಾಗಿ ಮಾಡಲಾಗುತ್ತದೆ ಮತ್ತು ಅವರನ್ನು ಅಂತಹ ಕೆಲಸಗಳನ್ನು (ವಿರೋಧ ಪಕ್ಷದ ಅಭ್ಯರ್ಥಿಗಳ ನಾಮಪತ್ರಗಳನ್ನು ತಿರಸ್ಕರಿಸುವುದು) ಮಾಡುವಂತೆ ಮಾಡಲಾಗುತ್ತದೆ" ಎಂದು ಅವರು ಆರೋಪಿಸಿದರು.
ಇತ್ತೀಚೆಗೆ ಜಾರ್ಖಂಡ್‌ನಲ್ಲೂ ಇದೇ ರೀತಿಯ ರಾಜಕೀಯ ಹೈಡ್ರಾಮಾ ನಡೆದಿತ್ತು ಎಂದ ಅವರು, ಚುನಾವಣೆಗಳಲ್ಲಿ ಮತ ಖರೀದಿ ಮಾಡುವುದು, ಪಕ್ಷಗಳನ್ನು ವಿಭಜಿಸುವುದು ಮತ್ತು ತಮ್ಮದೇ ಏಜೆಂಟರನ್ನು ಇರಿಸುವುದು ಬಿಜೆಪಿಗೆ ಅಭ್ಯಾಸವಾಗಿದೆ ಎಂದರು.
ಆರ್‌ಎಸ್‌ಎಸ್ ನಿಯಂತ್ರಣದಲ್ಲಿದೆ ವ್ಯವಸ್ಥೆ
ಪ್ರಜಾಪ್ರಭುತ್ವದ ಯಾವುದೇ ಪ್ರಕ್ರಿಯೆಯಲ್ಲಾಗಲಿ ಇಂತಹ ರಾಜಕೀಯ ಹಸ್ತಕ್ಷೇಪ ಇರಬಾರದು. ಆದರೆ ಇಂದು ದೇಶದ ಎಲ್ಲಾ ಪ್ರಮುಖ ರಂಗಗಳಲ್ಲಿ, ಇಲಾಖೆಗಳಲ್ಲಿ ಆರ್‌ಎಸ್‌ಎಸ್ ಏಜೆಂಟ್‌ಗಳನ್ನು ತಂದು ಇರಿಸಲಾಗಿದೆ. ದುರಂತವೆಂದರೆ ಪ್ರಸ್ತುತ ಜಾರಿಯಲ್ಲಿರುವ ನಿಯಮಗಳನ್ನು ಸರಿಯಾಗಿ ಪರಿಶೀಲಿಸಲು ಯಾರೂ ಸಿದ್ಧರಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
Advertisement