

ಬೆಂಗಳೂರು: ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನದ ಮೂಲಕ ಪಕ್ಷಕ್ಕೆ ಹಾಗೂ ಮೈತ್ರಿಗೆ ದ್ರೋಹ ಬಗೆದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ ಮತ್ತು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ನಿನ್ನೆ ನಡೆದ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಆರೇಳು ಜನ ಹಾಗೂ ಬಿಜೆಪಿಯಿಂದ ನಾಲ್ಕೈದು ಜನ ಅಡ್ಡ ಮತದಾನ ಮಾಡಿದ್ದಾರೆ. ಈ ಘಟನೆ ನಿಜಕ್ಕೂ ಆಗಬಾರದಿತ್ತು, ದುರಾದೃಷ್ಟವಶಾತ್ ನಡೆದುಹೋಗಿದೆ. ಯಾರ್ಯಾರು ಬೆನ್ನಿಗೆ ಇರಿದು ಆಟ ಆಡಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿ ಸದ್ಯ ನಮ್ಮ ಬಳಿ ಇದೆ. ಇವತ್ತು ಅಥವಾ ನಾಳೆಯೊಳಗೆ ಇದರ ಸಂಪೂರ್ಣ ಚಿತ್ರಣ ನಮಗೆ ಸಿಗಲಿದೆ, ಇದನ್ನು ಗೌಪ್ಯವಾಗಿ ಇಡುವುದಿಲ್ಲ, ಶೀಘ್ರದಲ್ಲೇ ಹೈಕಮಾಂಡ್ ನಾಯಕರಿಗೆ ಈ ಪಟ್ಟಿಯನ್ನು ಸಲ್ಲಿಸಿ ಮುಂದಿನ ಕ್ರಮಕ್ಕೆ ಶಿಫಾರಸು ಮಾಡುತ್ತೇನೆ ಎಂದು ತಿಳಿಸಿದರು.
ಮೈತ್ರಿ ಪಕ್ಷದ ಅಭ್ಯರ್ಥಿಯ ಸೋಲಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿರುವ ಅವರು, ಇದು ಹೆತ್ತ ತಾಯಿಗೆ ಮಾಡಿದ ಮೋಸ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಪಕ್ಷದ ಚಿಹ್ನೆಯಿಂದ ಗೆದ್ದು ಬಂದು ಪಕ್ಷಕ್ಕೆ ದ್ರೋಹ ಬಗೆದವರ ವಿರುದ್ಧ ವಾಗ್ದಾಳಿ ನಡೆಸಿದ ವಿಜಯೇಂದ್ರ, ಬಿಜೆಪಿ ಚಿಹ್ನೆಯಡಿ ಗೆದ್ದವರು ಪಕ್ಷಕ್ಕೆ ಹೀಗೆ ಅನ್ಯಾಯ ಮಾಡುವುದನ್ನು ಕ್ಷಮಿಸಲು ಸಾಧ್ಯವೇ ಇಲ್ಲ. ಇದು ಹೆತ್ತ ತಾಯಿಗೆ ಮೋಸ ಮಾಡಿದಂತೆ. ಇಂತಹವರನ್ನು ಕ್ಷಮಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಗುಡುಗಿದ್ದಾರೆ.
ಈ ಕ್ರಾಸ್ ವೋಟಿಂಗ್‌ನಿಂದಾಗಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ತೀವ್ರ ಬೇಸರ ಮತ್ತು ನೋವಾಗಿದೆ. ನಮಗೂ ಕೂಡ ಅಷ್ಟೇ ನೋವುಂಟಾಗಿದೆ. ನಾವಿಬ್ಬರೂ ಈ ರಾಜಕೀಯ ದ್ರೋಹವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದೇವೆ, ನಮ್ಮ ಮೈತ್ರಿ ಅಭ್ಯರ್ಥಿ ಸೋಲುಂಡಿರುವುದು ನಮಗೆ ಅತೀವ ಬೇಸರ ತಂದಿದೆ. ನಾನೇ ಖುದ್ದಾಗಿ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿ, ನೀವೇ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಎಂದು ಹೇಳಿದ್ದೆ. ಈಗ ನಮ್ಮವರೇ ಬೆನ್ನಿಗೆ ಇರಿದಿರುವುದರಿಂದ ಕುಮಾರಸ್ವಾಮಿ ಅವರಿಗೆ ಖಂಡಿತವಾಗಿಯೂ ಬೇಸರ ಇರುತ್ತದೆ. ಅವರ ಬೇಸರ ನ್ಯಾಯಯುತವಾಗಿದೆ ಎಂದರು.
Advertisement