ವಿಧಾನ ಪರಿಷತ್ ಚುನಾವಣೆ: ಯಾವುದೇ ತಂತ್ರ ರೂಪಿಸಿಲ್ಲ, ಅಡ್ಡ ಮತದಾನ ಬಗ್ಗೆ ಮಾಹಿತಿ ಇಲ್ಲ: ಡಿಕೆ ಶಿವಕುಮಾರ್

ಇದು ರಹಸ್ಯ ಮತದಾನ. ಇತರ ಪಕ್ಷಗಳಲ್ಲಿ ಏನಾಯಿತು ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ. ನಮ್ಮ ಪಕ್ಷದ ಒಂದೇ ಒಂದು ಮತವೂ ತಿರಸ್ಕೃತವಾಗದಂತೆ ನೋಡಿಕೊಳ್ಳಲು ಶಾಸಕರಿಗೆ ರೆಸಾರ್ಟ್‌ನಲ್ಲಿ ತರಬೇತಿ ನೀಡಿದ್ದೆವು. ಅದನ್ನು ಬಿಟ್ಟರೆ ಯಾವುದೇ ತಂತ್ರ ರೂಪಿಸಿಲ್ಲ.
Chief Minister DK Shivakumar
ಮುಖ್ಯಮಂತ್ರಿ ಡಿಕೆ ಶಿವಕುಮಾರ್
Updated on

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ನಡೆದಿರುವ ಆರೋಪಗಳನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗುರುವಾರ ನಿರಾಕರಿಸಿದ್ದು, ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗಾಗಿ ಯಾವುದೇ ತಂತ್ರ ರೂಪಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವನ್ನು ಖಚಿತಪಡಿಸಿಕೊಳ್ಳಲು ಯಾವುದೇ ಪಿತೂರಿ ನಡೆಸಿಲ್ಲ, ಒಂದೇ ಒಂದು ಮತವೂ ತಿರಸ್ಕೃತವಾಗದಂತೆ ನೋಡಿಕೊಳ್ಳಲು ಪಕ್ಷದ ಶಾಸಕರಿಗೆ ರೆಸಾರ್ಟ್‌ನಲ್ಲಿ ತರಬೇತಿ ನೀಡಲಾಗಿತ್ತು ಎಂದು ಹೇಳಿದ್ದಾರೆ.

ಇದು ರಹಸ್ಯ ಮತದಾನ. ಇತರ ಪಕ್ಷಗಳಲ್ಲಿ ಏನಾಯಿತು ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ. ನಮ್ಮ ಪಕ್ಷದ ಒಂದೇ ಒಂದು ಮತವೂ ತಿರಸ್ಕೃತವಾಗದಂತೆ ನೋಡಿಕೊಳ್ಳಲು ಶಾಸಕರಿಗೆ ರೆಸಾರ್ಟ್‌ನಲ್ಲಿ ತರಬೇತಿ ನೀಡಿದ್ದೆವು. ಅದನ್ನು ಬಿಟ್ಟರೆ ಯಾವುದೇ ತಂತ್ರ ರೂಪಿಸಿಲ್ಲ ಎಂದು ತಿಳಿಸಿದರು.

ಮತದಾನದ ಮುನ್ನ ಕುದುರೆ ವ್ಯಾಪಾರ ನಡೆದಿದೆ ಎಂಬ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಅದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನಮ್ಮ ಅಭ್ಯರ್ಥಿಗಳಿಗೆ ಯಾರು ಮತ ಹಾಕಿದರು ಎಂಬುದೂ ನನಗೆ ಗೊತ್ತಿಲ್ಲ. ಇದು ರಹಸ್ಯ ಮತದಾನವಾಗಿದ್ದರಿಂದ ಯಾರು ಅಡ್ಡ ಮತದಾನ ಮಾಡಿದರು ಎಂಬುದನ್ನು ಯಾರೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ನಾನು ಬೇರೆ ಪಕ್ಷಗಳ ಶಾಸಕರನ್ನು ಸಂಪರ್ಕಿಸಿ ಮತ ಕೇಳಿಲ್ಲ ಎಂದರು.

ಇದೇ ವೇಳೆ ಕಾಂಗ್ರೆಸ್‌ಗೆ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಉಚ್ಚಾಟನೆಗೊಂಡಿದ್ದ ಎಸ್.ಟಿ. ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಅವರನ್ನು ಸಮರ್ಥಿಸಿಕೊಂಡ ಶಿವಕುಮಾರ್, “ಬಿಜೆಪಿಯೇ ಅವರನ್ನು ಪಕ್ಷದಿಂದ ಹೊರಹಾಕಿತ್ತು. ನಾವು ಅದನ್ನು ನಮ್ಮ ಲಾಭಕ್ಕೆ ಬಳಸಿಕೊಂಡಿದ್ದೇವೆ. ಅವರಿಗೆ ಸರಿಯಾದ ದಾರಿ ತೋರಿಸಿದ್ದೇವೆ ಅಷ್ಟೇ” ಎಂದು ಹೇಳಿದರು.

Chief Minister DK Shivakumar
ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಪ್ರಮಾಣ ವಚನ: ಗದಗ ಅಭಿಮಾನಿಯಿಂದ ಗ್ರಾಮಸ್ಥರಿಗೆ ಭರ್ಜರಿ ಬಾಡೂಟ!

ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು, ವಿಶೇಷವಾಗಿ ಐದನೇ ಅಭ್ಯರ್ಥಿ ವಿನಯ್ ಕಾರ್ತಿಕ್ ಅವರ ಜಯದಿಂದ ಶಿವಕುಮಾರ್ ಉತ್ಸಾಹಭರಿತರಾಗಿ ಕಾಣಿಸಿಕೊಂಡರು.

ಸುದ್ದಿಗಾರರೊಂದಿಗೆ ಮಾತನಾಡಿದ ಬಳಿಕ ಅವರು ತಿರುಪತಿಗೆ ತೆರಳಿ ತಮ್ಮ ಹರಕೆಯನ್ನು ತೀರಿಸಲು ಪ್ರಯಾಣ ಬೆಳೆಸಿದರು. ಮುಖ್ಯಮಂತ್ರಿ ಆದ ಬಳಿಕ ಅವರಿಗೆ ದೊರೆತ ಮೊದಲ ಚುನಾವಣಾ ಗೆಲುವು ಇದಾಗಿದೆ.

ಇನ್ನೊಂದೆಡೆ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು, ಈ ಗೆಲುವು ರಾಜ್ಯ ಸರ್ಕಾರದ “ಉತ್ತಮ ಆಡಳಿತಕ್ಕೆ ದೊರೆತ ಜನಪ್ರತಿನಿಧಿಗಳ ಮನ್ನಣೆ” ಎಂದು ಬಣ್ಣಿಸಿದರು.

“ಕಳೆದ ಮೂರು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿದ ಅತ್ಯುತ್ತಮ ಕೆಲಸಗಳಿಗೆ ರಾಜ್ಯದ ಶಾಸಕರು ಮನ್ನಣೆ ನೀಡಿದ್ದಾರೆ. ತಮ್ಮ ಪಕ್ಷದ ಬದ್ಧತೆಯನ್ನು ಮೀರಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬೆಂಬಲ ಸೂಚಿಸುವ ರೀತಿಯಲ್ಲಿ ಈ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ” ಎಂದು ಹೇಳಿದರು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com